ಬೆಂಗಳೂರು: ಗೌರಿ-ಗಣೇಶ ಹಬ್ಬದ ಸಂಭ್ರಮದ ನಡುವೆ ಜಾತಿ, ಧರ್ಮದ ಬೇಧ ಮರೆತು ಸರ್ವಧರ್ಮಿಯರು ಒಂದಾಗಿ ಗಣೇಶೋತ್ಸವ ಆಚರಿಸುವ ಮೂಲಕ ನಗರದ ಮಾವಳ್ಳಿ ಹಾಗೂ ಬಾಬು ಜಗಜೀವನ್ ರಾಮ್ ನಗರ ಬಡಾವಣೆಯ ಜನರು ಒಂದೊಳ್ಳೆ ಸಂದೇಶ ಸಾರಿದ್ದಾರೆ.
ಎಸ್.ರಾಯುಡು ಸಾಮಾಜಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ ಸಂಸ್ಥಾಪಕ ಈಶ್ವರ್ ಎಸ್. ರಾಯಡು ಅವರ ನೇತೃತ್ವದಲ್ಲಿ ಭಾವೈಕ್ಯತೆಯ ಗಣೇಶೋತ್ಸವ ಆಯೋಜಿಸಲಾಗಿದ್ದು, ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ವಿವಿಧ ಮುಖಂಡರು ಹಾಗೂ ಸಾರ್ವಜನಿಕರು ಒಟ್ಟಾಗಿ ಪಾಲ್ಗೊಂಡಿರುವುದು ವಿಶೇಷವಾಗಿದೆ. ಸರಳ ಹಾಗೂ ಪರಿಸರ ಸ್ನೇಹಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಹಬ್ಬ ಆಚರಿಸಲಾಗುತ್ತಿದೆ.
ಈ ಕುರಿತು ಮಾಧ್ಯಮಗಳ ಮಾತನಾಡಿದ ಈಶ್ವರ್ ಎಸ್. ರಾಯಡು, ಸಮಾಜದಲ್ಲಿ ಸತ್ಸಂಗ, ಸದ್ಭಾವನೆ ಹಾಗೂ ಮತೀಯ ಸೌಹಾರ್ದತೆಯನ್ನು ಬೆಳೆಸುವುದು ಆಚರಣೆಯ ಪ್ರಮುಖ ಉದ್ದೇಶವಾಗಿದೆ. ಡಾ.ಬಿ.ಆರ್. ಅಂಬೇಡ್ಕರ್ ಅವರ ತತ್ವ-ಸಿದ್ಧಾಂತಗಳು ಹಾಗೂ ಕುವೆಂಪು ಅವರ ಓ ನನ್ನ ಚೇತನ, ಆಗು ನೀ ಅನಿಕೇತನ ಎಂಬ ಆಶಯದಂತೆ ಜಾತ್ಯತೀತವಾಗಿ ಎಲ್ಲರೂ ಒಗ್ಗೂಡಬೇಕು. ಯಾವುದೇ ಬೇಧ ಭಾವವಿಲ್ಲದೆ ಏಕತೆ ಮತ್ತು ಭಾವೈಕ್ಯತೆಯನ್ನು ಸಾರುವುದು ನಮ್ಮ ಉದ್ದೇಶ ಎಂದು ಹೇಳಿದರು.
ಸುಮಾರು 49 ವರ್ಷಗಳಿಂದ ಸಂಸ್ಥೆಯು ಯಾವುದೇ ಚಂದಾ ವಸೂಲಿ ಮಾಡದೆ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದತೆಯಿಂದ ಗಣೇಶೋತ್ಸವ ಆಚರಿಸಿಕೊಂಡು ಬರುತ್ತಿದೆ. ಈ ಮೂಲಕ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಮಾಜಿಕ ಸಾಮರಸ್ಯದ ಸಂದೇಶ ಸಾರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಹಿರಿಯ ಗಣೇಶ ಮೂರ್ತಿ ಕಲಾವಿದ ಶ್ರೀನಿವಾಸ್ ಮಾತನಾಡಿ, ನಮ್ಮ ಕುಟುಂಬವು ಹಲವು ದಶಕಗಳಿಂದ ಗಣಪತಿ ಮೂರ್ತಿ ತಯಾರಿಕೆಯ ಜತೆಗೆ ಜಲಮೂಲಗಳ ಸಂರಕ್ಷಣೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಆದರೆ ಇದುವರೆಗೆ ಸರ್ಕಾರದಿಂದ ಸೂಕ್ತ ಸನ್ಮಾನ ಅಥವಾ ಪ್ರಶಸ್ತಿ ದೊರೆಯದಿರುವುದು ಬೇಸರ ತಂದಿದೆ ಎಂದು ಹೇಳಿದರು.
