ಬೆಂಗಳೂರು: ಶೇಷಾದ್ರಿಪುರದ ಈಡಿಗರ ಭವನದಲ್ಲಿ ಭಾನುವಾರ ಕರ್ನಾಟಕ ಈಡಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಅಧ್ಯಕ್ಷರ ಕಾರ್ಯವೈಖರಿ, ಪಾರದರ್ಶಕತೆ, ನೌಕರರ ಹಿತಾಸಕ್ತಿ ಕಾಪಾಡುವಲ್ಲಿ ವೈಫಲ್ಯತೆ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.
ಮುಖ್ಯಮಂತ್ರಿಗಳ ಕಚೇರಿಯ ಜಂಟಿ ಕಾರ್ಯದರ್ಶಿಯಾಗಿದ್ದ ಎಂ. ಶ್ರೀನಿವಾಸ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ ಕೆಲ ನೌಕರರ ಹಿತಾಸಕ್ತಿ ಕಾಪಾಡುವಲ್ಲಿ ವಿಫಲರಾಗಿದ್ದೀರಿ, ವಿಶೇಷವಾಗಿ ಜಿಲ್ಲೆಗಳ ಸಂಘದ ಪದಾಧಿಕಾರಿಗಳನ್ನು ಕಡೆಗಣಿಸಿ ಬೆಂಗಳೂರಿನ ಕೇಂದ್ರ ಸ್ಥಾನವನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದೀರಿ.ಇದು ಸರಿಯಲ್ಲ ಎಂದು ಕೆಲ ಸದಸ್ಯರು ಅಸಮಾಧಾನ ಹೊರಹಾಕಿದರು.
ಸಭೆಗಳ ಅಜೆಂಡಾಗಳನ್ನು ಮತ್ತು ನಂತರದ ನಿರ್ಣಯಗಳನ್ನು ಸೂಕ್ತ ರೀತಿಯಲ್ಲಿ ಪ್ರಸ್ತುತಪಡಿಸಿಲ್ಲ. ಸಂಘದ ರಿಪೋರ್ಟ್ ನಲ್ಲಿ ಅಪೂರ್ಣ ಮಾಹಿತಿಯನ್ನು ನೀಡಿರುವುದು ಸರಿಯಲ್ಲ. ಇನ್ನು ವಿಶೇಷವಾಗಿ ಹಿರಿಯ ಸದಸ್ಯರನ್ನು ಮತ್ತು ನಿವೃತ್ತ ನೌಕರರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳದೇ ಕಾರ್ಯನಿರ್ವಹಿಸುತ್ತಿರುವುದು ಮತ್ತು ವಂತಿಗೆ ವಿಚಾರವನ್ನು ಸರಿಯಾದ ರೀತಿ ಸದಸ್ಯರಿಗೆ ತಿಳಿಸದಿರುವ ವಿಚಾರ ಕುರಿತು ಆಕ್ಷೇಪಣೆ ವ್ಯಕ್ತವಾಯಿತು.
ಸಂಘ ಕೇವಲ ಹುಟ್ಟುಹಬ್ಬ, ಪಾರ್ಟಿಗಳಿಗೆ ಮಾತ್ರ ಸೀಮಿತವಾಗಿದೆ. ಯಾವುದೇ ಸದಸ್ಯ ನೌಕರನ ಹಿತಾಸಕ್ತಿ ಮತ್ತು ಉದ್ದೇಶಗಳನ್ನು ಇಟ್ಟುಕೊಂಡು ಕೆಲಸ ಮಾಡುತ್ತಿಲ್ಲ ಹಾಗಾಗಿ ಈ ಸಭೆಗೆ ಬರಲು ನನಗೆ ಮುಜುಗರವಾಗಿದೆ ಎಂದು ಹೆಸರು ಹೇಳಲು ಇಚ್ಚಿಸದ ಕೆಲ ಹಿರಿಯ ನಿವೃತ್ತ ನೌಕರರು ಅಸಮಾಧಾನ ಹೊರಹಾಕಿದ್ದಾರೆ.
ಸಭೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಎಂ. ಶ್ರೀನಿವಾಸ್, ಸಂಘಟನೆಯನ್ನು ರಾಜ್ಯಾದ್ಯಂತ ವಿಸ್ತರಿಸುವ ನಿಟ್ಟಿನಲ್ಲಿ ಈಗಾಗಲೇ ಪ್ರತಿ ಜಿಲ್ಲೆಯಲ್ಲೂ ಈಡಿಗ ನೌಕರರ ಕ್ಷೇಮಾಭಿವೃದ್ಧಿ ಸಂಘವನ್ನು ರಚನೆ ಮಾಡಲಾಗಿದೆ. ಇದರ ಜೊತೆಗೆ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ಹಾಗೂ ಉದ್ಯೋಗಾವಕಾಶಗಳಿಗಾಗಿ ಸ್ಟೂಡೆಂಟ್ಸ್ ಎಂಪವರ್ಮೆಂಟ್ ಫೋರಂ ಎನ್ನುವ ವಿಶೇಷ ವೇದಿಕೆಯನ್ನು ರೂಪಿಸಲಾಗಿದೆ. ಈ ಮೂಲಕ ಸರ್ಕಾರದಿಂದ ಲಭ್ಯವಿರುವ ವಿವಿಧ ಯೋಜನೆಗಳು ಹಾಗೂ ಭವಿಷ್ಯದ ಕಾರ್ಯಕ್ರಮಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡುವ ಕೆಲಸ ಮಾಡಲಾಗುತ್ತಿದೆ ಎಂದರು.
ಸಾಮಾನ್ಯವಾಗಿ ಅನೇಕ ಸಂಘ-ಸಂಸ್ಥೆಗಳು ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳ ಮಕ್ಕಳಿಗೆ ಮಾತ್ರ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿವೇತನ ನೀಡುತ್ತವೆ. ಆದರೆ ಪ್ರಥಮ ಬಾರಿಗೆ ನಮ್ಮ ಸಂಘದ ವತಿಯಿಂದ ನೌಕರರ ಮಕ್ಕಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಶೇಕಡಾ 90ಕ್ಕಿಂತ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಗಿದೆ. ಎಸ್ಎಸ್ಎಲ್ಸಿ ಯಲ್ಲಿ ಅತ್ಯುತ್ತಮ ಅಂಕ ಪಡೆದ ಮಕ್ಕಳಿಗೆ 4 ಸಾವಿರ, ಪಿಯುಸಿ ಮಕ್ಕಳಿಗೆ ಹಾಗೂ ರ್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ 5 ಸಾವಿರ ರೂ ನಗದು ಪುರಸ್ಕಾರವನ್ನು ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯ ಬಳಿಕ ಬೆಸ್ಕಾಂ ನ ಯಲಹಂಕ ವೃತ್ತದ ಹಿರಿಯ ಮುಖ್ಯ ಇಂಜಿನಿಯರ್ ಉದಯ್ ಕುಮಾರ್ ಓಟೂರು, ನಿವೃತ್ತ ಬೆಸ್ಕಾಂ ಹಿರಿಯ ಅಧಿಕಾರಿ ಮಂಜಪ್ಪ, ಬಿಬಿಎಂಪಿ ನಿವೃತ್ತ ಡಿಸಿ ಸುರೇಶ್ ಸೇರಿದಂತೆ ಅನೇಕರನ್ನು ಗೌರವಿಸಲಾಯಿತು. ಪ್ರತಿಭಾನ್ವಿತ ಮಕ್ಕಳನ್ನು ಸನ್ಮಾನಿಸಲಾಯಿತು. ಈ ವೇಳೆ ಉಪಾಧ್ಯಕ್ಷ ಮಹೇಶ್ ಕುಮಾರ್ ಎಸ್, ಪ್ರಧಾನ ಕಾರ್ಯದರ್ಶಿ ಎನ್.ಬಿ.ಮಧುಸೂದನ್, ಜಂಟಿ ಕಾರ್ಯದರ್ಶಿಗಳಾದ ರಾಘವೇಂದ್ರ ಪಿ.ಎಂ.ಜಿ.ನಾಗರಾಜ್, ಸಂಘಟನಾ ಕಾರ್ಯದರ್ಶಿ ಅಶೋಕ್ ಕುಮಾರ್ ಕೆ.ಎಚ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.















