ಬೆಂಗಳೂರು: ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಪಕ್ಷದ ವತಿಯಿಂದ ದೇಶದೆಲ್ಲೆಡೆ ಪತ್ರ ಅಭಿಯಾನ ನಡೆಸಲಾಗುವುದು ಎಂದು ಜನತಾ ಪಕ್ಷ ರಾಷ್ಟ್ರೀಯ ಅಧ್ಯಕ್ಷ ಜಯಪ್ರಕಾಶ್ ಬಂಧು ತಿಳಿಸಿದರು.
ಶುಕ್ರವಾರ ಸಂಜೆ ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಢಿ ನಡೆಸಿ ಅವರು ಮಾತನಾಡಿದರು. ರಾಮಕೃಷ್ಣ ಹೆಗಡೆ ಭಾರತ ಕಂಡ ಅಪರೂಪದ ರಾಜಕಾರಣಿಯಾಗಿದ್ದರು. ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಕೊಡುಗೆ ನೀಡಿದ್ದಾರೆ. ಮಾಜಿ ಪ್ರಧಾನಿ ಚಂದ್ರಶೇಖರ್ ಮತ್ತು ರಾಮಕೃಷ್ಣ ಹೆಗಡೆಯವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ದೇಶದೆಲ್ಲಡೆ ಸುಮಾರು 10 ಲಕ್ಷ ಪತ್ರ ಸಂಗ್ರಹಿಸುವ ಅಭಿಯಾನ ನಡೆಸಲಾಗುವುದು. ಕರ್ನಾಟಕದಿಂದಲೇ ಈ ಪತ್ರ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಇದಕ್ಕೆ ಕರ್ನಾಟಕ, ಬಿಹಾರ, ಅಸ್ಸಾಂ, ಗುಜರಾತ್ ಎಲ್ಲ ರಾಜ್ಯಗಳಿಂದ ನೈತಿಕ ಬೆಂಬಲದ ಅಗತ್ಯವಿದೆ ಎಂದು ಹೇಳಿದರು.
ಕೇಂದ್ರದಲ್ಲಿ ಬಿಜೆಪಿಯ ಆರ್ಥಿಕ ನೀತಿಯಿಂದ ದೇಶದ ವ್ಯವಸ್ಥೆ ಹದಗೆಟ್ಟಿದೆ. ಆರ್ಥಿಕ ಗುಲಾಮಗಿರಿ ನಡರಯುತ್ತಿದೆ ಕೃಷಿ ವ್ಯವಸ್ಥೆ ಅಧೋಗತಿಗೆ ತಲುಪಿದ್ದು ಆತ್ಮಹತ್ಯೆಯಂತಹ ಪ್ರಕರಣಗಳು ನಡೆಯುತ್ತಿವೆ. ಆದ್ದರಿಂದ ಜನತಾ ಪಕ್ಷದ ಜಾತ್ಯತೀತವಾದ, ಆರ್ಥಿಕ ರಾಷ್ಟ್ರೀಕರಣವನ್ನು ಎಲ್ಲರೂ ಬೆಂಬಲಿಸಬೇಕು. ಉಳಿದಂತೆ ಮುಂಬರುವ 2027-28ರ ಚುನಾವಣೆಯಲ್ಲಿ ಪಕ್ಷವು ರೈತರು ಮತ್ತು ಯುವಕರ ಧ್ವನಿಯಾಗಿ ರಾಜ್ಯ ರಾಜಕೀಯದಲ್ಲಿ ಹೊಸ ದಿಕ್ಸೂಚಿ ಮೂಡಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಜನತಾ ಪಕ್ಷದ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ನಾಗೇಶ್ ಎನ್ ಮಾತನಾಡಿ, ಮೌಲ್ಯಾಧಾರಿತ ರಾಜಕಾರಣದ ರೂವಾರಿ ಹಾಗೂ ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರ 100ನೇ ಜನ್ಮದಿನದ ಆಚರಣೆಯ ಅಂಗವಾಗಿ ಪಕ್ಷದ ವತಿಯಿಂದ ಇಂದು ನಗರದ ಕುಮಾರಕೃಪಾ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುತ್ತಿದ್ದು, ಕೃಷಿ, ಶಿಕ್ಷಣ ಮತ್ತು ಸಮಾಜಸೇವೆಯಲ್ಲಿ ಗಮನಾರ್ಹ ಕೊಡುಗೆ ನೀಡಿದ ಪ್ರಮುಖರು ಸನ್ಮಾನವನ್ನು ಸ್ವೀಕರಿಸಲಿದ್ದಾರೆ. ಪ್ರತಿಯೊಂದು ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಸಾಧಕ ಹಾಗೂ ಶ್ರಮಜೀವಿ ರೈತರನ್ನು ಗುರುತಿಸಿ ಅವರಿಗೆ ಗೌರವ ಸಲ್ಲಿಸುವ ಕಾರ್ಯವನ್ನು ಈ ಮೂಲಕ ಕೈಗೊಳ್ಳಲಾಗುತ್ತಿದೆ. ಇನ್ನು ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಶಶಿಕಾಂತ್ ಗುರೂಜಿ ಅವರಿಗೆ 2026-27ನೇ ಸಾಲಿನ ಮೌಲ್ಯಾಧಾರಿತ ಕಾಯಕಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಕಳೆದ ನಾಲ್ಕು ತಿಂಗಳುಗಳಿಂದ ನಿರಂತರ ಸಭೆಗಳನ್ನು ನಡೆಸಿ, ವಿವಿಧ ಜಿಲ್ಲೆಗಳಿಗೆ ಪದಾಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಈ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಬಿಡದಿ ಟೌನ್ಶಿಪ್ ಗೆ ವಿರೋಧ:
ರಾಜ್ಯದಲ್ಲಿ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ರೈತರ ಹಿತಾಸಕ್ತಿಗೆ ಧಕ್ಕೆಯಾಗುತ್ತಿದ್ದು, ಇದನ್ನು ಜನತಾ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಮುಖ್ಯವಾಗಿ ಬಿಡದಿಯಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ಟೌನ್ಶಿಪ್ ಯೋಜನೆಯಿಂದ ಸ್ಥಳೀಯ ರೈತರಿಗೆ ತುಂಬಾ ಅನ್ಯಾಯವಾಗುತ್ತಿದ್ದು, ಈ ಕುರಿತು ಪಕ್ಷವು ರೈತರ ಪರವಾಗಿ ನಿಲ್ಲಲಿದೆ ಎಂದು ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ನಾಗೇಶ್ ಎನ್ ತಿಳಿಸಿದರು.
ಬಿಡದಿ ಭಾಗದಲ್ಲಿ ಸೇಬು, ರೇಷ್ಮೆ, ತೆಂಗು, ತರಕಾರಿ ಬೆಳೆಯುವ ಹಾಗೂ ಹಾಲಿನ ಉತ್ಪಾದನೆಯಲ್ಲಿ ತೊಡಗಿರುವ ಪ್ರಗತಿಪರ ರೈತರಿದ್ದಾರೆ. ಬೆಂಗಳೂರು ನಗರಕ್ಕೆ ಅಗತ್ಯವಿರುವ ಹೆಚ್ಚಿನ ತರಕಾರಿ ಮತ್ತು ಹಾಲು ಈ ಭಾಗದಿಂದ ಸರಬರಾಜಾಗುತ್ತಿದೆ. ಹೀಗಿದ್ದರೂ, ರೈತರ ಫಲವತ್ತಾದ ಜಮೀನನ್ನು ಕಸಿದುಕೊಳ್ಳುವ ಪ್ರಯತ್ನ ನಡೆಸುತ್ತಿರುವುದು ಸರಿಯಲ್ಲ. ಅಭಿವೃದ್ಧಿ ಯೋಜನೆಗಳನ್ನು ಬಂಜರು ಭೂಮಿಗಳಲ್ಲಿ ಕೈಗೊಳ್ಳಬೇಕೇ ಹೊರತು, ಬೆಳೆ ಬೆಳೆಯುವ ಭೂಮಿಯಲ್ಲಿ ಅಲ್ಲ ಎಂದು ಪ್ರತಿಪಾದಿಸಿದರು.
ರೈತರ ಹೋರಾಟಕ್ಕೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಕಂಚುಗನಹಳ್ಳಿ ಸೇರಿದಂತೆ ವಿವಿಧ ಭಾಗಗಳಲ್ಲಿ ಈಗಾಗಲೇ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಭೇಟಿ ನೀಡಿ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಈ ಕುರಿತು ಕೆಲ ದಿನಗಳಲ್ಲಿ ರಾಮನಗರದ ಐಬಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮುಂದಿನ ಹೋರಾಟದ ರೂಪುರೇಷೆ ಪ್ರಕಟಿಸಲಾಗುವುದು ಎಂದು ನಾಗೇಶ್ ಎನ್ ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಜನತಾ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಮಾದೇಗೌಡ, ರಾಜ್ಯ ರೈತ ಘಟಕದ ಅಧ್ಯಕ್ಷ ಭೈರೇಗೌಡ ಸೇರಿದಂತೆ ಪಕ್ಷದ ಹಲವು ಮುಖಂಡರು ಉಪಸ್ಥಿತರಿದ್ದರು.















