ಫಿಸಿಯೋಥೆರಪಿ ಕ್ರೀಡಾಭಿವೃದ್ಧಿಯ ಅವಿಭಾಜ್ಯ ಅಂಗವಾಗಬೇಕು: ಡಾ. ಜಿ. ಪರಮೇಶ್ವರ್

WhatsApp
Telegram
Facebook
Twitter
LinkedIn

ಬೆಂಗಳೂರು: ಫಿಸಿಯೋಥೆರಪಿ ಇಂದು ಆಧುನಿಕ ಆರೋಗ್ಯ ಸೇವೆ ಮತ್ತು ಕ್ರೀಡಾ ವಿಜ್ಞಾನದ ಅವಿಭಾಜ್ಯ ಅಂಗವಾಗಿ ಬೆಳೆದಿದ್ದು, ರೋಗ ತಡೆಗಟ್ಟುವ ಆರೋಗ್ಯ ಸೇವೆಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಕ್ರೀಡಾ ಕ್ಷೇತ್ರದಲ್ಲಿ ಇದರ ಬಳಕೆಯನ್ನು ಮತ್ತಷ್ಟು ವಿಸ್ತರಿಸಿ, ಕರ್ನಾಟಕವನ್ನು ಫಿಸಿಯೋಥೆರಪಿಯ ಪ್ರಮುಖ ಕೇಂದ್ರವನ್ನಾಗಿ ರೂಪಿಸುವ ಅಗತ್ಯವಿದೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹೇಳಿದರು.

ನಗರದ ಐಟಿಸಿ ಗಾರ್ಡೇನಿಯಾದಲ್ಲಿ ಭಾನುವಾರ ನಡೆದ ಬೆಂಗಳೂರು ಫಿಸಿಯೋಥೆರಪಿಸ್ಟ್ಸ್ ನೆಟ್‌ವರ್ಕ್  ಕೊಲೋಕ್ವಿಯಂ–2026 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬೆಂಗಳೂರು ಫಿಸಿಯೋಥೆರಪಿಸ್ಟ್ಸ್ ನೆಟ್‌ವರ್ಕ್ ಸತತ 16ನೇ ವರ್ಷ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಇಂತಹ ವೃತ್ತಿಪರ ಸಮ್ಮೇಳನಗಳು ಕೇವಲ ತಜ್ಞರನ್ನು ಒಂದೆಡೆ ಸೇರಿಸುವ ವೇದಿಕೆಗಳಲ್ಲ; ಬದಲಾಗಿ ವೃತ್ತಿಯ ಮುಂದಿರುವ ಸವಾಲುಗಳ ಕುರಿತು ಚರ್ಚಿಸಿ, ಜ್ಞಾನ ವಿನಿಮಯ ನಡೆಸಿ, ಭವಿಷ್ಯದ ದಿಕ್ಕನ್ನು ನಿರ್ಧರಿಸುವ ಪರಿಹಾರಗಳನ್ನು ಕಂಡುಕೊಳ್ಳುವ ಮಹತ್ವದ ವೇದಿಕೆಗಳಾಗಿವೆ ಎಂದು ಎಂದರು.

ಸಮ್ಮೇಳನದಲ್ಲಿ ಚರ್ಚೆಗೆ ಆಯ್ಕೆ ಮಾಡಿರುವ ವಿಷಯಗಳು ಯುವ ಫಿಸಿಯೋಥೆರಪಿಸ್ಟ್‌ಗಳಿಗೆ ಅತ್ಯಂತ ಉಪಯುಕ್ತವಾಗಿದ್ದು, ಆರೋಗ್ಯ ಕ್ಷೇತ್ರದ ಬದಲಾಗುತ್ತಿರುವ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ರೋಗಿಗಳಿಗೆ ಇನ್ನಷ್ಟು ಪರಿಣಾಮಕಾರಿ ಸೇವೆ ನೀಡಲು ನೆರವಾಗಲಿವೆ. ದೈಹಿಕ ಚಿಕಿತ್ಸೆಯ ವಿವಿಧ ವಿಧಾನಗಳು ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿದ್ದರೂ, ವಿಶೇಷವಾಗಿ ವಿಶ್ವಯುದ್ಧಗಳ ನಂತರ ಗಾಯಗೊಂಡ ಸೈನಿಕರ ಪುನರ್ವಸತಿಯ ಅಗತ್ಯತೆಯೊಂದಿಗೆ ಫಿಸಿಯೋಥೆರಪಿ ವೈಜ್ಞಾನಿಕ ಚಿಕಿತ್ಸಾ ಪದ್ಧತಿಯಾಗಿ ಬೆಳೆಯಿತು ಎಂದು ಹೇಳಿದರು.