ಆನೇಕಲ್ ಸಮೀಪದ ಚೂಡಹಳ್ಳಿ ಕಾಡಿನ ಪ್ರದೇಶದಲ್ಲಿ ಆನೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾದ ಸಂದರ್ಭದಲ್ಲಿ ಸುಮಾರು 60 ವರ್ಷಗಳ ಹಿಂದೆ ತಮ್ಮ ತಂದೆಯವರು 500 ರೂ. ವೆಚ್ಚದಲ್ಲಿ ಒಂದು ಎಕರೆ ವಿಸ್ತೀರ್ಣದ ಕೆರೆ ನಿರ್ಮಿಸಿದ್ದರು. ಚಂದಾಪುರ ಸಂತೆಯಲ್ಲಿ ಸಾರ್ವಜನಿಕರು ಹಾಗೂ ಜಾನುವಾರುಗಳಿಗೆ ನೀರಿನ ಸೌಲಭ್ಯ ಕಲ್ಪಿಸಲು ಬೋರ್ವೆಲ್ ಕೂಡ ಕೊರೆಸಿದ್ದರು. ನನ್ನ ಜೀವಿತಾವಧಿಯಲ್ಲಿ ಸಾರ್ವಜನಿಕರಿಗಾಗಿ ಐದು ಕೆರೆಗಳನ್ನು ನಿರ್ಮಿಸುತ್ತೇನೆ ತಿಳಿಸಿದರು.
ತಮ್ಮ ಕುಟುಂಬದ ಕಲಾ ಪರಂಪರೆಯಲ್ಲಿ ತಯಾರಾಗುವ ಗಣಪತಿ ಮೂರ್ತಿಗಳಿಗೆ ದೇಶ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಬೇಡಿಕೆ ಇದೆ. ಅಮೆರಿಕ, ನ್ಯೂಯಾರ್ಕ್, ಮಲೇಷ್ಯಾ ಹಾಗೂ ಆಸ್ಟ್ರೇಲಿಯಾಗಳಿಗೂ ಮೂರ್ತಿಗಳನ್ನು ಕಳುಹಿಸಲಾಗುತ್ತಿದೆ. ವಿದೇಶದಲ್ಲಿರುವ ಕನ್ನಡಿಗರು ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿರುವುದನ್ನು ಕರೆ ಮಾಡಿ ಹಂಚಿಕೊಳ್ಳುತ್ತಾರೆ. ಇದು ಕುಟುಂಬಕ್ಕೆ ಸಂತಸ ತಂದಿದೆ ಎಂದು ಹೇಳಿದರು.
ಜಲಮಾಲಿನ್ಯ ತಡೆಗೆ ಮುಂದಿನ ದಿನಗಳಲ್ಲಿ ಫೈಬರ್ ಗಣಪತಿ ಬಳಕೆಯ ವಿನೂತನ ಪರಿಕಲ್ಪನೆಯನ್ನು ಜಾರಿಗೆ ತರಲು ಚಿಂತಿಸಲಾಗಿದೆ. ಮೆರವಣಿಗೆಗೆ ಫೈಬರ್ ಮೂರ್ತಿ ಬಳಸುವುದರ ಜತೆಗೆ ಸಂಪ್ರದಾಯದ ಭಾಗವಾಗಿ ಸಣ್ಣ ಮಣ್ಣಿನ ಗಣಪತಿಯನ್ನು ವಿಸರ್ಜಿಸಿ, ಆ ನೀರನ್ನು ಫೈಬರ್ ಮೂರ್ತಿಯ ಮೇಲೆ ಪ್ರೋಕ್ಷಣೆ ಮಾಡುವ ಮೂಲಕ ಆಚರಣೆ ಮತ್ತು ಪರಿಸರ ಸಂರಕ್ಷಣೆಯನ್ನು ಸಮನ್ವಯಗೊಳಿಸುವ ಉದ್ದೇಶವಿದೆ. ದಶಕಗಳಿಂದ ಕಲೆ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ತಮ್ಮ ಕುಟುಂಬದ ಸೇವೆಯನ್ನು ಸರ್ಕಾರ ಗುರುತಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಶ್ರೀನಿವಾಸ್ ಮನವಿ ಮಾಡಿದರು.
