ಬೆಂಗಳೂರು: ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ವತಿಯಿಂದ ರಾಜ್ಯಾದ್ಯಂತ ನೂತನ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ನ ರಾಷ್ಟ್ರೀಯ ಉಪಾಧ್ಯಕ್ಷರಾದ ಮೊಹಮ್ಮದ್ ಉಬೈದುಲ್ಲಾ ಷರೀಫ್ ತಿಳಿಸಿದರು.
ಬುಧವಾರ ನಾಗವಾರ ಮುಖ್ಯ ರಸ್ತೆಯಲ್ಲಿರುವ ಅರೇಬಿಕ್ ಕಾಲೇಜಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಿಲ್ಲಿ ಕೌನ್ಸಿಲ್ ರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಸಂಘಟನೆಯಾಗಿದ್ದು, ಸಮಾಜದ ಎಲ್ಲ ವರ್ಗದ ಜನರಿಗೆ ಸ್ಪಂದಿಸುವ ನಿಟ್ಟಿನಲ್ಲಿ ವಿಶೇಷ ಸದಸ್ಯತ್ವ ಅಭಿಯಾನವನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.
ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ 1992ರಲ್ಲಿ ಮೈಸೂರಿನಲ್ಲಿ ದೇಶದ ನಾನಾ ಭಾಗಗಳಿಂದ ಆಗಮಿಸಿದ್ದ ಧರ್ಮ ಗುರುಗಳು, ಪ್ರಮುಖ ವ್ಯಕ್ತಿಗಳ ಸಮ್ಮುಖದಲ್ಲಿ ಸ್ಥಾಪನೆಯಾಯಿತು. ಕರ್ನಾಟಕದ ದರೂಲ್ ಉಲೂಮ್ ಸಬೀಲುರ್ ರಾಶದ್ ಸೇರಿದಂತೆ ಹಲವು ಸಂಸ್ಥೆಗಳ ಪ್ರಮುಖರಾದ ಮೌಲಾನಾ ಮುಫ್ತಿ ಅಶ್ರಫ್ ಅಲಿ ಸಾಹೇಬ್, ರಹಮಾನ್ ಖಾನ್, ಅಜೀಜ್ ಶೇಟ್ ಮುಂತಾದ ದಿಗ್ಗಜರು ಈ ಕೌನ್ಸಿಲ್ನಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡರು. ಪ್ರಸ್ತುತ ಕರ್ನಾಟಕದ ಪ್ರತಿಯೊಂದು ಜಿಲ್ಲೆ ಹಾಗೂ ತಾಲೂಕುಗಳಲ್ಲೂ ಇದರ ಸಮಿತಿಗಳು ಅಸ್ತಿತ್ವದಲ್ಲಿವೆ ಎಂದು ಮಾಹಿತಿ ನೀಡಿದರು.
ಹಿಂದೆ ಮಿಲ್ಲಿ ಕೌನ್ಸಿಲ್ನ ಸದಸ್ಯತ್ವವು ಸೀಮಿತವಾಗಿತ್ತು. ಆದರೆ ಈಗ ಪ್ರತಿಯೊಬ್ಬ ನಾಗರಿಕರು, ಯುವಕರು ಹಾಗೂ ಮಹಿಳೆಯರು ಈ ಸಂಘಟನೆಯೊಂದಿಗೆ ಕೈಜೋಡಿಸಬೇಕು ಮತ್ತು ಸದಸ್ಯತ್ವ ಪಡೆಯಬೇಕು ಎಂಬ ಉದ್ದೇಶದಿಂದ ಇದನ್ನು ಎಲ್ಲರಿಗೂ ಮುಕ್ತಗೊಳಿಸಲಾಗಿದೆ. ಎರಡು ವರ್ಷಗಳ ಅವಧಿಯ ಸದಸ್ಯತ್ವಕ್ಕೆ ಐನೂರು ರೂಪಾಯಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಇನ್ನು ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೊಡಗು ಸೇರಿದಂತೆ ವಿವಿಧ ಕಡೆಗಳಲ್ಲಿ ನಡೆದ ಸಂಘರ್ಷದ ವೇಳೆ ಕೌನ್ಸಿಲ್ನ ನಿಯೋಗವು ತೆರಳಿ ಸರ್ಕಾರದ ಗಮನಕ್ಕೆ ತಂದಾಗ ಉತ್ತಮ ಸ್ಪಂದನೆ ದೊರೆತಿತ್ತು. ಈ ರೀತಿಯಲ್ಲಿ ಸಮಾಜದಲ್ಲಿ ಯಾವುದೇ ಸಮುದಾಯದ ಸಮಸ್ಯೆಗಳಿದ್ದರೂ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವಲ್ಲಿ ಸಂಸ್ಥೆ ಮುಂದೆಯೂ ಮುಂಚೂಣಿಯಲ್ಲಿರಲಿದೆ ಎಂದು ಹೇಳಿದರು.
