ಬೆಂಗಳೂರು: ಜನಸಾಮಾನ್ಯರ ಮೇಲೆ ಅನುಚಿತವಾಗಿ ವರ್ತನೆ ತೋರಿದ ಮಾಲೂರು ನ್ಯಾಯಾಧೀಶೆ ಗಾಯಿತ್ರಿ ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಬೆಂಗಳೂರು ವಕೀಲರ ಸಂಘ ಆಗ್ರಹಿಸಿದೆ.
ಈ ಕುರಿತು ಮಂಗಳವಾರ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ವಾಹನವನ್ನು ನಿಧಾನವಾಗಿ ಚಲಾಯಿಸಿ ಎಂದು ಹೇಳಿದ ಮಾತ್ರಕ್ಕೆ ಯುವಕ ಮತ್ತು ಅವನ ಕುಟುಂಬದವರ ಮೇಲೆ ಕಾನೂನು ಕೈಗೆತ್ತಿಕೊಂಡು ಪೋಲಿಸ್ ಠಾಣೆವರೆಗೂ ಕರೆಸಿ ಮಾನಸಿಕ ಹಿಂಸೆ ನೀಡಿದ್ದಾರೆ. ಈ ವೈಖರಿ ಸರಿಯಲ್ಲ, ಇಂತಹ ವರ್ತನೆ ತೋರಿದ ನ್ಯಾಯಾಧೀಶರನ್ನು ಕೂಡಲೇ ಸೇವೆಯಿಂದಲೇ ವಜಾಗೊಳಿಸಬೇಕು. ಈ ಬಗ್ಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರಿಗೂ ದೂರು ನೀಡಲಾಗಿದೆ ಎಂದರು.
ಜವಾಬ್ದಾರಿ ಸ್ಥಾನದಲ್ಲಿರುವ ಮಹಿಳಾ ನ್ಯಾಯಾಧೀಶರೇ ಸಾಮಾನ್ಯ ಹುಡುಗನ ಮೇಲೆ ದೌರ್ಜನ್ಯವೆಸಗಿ ಮನಸೋ ಇಚ್ಚೆ ನಿಂದಿಸಿ ಪೊಲೀಸರನ್ನು ಕರೆಸಿ ಹುಡುಗನ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿರುವುದು ನೋಡಿದರೆ ಮಾನವ ಹಕ್ಕುಗಳ ಉಲ್ಲಂಘನೆಯಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಗೌರವದವಸ್ಥಾನದಲ್ಲಿರುವ ಒಬ್ಬ ಮಹಿಳಾ ನ್ಯಾಯಾಧೀಶರು ಈ ರೀತಿ ವರ್ತನೆ ಮಾಡಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ ಎಂದು ಹೇಳಿದರು.
ಈ ನ್ಯಾಯಾಧೀಶರ ಮೇಲಿರುವ ನಂಬಿಕೆ ಗೌರವ ಸುಳ್ಳಾಗಿದೆ. ನ್ಯಾಯಾಲಯದ ಘನತೆ ಉಳಿಸಿಕೊಳ್ಳದ ನ್ಯಾಯಾಧೀಶರನ್ನು ಕರ್ತವ್ಯದಿಂದ ಅಮಾನತು ಮಾಡಿ ಸೇವೆಯಿಂದಲೇ ವಜಾಗೊಳಿಸಬೇಕು ಎಂದು ವಿವೇಕ್ ಸುಬ್ಬಾರೆಡ್ಡಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನ್ಯಾಯಾಧೀಶರಿಂದ ಅವಮಾನಕ್ಕೊಳಗಾದ ಸಂತ್ರಸ್ತ ಯುವಕನ ಕುಟುಂಬದವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.














