ಬೆಂಗಳೂರು: ಬಿಹಾರ ನಿವಾಸಿಗಳ ಸಿದ್ಧಾರ್ಥ ಸಾಂಸ್ಕೃತಿಕ ಸಮಿತಿ ಮತ್ತು ರಾಜೇಂದ್ರ ಬಾಬು ಮೆಮೋರಿಯಲ್ ಟ್ರಸ್ಟ್ ವತಿಯಿಂದ 48ನೇ ದಸರಾ ಮಹೋತ್ಸವ ಸಮಾರಂಭ ಐದು ದಿನಗಳಿಂದ ಅರಮನೆ ಮೈದಾನದಲ್ಲಿ ನಡೆಯುತ್ತಿದೆ.
ಮಹಾ ಅಷ್ಟಮಿ, ಮಹಾನವಮಿ, ವಿಜಯದಶಮಿ, ವಿಜಯದಶಮಿ ಏಕಾದಶಿಯನ್ನು ಆಚರಿಸಲಾಗುತ್ತಿದೆ. ಬಿಹಾರ ಮೂಲದ ಬೆಂಗಳೂರು ನಿವಾಸಿಗಳ ಸಿದ್ಧಾರ್ಥ ಸಾಂಸ್ಕೃತಿಕ ಸಮಿತಿಯ ವತಿಯಿಂದ ಬೃಹತ್ ಮಹಿಷಾಸುರ ಮರ್ಧಿನಿ ದುರ್ಗಾ ದೇವಿಯ ಮೂರ್ತಿ ಪ್ರತಿಷ್ಢಾಪನೆಯಾಗಿದ್ದು, ಸಾವಿರಾರು ಮಂದಿ ಬಿಹಾರ ನಿವಾಸಿಗಳು ದರ್ಶನ ಪಡೆಯುತ್ತಿದ್ದಾರೆ. ಪ್ರಸಾದ ಸ್ವೀಕಾರದ ಜೊತೆ ಜೊತೆಗೆ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗುತ್ತಿವೆ.
ಪೂಜಾ ಕಾರ್ಯಕ್ರಮದ ಕುರಿತು ಸಮಿತಿಯ ಪ್ರಮುಖರು ಹಾಗೂ ನಿವೃತ್ತ ಸೇನಾಧಿಕಾರಿ ಎಸ್.ಪಿ. ಬೆನ್ನಿ ಅವರು ಮಾತನಾಡಿ, ಈ ಹಿಂದೆ ಸ್ಥಳದಾವಕಾಶದ ಕೊರತೆಯಿಂದ ಬಿಹಾರ ಭವನದಲ್ಲಿ ಆಚರಿಸುತ್ತಿದ್ದ ಈ ಮಹೋತ್ಸವವನ್ನು ಪ್ರಸ್ತುತ ಅರಮನೆ ಮೈದಾನದ ವಿಶಾಲವಾದ ಪ್ರಿನ್ಸಸ್ ಶ್ರೈನ್ ಆವರಣದಲ್ಲಿ ಅರ್ಥಪೂರ್ಣವಾಗಿ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಉತ್ಸವದ ವಿಶೇಷತೆಯಾಗಿ ಪ್ರತಿದಿನವೂ ಭಕ್ತರಿಗಾಗಿ ಬೃಹತ್ ಪ್ರಮಾಣದಲ್ಲಿ ಮಹಾಪ್ರಸಾದದ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಸಪ್ತಮಿ, ಅಷ್ಟಮಿ, ನವಮಿ ಹಾಗೂ ದಶಮಿ ದಿನಗಳಲ್ಲಿ ಪ್ರತಿದಿನವೂ ಸುಮಾರು ಐದು ಸಾವಿರಕ್ಕೂ ಅಧಿಕ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಗಿದೆ. ಮಹಿಳಾ ಮಂಡಳಿಗಳು, ಸಮಿತಿಯ ಪದಾಧಿಕಾರಿಗಳು ಮತ್ತು ಗಣ್ಯರ ಸಹಕಾರದೊಂದಿಗೆ ಈ ಪ್ರಸಾದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗಿದೆ. ಇಲ್ಲಿಗೆ ಆಗಮಿಸುವ ಎಲ್ಲಾ ವಿಐಪಿಗಳು ಹಾಗೂ ಸಾಮಾನ್ಯ ಶ್ರದ್ಧಾಳುಗಳಿಗೆ ಯಾವುದೇ ಬೇಧಭಾವ ಮಾಡದೆ, ಸಂಪೂರ್ಣ ಸೇವಾ ಮನೋಭಾವದಿಂದ ಆತಿಥ್ಯ ಹಾಗೂ ಸೇವೆ ಒದಗಿಸಲಾಗುತ್ತಿದೆ ಎಂದು ಹೇಳಿದರು.
ಸಮಿತಿಯ ಸದಸ್ಯ ಅರವಿಂದ್ ಕುಮಾರ್ ಶರ್ಮಾ ಮಾತನಾಡಿ, ಆರಂಭದಲ್ಲಿ ಆರ್.ಟಿ. ನಗರದಲ್ಲಿ ನಡೆಸಲ್ಪಡುತ್ತಿದ್ದ ಪೂಜೆಯು ಸ್ಥಳದಾವಕಾಶದ ಕೊರತೆಯಿಂದಾಗಿ ಕಳೆದ ಹತ್ತು ವರ್ಷಗಳಿಂದ ಅರಮನೆ ಮೈದಾನದಲ್ಲಿ ನಡೆಯುತ್ತಿದೆ. ಹತ್ತು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಮೊದಲ ದಿನ ಕಲಶ ಸ್ಥಾಪನೆಯೊಂದಿಗೆ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಿ, ಸಪ್ತಮಿ ದಿನದಂದು ಮಾತೆಯ ಪೂಜೆ ಪ್ರಾರಂಭಗೊಂಡು ನವಮಿ ಹಾಗೂ ದಶಮಿಯ ವರೆಗೆ ಮುಂದುವರಿದು ವಿಸರ್ಜನೆಯೊಂದಿಗೆ ಸಮಾಪ್ತಿಗೊಳ್ಳುತ್ತದೆ ಎಂದು ಮಾಹಿತಿ ನೀಡಿದರು.
ಈ ಕಾರ್ಯಕ್ರಮವನ್ನು ಬಿಹಾರದ ಮಾಜಿ ವಿಧಾನ ಪರಿಷತ್ ಸದಸ್ಯ ಕೃಷ್ಣ ಕುಮಾರ್ ಸಿಂಗ್, ಸಮಿತಿಯ ಕಾರ್ಯದರ್ಶಿ ಸುಬೋದ್ ಕುಮಾರ್ ಸಿಂಗ್, ಶೇಷನಾಥ್ ದುಬೆ ಮತ್ತಿತರರು ಆಯೋಜಿಸಿದ್ದಾರೆ.