ಇಂದು ಇದು ಜಾಗತಿಕ ಆರೋಗ್ಯ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದ್ದು, ರೋಗಿಗಳ ಪುನರ್ವಸತಿ, ಶೀಘ್ರ ಚೇತರಿಕೆ ಹಾಗೂ ಉತ್ತಮ ಜೀವನಮಟ್ಟ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ದೇಶದಲ್ಲಿ ವೈದ್ಯಕೀಯ ಹಾಗೂ ಫಿಸಿಯೋಥೆರಪಿ ಶಿಕ್ಷಣದ ವ್ಯಾಪ್ತಿ ವಿಸ್ತರಿಸಿದೆ. ಪ್ರತಿವರ್ಷ ಸಾವಿರಾರು ವೈದ್ಯರು ಮತ್ತು ಫಿಸಿಯೋಥೆರಪಿ ವೃತ್ತಿಪರರು ಹೊರಬರುತ್ತಿದ್ದರೂ, ದೇಶದ ಪ್ರತಿಯೊಬ್ಬ ನಾಗರಿಕನಿಗೂ ಗುಣಮಟ್ಟದ ಆರೋಗ್ಯ ಸೇವೆಯನ್ನು ತಲುಪಿಸುವುದು ಇನ್ನೂ ದೊಡ್ಡ ಸವಾಲಾಗಿದೆ ಎಂದು ಹೇಳಿದರು.

ಫಿಸಿಯೋಥೆರಪಿಯನ್ನು ಕೇವಲ ನೋವು ಅಥವಾ ಗಾಯವಾದಾಗ ಪಡೆಯುವ ಚಿಕಿತ್ಸೆಯಾಗಿ ಪರಿಗಣಿಸದೆ, ಪ್ರತಿಯೊಬ್ಬರ ಜೀವನಶೈಲಿಯ ಭಾಗವಾಗಿ ಅಳವಡಿಸಿಕೊಳ್ಳುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಒತ್ತು ನೀಡಬೇಕು. ಆರೋಗ್ಯವಂತ ಸಮಾಜವು ದೇಶದ ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ನಾನು ಅಥ್ಲೀಟ್ ಆಗಿದ್ದ ಸಂದರ್ಭದಲ್ಲಿ ಸ್ನಾಯು ಸೆಳೆತ ಹಾಗೂ ಗಾಯಗಳಿಂದಾಗಿ ಅನೇಕ ಬಾರಿ ಪ್ರಮುಖ ಸ್ಪರ್ಧೆಗಳನ್ನು ತಪ್ಪಿಸಿಕೊಳ್ಳಬೇಕಾಗುತ್ತಿತ್ತು. ನಾನು 100 ಮೀಟರ್ ಓಟವನ್ನು 10.9 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದ್ದೆ. ಇಂದಿನಂತೆ ವೈಜ್ಞಾನಿಕ ಪುನರ್ವಸತಿ ಹಾಗೂ ಫಿಸಿಯೋಥೆರಪಿ ಸೇವೆಗಳು ಅಂದು ಲಭ್ಯವಿದ್ದರೆ ನಾನು ಇನ್ನಷ್ಟು ಉತ್ತಮ ಸಾಧನೆ ಮಾಡಬಹುದಾಗಿತ್ತು ಎಂದು ಅಭಿಪ್ರಾಯಪಟ್ಟರು.

