ಬೆಂಗಳೂರು: ಕೆಐಎಡಿಬಿ ಕೈಗಾರಿಕೋದ್ಯಮಗಳಿಂದ ಭೂಮಿಗೆ ಮರುನೋಂದಣಿಯಾಗಿ ಹೆಚ್ಚುವರಿ ಶುಲ್ಕ ಪಡೆಯಲು ಮುಂದಾಗಿದ್ದು, ಶೀಘ್ರವೇ ಈ ಮೊತ್ತವನ್ನು ಇಳಿಕೆ ಮಾಡುವಂತೆ ಮಾನ್ವಿ ಗ್ರೋಥ್ ಸೆಂಟರ್ ಇಂಡಿಸ್ಟ್ರಿಯಲ್ ಅಸೋಸಿಯೇಷನ್ ಆಗ್ರಹಿಸಿದೆ.
ಗುರುವಾರ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ ಅಧ್ಯಕ್ಷ ವೀರಭದ್ರಪ್ಪ ಅಲ್ದಾಳ್ ಮಾತನಾಡಿ, ಕೆಐಎಡಿಬಿ ನೀಡಿರುವ ಭೂಮಿಯಲ್ಲಿ ಕೋಟ್ಯಾಂತರ ರೂ.ಗಳ ಹಣ ಹೂಡಿಕೆ ಮಾಡಿದ್ದೇವೆ. ಹಲವು ತರಹದ ಉದ್ಯಮಗಳನ್ನು ಪ್ರಾರಂಭಿಸಿದ್ದೇವೆ. ಮುಖ್ಯವಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ, ತೆರಿಗೆಯನ್ನು ಕಟ್ಟುತ್ತಾ ಬರಲಾಗುತ್ತಿದೆ. ಈ ಎಲ್ಲಾ ಕಾರಣದಿಂದ ಕೆಐಎಡಿಬಿ ಹೆಚ್ಚುವರಿ ಶುಲ್ಕ ಪಡೆಯುವುದರ ಬಗ್ಗೆ ರಾಜ್ಯ ಸರ್ಕಾರ ಗಮನಹರಿಸಬೇಕಿದೆ ಎಂದು ಒತ್ತಾಯಿಸಿದರು.
ಈಗಾಗಲೇ ಒಂದು ಎಕರೆ ಭೂಮಿಗೆ 11 ಲಕ್ಷ ರೂ.ಗಳಂತೆ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ನೋಂದಣಿ ಶುಲ್ಕವಾಗಿ ಒಟ್ಟು 16 ಲಕ್ಷ ರೂ.ಗಳನ್ನು ಕಟ್ಟಿಸಿಕೊಳ್ಳಲಾಗುತ್ತಿದೆ. ಆದರೆ ಮತ್ತೆ ಕೆಲ ಸಬೂಬುಗಳನ್ನು ಮುಂದಿಟ್ಟುಕೊಂಡು ಒಂದು ಎಕರೆಗೆ ಮತ್ತೆ 40 ಲಕ್ಷ ಕಟ್ಟಿ ಎಂದು ಹೇಳುತ್ತಿದೆ. ಆದರೆ ಉದ್ಯಮಕ್ಕೆಂದು ನಾವುಗಳು ಈಗಾಗಲೇ ಸಾಲ ಪಡೆದಿರುವ ನಮಗೆ ಬ್ಯಾಂಕ್‌ಗಳು ಕೆಲ ಷರತ್ತುಗಳನ್ನು ವಿಧಿಸುತ್ತಿವೆ. ಹಾಗಾಗಿ ರಾಜ್ಯದ ಮುಖ್ಯಮಂತ್ರಿಗಳಾದರೂ ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಮಧ್ಯಪ್ರವೇಶಿಸಬೇಕು ಎಂದು ಮನವಿ ಮಾಡಿದರು.
ರಾಯಚೂರು ಸುತ್ತಮುತ್ತಲ ಕೈಗಾರಿಕಾ ಪ್ರದೇಶಗಳ ಎಕರೆ ಭೂಮಿಗೆ 7 ರಿಂದ 8 ಲಕ್ಷ ರೂ.ಗಳನ್ನಷ್ಟೇ ನೋಂದಣಿ ಶುಲ್ಕವಾಗಿ ಉದ್ಯಮಿಗಳಿಂದ ಪಡೆಯಲಾಗಿದೆ. ಇತರೆ ಜಿಲ್ಲೆಗಳಲ್ಲೂ ಸಾಮಾನ್ಯವಾಗಿ ಇದೇ ಪರಿಸ್ಥಿತಿ ಇದ್ದು, ಮಾನ್ವಿ ಸುತ್ತಮುತ್ತ ಮಾತ್ರ ಎಕರೆಗೆ ಹೆಚ್ಚಿನ ನೋಂದಣಿ ಶುಲ್ಕ ಪಡೆಯಲು ಮುಂದಾಗಲಾಗಿದೆ. ಮುಖ್ಯವಾಗಿ ಬೆಂಗಳೂರನ್ನು ಒಳಗೊಂಡು ಸುತ್ತಮುತ್ತಲ ಕೈಗಾರಿಕೆಗಳಿಗೆ ಒತ್ತು ನೀಡುವ ಬದಲು ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಯನ್ನು ಉತ್ತೇಜಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಶ್ರೀರಾಮ್ ಈಡಿಗ, ಕೋಶಾಧಿಕಾರಿ ಅಮರೇಶ್ ಶೆಟ್ಟಿ ಹಾಗೂ ಇತರರಿದ್ದರು.