ಬಿಬಿಎಂಪಿಯ 96ನೇ ವಾರ್ಡ್ನ ಮಾಜಿ ಸದಸ್ಯ ವೇದವ್ಯಾಸ ಭಟ್ ಮಾತನಾಡಿ, ಸಾಂಪ್ರದಾಯಿಕ ಮಣ್ಣಿನ ಮೂರ್ತಿ ತಯಾರಿಕಾ ಪರಂಪರೆ ಇಡೀ ದೇಶಕ್ಕೆ ಮಾದರಿಯಾಗಿದೆ. ಮಾವಳ್ಳಿಯ ಮಣ್ಣಿನ ಗಣಪತಿಗೆ ರಾಜ್ಯಾದ್ಯಂತ ಬೇಡಿಕೆಯಿದೆ. ಶ್ರೀನಿವಾಸ್ ಕುಟುಂಬವು 60 ವರ್ಷಕ್ಕೂ ಹೆಚ್ಚು ಕಾಲದಿಂದ ಮಣ್ಣಿನ ಗಣಪತಿ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ. ಅವರ ತಂದೆ-ತಾಯಿ ಆರಂಭಿಸಿದ ಕಲಾ ಸೇವೆಯನ್ನು ಮಕ್ಕಳು ಹಾಗೂ ಮೊಮ್ಮಕ್ಕಳು ಮುಂದುವರಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ಮಾವಳ್ಳಿಯಲ್ಲಿ ತಯಾರಾಗುವ ಪರಿಸರ ಸ್ನೇಹಿ ಮಣ್ಣಿನ ಗಣಪತಿ ಮೂರ್ತಿಗಳಿಗೆ ರಾಜ್ಯದ ವಿವಿಧ ಭಾಗಗಳಲ್ಲಿ ಬೇಡಿಕೆ ಇದ್ದು, ಸಾರ್ವಜನಿಕರು ಇಲ್ಲಿಂದ ಮೂರ್ತಿಗಳನ್ನು ಕೊಂಡೊಯ್ಯುತ್ತಾರೆ. ಇನ್ನು ಗಣೇಶೋತ್ಸವವನ್ನು ಇಲ್ಲಿ ಸಾರ್ವಜನಿಕವಾಗಿ ಆಚರಿಸುವ ಮೂಲಕ ವಿವಿಧ ಜಾತಿ, ಧರ್ಮಗಳ ಜನರನ್ನು ಒಗ್ಗೂಡಿಸುವ ಉದ್ದೇಶವನ್ನು ಬಾಲಗಂಗಾಧರ ತಿಲಕರು ಹೊಂದಿದ್ದರು. ಅದೇ ಸೌಹಾರ್ದತೆಯ ಹಾದಿಯಲ್ಲಿ ಈಶ್ವರ್ ರಾಯಡು ಅವರು ಸಾರ್ವಜನಿಕ ಸೇವೆಯೊಂದಿಗೆ ಸಮಾಜದ ಎಲ್ಲ ವರ್ಗದ ಜನರನ್ನು ಒಗ್ಗೂಡಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಈ ವೇಳೆ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ಸುಮಾರು ಎಂಟು ದಶಕಗಳಿಂದ ತೊಡಗಿಸಿಕೊಂಡಿರುವ ಹಿರಿಯ ಕಲಾವಿದ ಶ್ರೀನಿವಾಸ್ ಹಾಗೂ ಅವರ ಕುಟುಂಬದ ಕಲಾ ಸೇವೆಯನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಸುಯೋಧನ, ಶ್ರೀನಿವಾಸ್, ಖಾಜಾ ಭಾಯಿ, ಶಶಾಂಕ್.ಎಸ್ ರಾಯುಡು, ಪ್ರಣವ್ ಎಸ್.ರಾಯುಡು, ಲಿಂಗೇಶ್ವರ ಎಸ್ ರಾಯುಡು ಮೊಹಮ್ಮದ್ ಸಿದ್ದಿಕಿ ಉಪಸ್ಥಿತರಿದ್ದರು. ಮೆರವಣಿಗೆಯ ಮೂಲಕ ಗಣಪತಿ ಮೂರ್ತಿಯನ್ನು ತರಲಾಗಿದ್ದು, ಇದರೊಂದಿಗೆ ಪರಿಸರ ಸಂರಕ್ಷಣೆ ಹಾಗೂ ಸೌಹಾರ್ದತೆಯ ಸಂದೇಶವನ್ನು ಜನರಿಗೆ ತಲುಪಿಸಲಾಗುತ್ತಿದೆ.