ಕೌನ್ಸಿಲ್ನ ಮುಖ್ಯ ಪೋಷಕರಾದ ಸೈಯದ್ ಅಶ್ರಫ್ ಮಾತನಾಡಿ, ಸಂಸ್ಥೆ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಧರ್ಮ, ಜಾತಿ ಸೇರಿದಂತೆ ಯಾವುದೇ ಭೇದವಿಲ್ಲದೆ ಎಲ್ಲಾ ಕಮ್ಯುನಿಟಿಗಳ ಬಡವರಿಗೆ ಸೇವೆ ಸಲ್ಲಿಸುತ್ತಿದೆ. ಕೋವಿಡ್ ಮಹಾಮಾರಿಯಂತಹ ಕಷ್ಟದ ಕಾಲದಲ್ಲಿಯೂ ಮಿಲ್ಲಿ ಕೌನ್ಸಿಲ್ನ ಸ್ವಯಂಸೇವಕರು ಮುಂಚೂಣಿಯಲ್ಲಿ ನಿಂತು ಸೇವೆ ಸಲ್ಲಿಸಿದ್ದಾರೆ. ವಾರಸುದಾರರಿಲ್ಲದ ಮೃತದೇಹಗಳನ್ನು ಹಿಂದೂ, ಮುಸ್ಲಿಂ, ಸಿಖ್ ಎಂಬ ಭೇದಭಾವವನ್ನು ತೋರದೆ ಆಯಾ ಧರ್ಮದ ಸಂಪ್ರದಾಯದಂತೆ ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡುವ ಕಾರ್ಯವನ್ನು ಮಾಡುತ್ತಿದೆ. ಇದರೊಂದಿಗೆ ಬಡವರಿಗೆ ಮಾಸಿಕ ರೇಷನ್ ವಿತರಣೆ, ಉಚಿತ ಆರೋಗ್ಯ ಶಿಬಿರಗಳು, ಆಸ್ಪತ್ರೆ ಖರ್ಚಿಗೆ ನೆರವು, ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಹಾಗೂ ಬಡ ಯುವತಿಯರ ವಿವಾಹಕ್ಕೆ ಧನಸಹಾಯದಂತಹ ಅನೇಕ ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ ಎಂದು ತಿಳಿಸಿದರು.
ಸಮಾಜ ಸೇವೆಯನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಗ್ರಾಮ ಮಟ್ಟದವರೆಗೆ ಸಂಘಟನೆಯನ್ನು ಬಲಪಡಿಸುವ ಮತ್ತು ಹೆಚ್ಚಿನ ಜನರನ್ನು ಸದಸ್ಯರನ್ನಾಗಿ ಮಾಡಿಕೊಳ್ಳುವ ಗುರಿಯನ್ನು ಹೊಂದಲಾಗಿದೆ. ಈ ಹಿನ್ನಲೆಯಲ್ಲಿ ಮಹಿಳೆಯರು ಮತ್ತು ಯುವಕರು ಸೇರಿದಂತೆ ಎಲ್ಲರಿಗೂ ಈ ಮುಕ್ತ ಅವಕಾಶದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಅಹಮದ್ ಶಿಮಾಲ್ ಸೇರಿದಂತೆ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.














