ಖಾನಾಪುರ: ತಾಲೂಕಿನ ಲೋಕೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಬ್ಯಾರೇಜ್ ಸತತವಾಗಿ ಸೋರಿಕೆಯಾಗುತ್ತಿರುವುದರಿಂದ ಈ ಭಾಗದ ರೈತಾಪಿ ಜನ ನೀರಿನ ಕೊರತೆಯಿಂದ ಕಂಗಾಲಾಗಿದ್ದಾರೆ. ನೀರನ್ನು ಶೇಖರಿಸಿ ಇಟ್ಟು ಅಗತ್ಯವಿದ್ದಾಗ ರೈತರಿಗೆ ನೀರು ಕೊಡಬೇಕಾದ ಬ್ಯಾರೇಜ್ ನಿರ್ಮಾಣದ ಉದ್ದೇಶವೇ ಇಲ್ಲಿ ವಿಫಲವಾಗಿದೆ.
ಸಣ್ಣ ನೀರಾವರಿ ಇಲಾಖೆ ವತಿಯಿಂದ 2019 ರಲ್ಲಿ ನಿರ್ಮಿಸಲಾದ ಈ ಬ್ಯಾರೇಜ್ ಮೊದಲ ದಿನದಿಂದಲೂ ಸೋರುತ್ತಲೇ ಇದೆ. ಅತ್ಯಂತ ಕಳಪೆ ಕಾಮಗಾರಿಯ ಕಾರಣದಿಂದ ಈ ಬ್ಯಾರೇಜ್ ಸೋರಿಕೆಯಾಗುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಬ್ಯಾರೇಜ್ ಅನ್ನು ನಿರ್ಮಿಸಲಾಗಿದೆ. ಆದರೆ, ವಿಚಿತ್ರವೆಂದರೆ ಈ ಬ್ಯಾರೇಜ್ ನಿರ್ಮಾಣದ ಕಾಮಗಾರಿಯನ್ನು ಅರ್ಧಂಬರ್ಧ ಮಾಡಿ ಹಾಗೆಯೇ ಬಿಡಲಾಗಿದೆ.
ಒಂದು ಕೊನೆಯಲ್ಲಿ ಬ್ಯಾರೇಜ್ ಗೋಡೆಯನ್ನು ಪೂರ್ಣವಾಗಿ ಕಟ್ಟದೇ ಹಾಗೆಯೇ ಬಿಡಲಾಗಿದೆ. ಇದು ಯಾವ ರೀತಿಯ ಇಂಜಿನಿಯರಿಂಗ್ ಎಂಬುದನ್ನು ಸಣ್ಣ ನೀರಾವರಿ ಇಲಾಖೆಯ ನಾಮ್ ಕಾ ವಾಸ್ತೆ ಇಂಜಿನಿಯರ್ ಗಳೇ ಹೇಳಬೇಕಿದೆ. ಗ್ರಾಮಸ್ಥರು ನೀರು ಸೋರಿಕೆಯ ಬಗ್ಗೆ ತಕರಾರು ಮಾಡಿದಾಗ ಇಲಾಖೆಯ ಇಂಜಿನಿಯರ್ಗಳು ಬಂದು ಸೋರಿಕೆ ಇರುವಲ್ಲಿ ಪ್ಲಾಸ್ಟಿಕ್ ಶೀಟ್ ಕಟ್ಟಿ ಹೋಗುವುದು ಇನ್ನೂ ವಿಚಿತ್ರವಾಗಿದೆ. ಇಷ್ಟೇ ಅಲ್ಲದೆ ಈ ಬ್ಯಾರೇಜ್ನ ಒಂದೆರಡು ಗೇಟ್ಗಳನ್ನು ತಿರುಗು ಮುಖವಾಗಿ ಹಾಕಿರುವುದು ಇನ್ನೂ ಸೋಜಿಗವಾಗಿದೆ. ಇದನ್ನು ಮಾಡಿದ ಆ ಇಂಜಿನಿಯರ್ಗಳನ್ನು ಕರೆದು ಸನ್ಮಾನಿಸಬೇಕೆಂದು ಗ್ರಾಮಸ್ಥರು ತೀರ್ಮಾನಿಸಿದ್ದಾರೆ.
ಸದ್ಯ ಭೀಕರ ಬರಗಾಲ ಇರುವುದರಿಂದ ತಕ್ಷಣದಲ್ಲಿ ಈ ಬ್ಯಾರೇಜ್ ಕಾಮಗಾರಿಯನ್ನು ಪೂರ್ಣಗೊಳಿಸಿ ಸೋರಿಕೆಯನ್ನು ತಡೆಗಟ್ಟಬೇಕೆಂದು ರೈತರು ಪ್ರಜಾ ನೆರಳು ಪತ್ರಿಕೆಯೊಂದಿಗೆ ಮಾತನಾಡಿ ಒತ್ತಾಯಿಸಿದ್ದಾರೆ. ಒಂದು ವೇಳೆ ರಿಪೇರಿ ಸಾಧ್ಯವಾಗದಿದ್ದರೆ ಹೊಸದಾಗಿ ಬ್ಯಾರೇಜ್ ಕಟ್ಟಿ ರೈತರ ಬೆಳೆಗಳನ್ನು ಉಳಿಸಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಏನೇ ಆದರೂ ಇದೇ ವಾರದಲ್ಲಿ ಸಮಸ್ಯೆ ಪರಿಹಾರ ಆಗದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಇಂಥ ಕಳಪೆ ಕಾಮಗಾರಿಯಿಂದ ಈ ಬ್ಯಾರೇಜ್ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದ ಅಂದಿನ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪದ ಮೇಲೆ ಎಫ್ಐಆರ್ ದಾಖಲಿಸಿ ಕಠಿಣ ಜರುಗಿಸಬೇಕೆಂದು ಹಿರಿಯ ರೈತ ಮುಖಂಡರು ಒತ್ತಾಯಿಸಿದ್ದಾರೆ.















