ಬೆಂಗಳೂರು: ಉದ್ಯಮಿ ಭಾರತ ವತಿಯಿಂದ ಡಿ.4,5 ಹಾಗೂ 6ರಂದು ನಗರದ ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಉದ್ಯಮ ಭಾರತ ಸಮಾವೇಶ ಮತ್ತು ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗಿದೆ. ಉದ್ಘಾಟನಾ ಕಾರ್ಯಕ್ರಮವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್, ಸೇರಿದಂತೆ ಇನ್ನಿತರರು ಭಾಗಿಯಾಗಲಿದ್ದಾರೆ ಎಂದು ಉದ್ಯಮಿ ಭಾರತ ಅಧ್ಯಕ್ಷ ನಂದೀಶ್ ಗೌಡ ತಿಳಿಸಿದರು.
ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದಲ್ಲಿ ದೇಶ-ವಿದೇಶಗಳ ಉದ್ಯಮಿಗಳು, ಸ್ಟಾರ್ಟ್ಅಪ್ಗಳು, ಎಂಎಸ್ಎಂಇ, ಹೂಡಿಕೆದಾರರು ಹಾಗೂ ವಿವಿಧ ಕ್ಷೇತ್ರಗಳ ತಜ್ಞರು ಭಾಗವಹಿಸಲಿದ್ದಾರೆ. ಅಲ್ಲದೇ ಅಂತಾರಾಷ್ಟ್ರೀಯ ವ್ಯಾಪಾರ ಮೇಳ ಹಾಗೂ ವಿದೇಶಿ ತಜ್ಞರಿಂದ ವಿಚಾರ ಸಂಕಿರಣ, ವಾಣಿಜ್ಯ ಸಭೆಗಳು, ಸ್ಟಾರ್ಟ್ಅಪ್ಗಳ ಪ್ರದರ್ಶನ ಹಾಗೂ ಉದ್ಯಮಿಗಳೊಂದಿಗೆ ಸಂವಾದ ಸೇರಿದಂತೆ ಯುವ ಉದ್ಯಮಿಗಳಿಗೆ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಈ ಮೂರು ದಿನಗಳ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಭಾರತ ಸೇರಿದಂತೆ ವಿವಿಧ ದೇಶಗಳಿಂದ ಉದ್ಯಮಿಗಳು, ಸ್ಟಾರ್ಟ್ಅಪ್ಗಳು, ಹೂಡಿಕೆದಾರರು, ತಂತ್ರಜ್ಞಾನ ತಜ್ಞರು ಮತ್ತು ಉದ್ಯಮಾಸಕ್ತರನ್ನು ಒಂದೇ ವೇದಿಕೆಯಲ್ಲಿ ಸೇರಲಿದ್ದಾರೆ. ಹೊಸ ಉದ್ಯಮ ಆರಂಭಿಸುವುದು, ವ್ಯವಹಾರವನ್ನು ವಿಸ್ತರಿಸುವುದು ಸೇರಿದಂತೆ ಜಾಗತಿಕ ಮಾರುಕಟ್ಟೆ ಪ್ರವೇಶಿಸಲು ಬಯಸುವವರಿಗೆ ಇದು ಅತ್ಯುತ್ತಮ ಅವಕಾಶವಾಗಿದೆ ಎಂದರು.
ಪ್ರದರ್ಶನದಲ್ಲಿ ಒಟ್ಟು 500ಕ್ಕೂ ಹೆಚ್ಚು ಮಳಿಗೆಗಳು ಇರಲಿವೆ. ಒಂದು ವೇಳೆ ಅತ್ಯಧಿಕ ಮಂದಿ ನೋಂದಾಯಿಸಿಕೊಂಡಲ್ಲಿ 900 ಮಳಿಗೆಗಳಿಗೆ ಅವಕಾಶವಿರಲಿದೆ. ಆಹಾರೋದ್ಯಮ, ಕೃಷಿ ಮತ್ತು ಅಗ್ರೋ-ಟೆಕ್, ಉತ್ಪಾದನಾ ವಲಯ, ಮಾಹಿತಿ ತಂತ್ರಜ್ಞಾನ, ಆರೋಗ್ಯ ಸೇವೆಗಳು, ಶಿಕ್ಷಣ ಮತ್ತು ತರಬೇತಿ ಹೀಗೆ 15ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಸಂಬಂಧಿಸಿದ ಮಳಿಗೆಗಳಿರಲಿವೆ ಎಂದು ಹೇಳಿದರು.
ಹಲವು ವಿಷಯಗಳ ವಿಚಾರ ಸಂಕಿರಣಗಳು ಸೇರಿದಂತೆ ಮಾಹಿತಿ, ವಿನಿಮಯ, ಮಹತ್ವದ ಒಪ್ಪಂದಗಳನ್ನು ಸಮಾವೇಶದಲ್ಲಿ ಮಾಡಿಕೊಳ್ಳಲಾಗುತ್ತದೆ. ಜೊತೆಗೆ ಉದ್ಯಮಿಗಳಿಗೆ ಹೊಸ ಮಾರುಕಟ್ಟೆಗಳನ್ನು ಅನ್ವೇಷಿಸಲು, ಜಾಗತಿಕ ಸಂಪರ್ಕಗಳನ್ನು ಬೆಳೆಸಲು ಮತ್ತು ತಮ್ಮ ವ್ಯವಹಾರವನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯಲು ಅಪರೂಪದ ಅವಕಾಶ ಸಮಾವೇಶದಲ್ಲಿ ದೊರೆಯಲಿದೆ. ಉದ್ಯಮಿಗಳು, ಸ್ಟಾರ್ಟ್ಅಪ್ಗಳು, ಹೂಡಿಕೆದಾರರು ಮತ್ತು ಉದ್ಯಮಾಸಕ್ತರು ಈ ಸಮಾವೇಶದಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಬಹುದಾಗಿದೆ ಎಂದು ನಂದೀಶ್ ಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉದ್ಯಮಿ ಭರತ್ ಸಂಸ್ಥೆಯ ಪ್ರಮುಖರಾದ ಕುಮಾರಗೌಡ, ಗಿರೀಶ್ ಮಲ್ಲಪ್ಪ, ಸತ್ಯನಾರಾಯಣ, ಸೋಮಶೇಖರ್ ಹಾಗೂ ಇತರರು ಉಪಸ್ಥಿತರಿದ್ದರು.















