ಬೆಂಗಳೂರು: ವಿದ್ಯಾರ್ಥಿಗಳಿಗೆ ಕೇವಲ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುವುದಷ್ಟೇ ಗುರಿಯಾಗಬಾರದು. ಶ್ರದ್ಧೆಯಿಂದ ಅಧ್ಯಯನ ಮಾಡಿ ತಮ್ಮ ಭವಿಷ್ಯದ ಜತೆಗೆ ರಾಷ್ಟ್ರದ ಭವಿಷ್ಯವನ್ನೂ ರೂಪಿಸುವ ಪ್ರತಿಭಾವಂತರಾಗಿ ಬೆಳೆಯುವ ಸಂಕಲ್ಪ ಅವರದ್ದಾಗಿರಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿ ತಿಳಿಸಿದರು.
ಶನಿವಾರ ವಿಜಯನಗರದ ಒಕ್ಕಲಿಗರ ಒಕ್ಕೂಟ ಟ್ರಸ್ಟ್ ನಿಂದ ನಡೆದ 13ನೇ ವರ್ಷದ ಜನಪದ ಸಂಭ್ರಮ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮಗಳು ಸಮಾಜಕ್ಕೆೆ ಉತ್ತಮ ಸಂದೇಶ ನೀಡುತ್ತವೆ. ಇಂತಹ ಗೌರವಗಳು ವಿದ್ಯಾರ್ಥಿಗಳಿಗೆ ಮತ್ತಷ್ಟು ಸಾಧನೆ ಮಾಡುವ ಆತ್ಮವಿಶ್ವಾಸವನ್ನು ನೀಡುತ್ತವೆ. ಆದಿಚುಂಚನಗಿರಿ ಮಹಾಸಂಸ್ಥಾನ ದೇಶ-ವಿದೇಶಗಳಲ್ಲಿ ಶಿಕ್ಷಣ, ಆರೋಗ್ಯ, ಧಾರ್ಮಿಕ ಮತ್ತು ಸಾಮಾಜಿಕ ಸೇವೆಗಳ ಮೂಲಕ ವಿಶಿಷ್ಟ ಸ್ಥಾನವನ್ನು ಪಡೆದಿದೆ ಎಂದರು.
ಮಹಾಸಂಸ್ಥಾಾನದ ವಿವಿಧ ಶಾಖೆಗಳಲ್ಲಿ ಸಂಪೂರ್ಣ ತ್ಯಾಗಮಯ ಜೀವನ ನಡೆಸುತ್ತಿರುವ ಸನ್ಯಾಾಸಿಗಳು ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಬೆಂಗಳೂರಿನ ಸೇವಾ ಕಾರ್ಯಗಳನ್ನು ಸ್ವಾಮಿನಾಥ ಸ್ವಾಮೀಜಿಗಳು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಪ್ರತಿವರ್ಷ ಜನಪದ ಸಂಭ್ರಮ ಕಾರ್ಯಕ್ರಮಕ್ಕೆ ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಈ ಬಾರಿ ಕಾರ್ಯಕ್ರಮದ ಸ್ಥಳ ಸಣ್ಣದಾಗಿದ್ದರೂ, ಆಯೋಜಕರ ಹೃದಯದ ವಿಶಾಲತೆ ಮತ್ತು ಸೇವಾಭಾವದಿಂದ ಹೆಚ್ಚಿನ ಸಂಖ್ಯೆಯ ಜನರು ಪಾಲ್ಗೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದರು.
ವಯಸ್ಸು ದೇಹಕ್ಕಷ್ಟೇ, ಮನಸ್ಸಿಗೆ ಅಲ್ಲ:
ಕೆಲವರು ಅರವತ್ತು ವರ್ಷ ಮುಟ್ಟುವ ಮುನ್ನವೇ ತಾವು ವೃದ್ಧರಾಗಿದ್ದೇವೆ ಎಂಬ ಭಾವನೆಯೊಂದಿಗೆ ಬದುಕುತ್ತಾರೆ. ಆದರೆ ಇನ್ನೂ ಕೆಲವರು ಎಪ್ಪತ್ತು ವರ್ಷ ದಾಟಿದರೂ ಉತ್ಸಾಾಹ, ಚೈತನ್ಯ ಮತ್ತು ಸೇವಾ ಮನೋಭಾವವನ್ನು ಕಳೆದುಕೊಳ್ಳುವುದಿಲ್ಲ. ವಯಸ್ಸು ದೇಹಕ್ಕಷ್ಟೇ, ಮನಸ್ಸಿಗೆ ಅಲ್ಲ. ಸರ್.ಎಂ. ವಿಶ್ವೇಶ್ವರಯ್ಯ ಅವರಿಗೆ ಅವರ 99ನೇ ವರ್ಷದ ಜನ್ಮದಿನದ ವೇಳೆ ಒಬ್ಬ ಯುವಕ 100ನೇ ವರ್ಷದ ಹುಟ್ಟುಹಬ್ಬಕ್ಕೂ ನೀವು ಇರುತ್ತೀರಾ? ಎಂದು ಕೇಳಿದಾಗ, ವಿಶ್ವೇಶ್ವರಯ್ಯ ಅವರು ನನಗೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ. ನಾನು ಇರುತ್ತೇನೆ, ನಿಮಗೇನಾದರೂ ಸಮಸ್ಯೆೆಯಿದೆಯೇ? ಎಂದು ಹಾಸ್ಯಮಯವಾಗಿ ಉತ್ತರಿಸಿದ್ದರು. ಈ ಪ್ರಸಂಗವು ಸಕಾರಾತ್ಮಕ ಮನೋಭಾವ, ಆತ್ಮವಿಶ್ವಾಸ ಮತ್ತು ಆರೋಗ್ಯಕರ ಜೀವನಶೈಲಿಯ ಮಹತ್ವ ಸಾರುತ್ತದೆ. ಜೀವನದಲ್ಲಿ ಉತ್ಸಾಹ ಮತ್ತು ಗುರಿ ಇದ್ದರೆ ವಯಸ್ಸು ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬ ಸಂದೇಶವನ್ನು ಯುವಜನತೆ ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ, ಅಖಿಲ ಕರ್ನಾಟಕ ಡಾ. ರಾಜ್ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು, ಕಾಂಪೋಸ್ಟ್ ಅಭಿವೃದ್ಧಿ ನಿಗಮ ಅಧ್ಯಕ್ಷ ನಟರಾಜ್ ಗೌಡ, ಒಕ್ಕಲಿಗರ ಒಕ್ಕೂಟ ಟ್ರಸ್ಟ್ ಅಧ್ಯಕ್ಷ ಸಿ.ವಿ ದೇವರಾಜ್ ಸೇರಿದಂತೆ ಇನ್ನಿತರರು ಇದ್ದರು.