ಆಧುನಿಕ ಕ್ರೀಡಾ ಕ್ಷೇತ್ರದಲ್ಲಿ ಫಿಸಿಯೋಥೆರಪಿ ಗಾಯಗಳ ತಡೆ, ತ್ವರಿತ ಚೇತರಿಕೆ ಹಾಗೂ ಕ್ರೀಡಾಪಟುಗಳ ನಿರಂತರ ಸಾಧನೆಗೆ ಅತ್ಯಂತ ಅಗತ್ಯವಾಗಿದೆ. ಕ್ರೀಡಾ ಕ್ಷೇತ್ರದಲ್ಲಿ ಫಿಸಿಯೋಥೆರಪಿಯ ಪಾತ್ರವನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ. ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಕ್ರೀಡಾಪಟುಗಳಿಗೆ ತರಬೇತುದಾರರ ಜೊತೆಗೆ ಫಿಸಿಯೋಥೆರಪಿಸ್ಟ್‌ಗಳ ಸೇವೆಯೂ ದೊರೆಯುವಂತೆ ಮಾಡುವ ಕುರಿತು ಸಚಿವ ಸಂಪುಟದ ಮುಂದೆ ಪ್ರಸ್ತಾವನೆ ಮಂಡಿಸಲಾಗುವುದು. ಇದರಿಂದ ಕ್ರೀಡಾಪಟುಗಳ ಸಾಧನೆ ಹಾಗೂ ನೋವು ನಿರ್ವಹಣೆ ಇನ್ನಷ್ಟು ಪರಿಣಾಮಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುತ್ತಿದ್ದು, ಕ್ರೀಡಾ ವಿಜ್ಞಾನ ಪ್ರಯೋಗಾಲಯಗಳ ಸ್ಥಾಪನೆಗೆ ಈಗಾಗಲೇ ಕ್ರಮ ಕೈಗೊಂಡಿದೆ. ಸುಮಾರು 5 ಸಾವಿರ ಕೋಟಿ ವೆಚ್ಚದಲ್ಲಿ ಕಂಠೀರವ ಕ್ರೀಡಾಂಗಣವನ್ನು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ಸಂಕೀರ್ಣವಾಗಿ ಅಭಿವೃದ್ಧಿಪಡಿಸುವ ಪ್ರಸ್ತಾವನೆಯ ಭಾಗವಾಗಿ ಫಿಸಿಯೋಥೆರಪಿ ಹಾಗೂ ಕ್ರೀಡಾ ವಿಜ್ಞಾನಕ್ಕೆ ಪ್ರತ್ಯೇಕ ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ ಪರಿಶೀಲಿಸಲಾಗುವುದು. ಇದರಿಂದ ಬೆಂಗಳೂರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ವೈದ್ಯಕೀಯ ಮತ್ತು ಫಿಸಿಯೋಥೆರಪಿಯ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದು ತಿಳಿಸಿದರು.

ದೇಶದಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸೇವೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದರೂ, ಪ್ರತಿಯೊಬ್ಬ ನಾಗರಿಕನಿಗೂ ಸಮರ್ಪಕ ಆರೋಗ್ಯ ಸೇವೆಯನ್ನು ತಲುಪಿಸುವಲ್ಲಿ ಇನ್ನೂ ಸವಾಲುಗಳಿವೆ. ಅನೇಕ ಆರೋಗ್ಯ ಕೇಂದ್ರಗಳಲ್ಲಿ ತಾಂತ್ರಿಕ ಹಾಗೂ ಸಹಾಯಕ ಸಿಬ್ಬಂದಿಯ ಕೊರತೆ ಇದೆ. ಈ ನಿಟ್ಟಿನಲ್ಲಿ ಆರೋಗ್ಯ ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ. ಆರೋಗ್ಯ ಸೇವೆ ಒದಗಿಸುವಲ್ಲಿ ಕರ್ನಾಟಕವು ದೇಶದ ಹಲವು ರಾಜ್ಯಗಳಿಗಿಂತ ಮುಂಚೂಣಿಯಲ್ಲಿದ್ದು, ಆರೋಗ್ಯ, ಶಿಕ್ಷಣ, ಕೈಗಾರಿಕೆ ಹಾಗೂ ಹೂಡಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ರಾಜ್ಯ ಉತ್ತಮ ಸಾಧನೆ ಮಾಡಿದೆ. ಆದರೆ ಆರೋಗ್ಯ ಹಾಗೂ ಶಿಕ್ಷಣದಂತಹ ಆದ್ಯತಾ ಕ್ಷೇತ್ರಗಳಲ್ಲಿ ಸಾರ್ವಜನಿಕ ಹೂಡಿಕೆಯನ್ನು ಮತ್ತಷ್ಟು ಹೆಚ್ಚಿಸುವ ಅಗತ್ಯವಿದ್ದು, ಆರೋಗ್ಯವಂತ ಸಮಾಜವೇ ಸಮಗ್ರ ಅಭಿವೃದ್ಧಿಗೆ ಹಾಗೂ ಆರ್ಥಿಕ ಪ್ರಗತಿಗೆ ಭದ್ರ ಬುನಾದಿಯಾಗಿದೆ ಎಂದು ತಿಳಿಸಿದರು.

ಕರ್ನಾಟಕವು ಫಿಸಿಯೋಥೆರಪಿ ಮತ್ತು ಪುನರ್ವಸತಿ ಕ್ಷೇತ್ರದಲ್ಲಿಯೂ ದೇಶದ ಪ್ರಮುಖ ಕೇಂದ್ರವಾಗಿ ಬೆಳೆಯುವ ಎಲ್ಲಾ ಸಾಮರ್ಥ್ಯವನ್ನು ಹೊಂದಿದೆ. ಭಾರತದ ಆರೋಗ್ಯ ಹಾಗೂ ಸ್ವಾಸ್ಥ್ಯದ ಪರಂಪರೆಯನ್ನು ಆಧುನಿಕ ವೈಜ್ಞಾನಿಕ ಜ್ಞಾನದೊಂದಿಗೆ ಸಂಯೋಜಿಸುವ ಮೂಲಕ ಜಾಗತಿಕ ಮಟ್ಟದ ಫಿಸಿಯೋಥೆರಪಿ ಮತ್ತು ಪುನರ್ವಸತಿ ಕೇಂದ್ರಗಳನ್ನು ನಿರ್ಮಿಸುವ ಕುರಿತು ಚಿಂತನೆ ನಡೆಸಬೇಕು. ಸಮ್ಮೇಳನದಲ್ಲಿ ಭಾಗವಹಿಸಿರುವ ತಜ್ಞರು ಫಿಸಿಯೋಥೆರಪಿ ವೃತ್ತಿಯ ಭವಿಷ್ಯದ ಕುರಿತು ಸಮಗ್ರವಾಗಿ ಚರ್ಚಿಸಿ, ಸರ್ಕಾರಕ್ಕೆ ಅಗತ್ಯ ಸಲಹೆ ಹಾಗೂ ಶಿಫಾರಸುಗಳನ್ನು ಸಲ್ಲಿಸಬೇಕು ಮನವಿ ಮಾಡಿದರು.

ಫಿಸಿಯೋಥೆರಪಿ ಶಿಕ್ಷಣ, ಸಂಶೋಧನೆ, ವೃತ್ತಿಪರ ಬೆಳವಣಿಗೆ ಹಾಗೂ ಸಾರ್ವಜನಿಕ ಆರೋಗ್ಯ ಸೇವೆಯನ್ನು ಬಲಪಡಿಸುವ ಯಾವುದೇ ಉತ್ತಮ ಪ್ರಸ್ತಾವನೆಗಳಿಗೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಕ್ರಮದ ಆಯೋಜಕರು, ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ ಪ್ರತಿನಿಧಿಗಳು ಹಾಗೂ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸುತ್ತೇನೆ. ಯುವ ಫಿಸಿಯೋಥೆರಪಿಸ್ಟ್‌ಗಳು ಹೊಸ ಚಿಂತನೆ, ವೈಜ್ಞಾನಿಕ ದೃಷ್ಟಿಕೋನ ಹಾಗೂ ನವೀನತೆಯೊಂದಿಗೆ ಈ ವೃತ್ತಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯವ ವಿಶ್ವಾಸವಿದೆ ಎಂದು ಜಿ. ಪರಮೇಶ್ವರ್ ತಿಳಿಸಿದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon