ಶಾಸಕ ಗೋಪಾಲಯ್ಯ ಅವರ 66ನೇ ಹುಟ್ಟು ಹಬ್ಬದ ಪ್ರಯುಕ್ತ ಅಕ್ಷರಾಭ್ಯಾಸ ಕಾರ್ಯಕ್ರಮ

WhatsApp
Telegram
Facebook
Twitter
LinkedIn

ಬೆಂಗಳೂರು: ಮಹಾಲಕ್ಷ್ಮೀ ಲೇಔಟ್‌ ವಿಧಾನಸಭಾ ಕ್ಷೇತ್ರದ ವೃಷಭಾವತಿನಗರ, ಕಮಲಾನಗರ ಹಾಗೂ ಕುರುಬರಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಗಳ ಸುಮಾರು 280 ಎಲ್.ಕೆ.ಜಿ ವಿದ್ಯಾರ್ಥಿಗಳಿಗೆ ಶಾಸಕ ಕೆ ಗೋಪಾಲಯ್ಯ ಅವರ 66ನೇ ಹುಟ್ಟು ಹಬ್ಬದ ಪ್ರಯುಕ್ತ ಆದಿಚುಂಚನಗಿರಿ ಮಠಾಧೀಶರಾದ ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರು ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಾಜಿ ಶಾಸಕ ನೆ.ಲ ನರೇಂದ್ರಬಾಬು, ಮಾಜಿ ಉಪ ಮೇಯರ್‌ ಹೇಮಲತಾ ಗೋಪಾಲಯ್ಯ, ಮಾಜಿ ಕಾರ್ಪೊರೇಟರ್‌ ಗಳಾದ ನಾಗರತ್ನ ಲೋಕೇಶ್‌, ಪದ್ಮಾವತಿ ಶ್ರೀನಿವಾಸ್, ರಾಜೀವ್‌ ಗಾಂಧಿ ವಿಶ್ವ ವಿದ್ಯಾಲಯದ ಸೆನೆಟ್‌ ಸದಸ್ಯ ಡಾ. ಜಿ.ಮಂಜುನಾಥ್‌ ಗೌಡ, ಡಿ.ಡಿ.ಪಿ.ಐ ಆಂಜನಪ್ಪ, ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಲಾನಂದನಾಥ ಸ್ವಾಮೀಜಿ, ಹೋಮಕುಂಡದಲ್ಲಿ ಅರ್ಪಿಸುವ ಹವಿಸ್ಸನ್ನು ಉದಾಹರಣೆಯಾಗಿ ನೀಡಿ, ತ್ಯಾಗವೇ ಮುಕ್ತಿಗೆ ಮಾರ್ಗ ಎಂದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಜ್ಞಾನವೇ ಮುಕ್ತಿಗೆ ದಾರಿ, ನಾಶವಿಲ್ಲದ ಜ್ಞಾನವನ್ನು ಮಕ್ಕಳಿಗೆ ಕಲಿಸುವ ಮುನ್ನ ತಂದೆ ತಾಯಿಯಂದಿರು ಜ್ಞಾನವಂತರಾಗಬೇಕು. ಅಮೃತತ್ವದ ಸ್ಥಿತಿಯನ್ನು ತಲುಪಲು ಮೊದಲು ನಮಗೆ ನಾಶವಿಲ್ಲದ ಜ್ಞಾನದ ಅವಶ್ಯಕತೆ ಇದೆ. ಅಂತಹ ಜ್ಞಾನದ ಸಾಂಪ್ರದಾಯಿಕ ಆರಂಭವೇ ಇಂದಿನ ಅಕ್ಷರಾಭ್ಯಾಸ ಎಂದು ಶುಭ ಹಾರೈಕೆಯ ನುಡಿಗಳನ್ನು ಆಡಿದರು.

ಶಾಸಕ ಗೋಪಾಲಯ್ಯ ಮಾತನಾಡಿ, ನನ್ನ ಕ್ಷೇತ್ರದಲ್ಲಿ ಕೋಟ್ಯಂತರ ರೂಪಾಯಿಗಳ ವೆಚ್ಚದಲ್ಲಿ 5 ಅತ್ಯುತ್ತಮ ಸರ್ಕಾರಿ ಶಾಲೆಗಳನ್ನು ನಿರ್ಮಿಸಲಾಗಿದೆ. ಬಡವರ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕೆನ್ನುವುದೇ ನನ್ನ ಉದ್ದೇಶವಾಗಿದೆ. ಇದರ ಫಲವಾಗಿ ಕೇವಲ 200 ಮಕ್ಕಳಿದ್ದ ಈ ಶಾಲೆಗಳಲ್ಲಿ ಈಗ ಎಲ್.ಕೆ.ಜಿಯಿಂದ 10ನೇ ತರಗತಿಯವರೆಗೆ 7000 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರುಗಳಿಗೆ ಯಾವುದೇ ಕೊರತೆಯಾಗಬಾರದೆಂದು, ಖಾಸಗಿ ಶಾಲೆಗಳ ಮಾದರಿಯಲ್ಲೇ ಸರ್ಕಾರಿ ಶಾಲೆಯ ಎಲ್‌.ಕೆ.ಜಿ ಮತ್ತು ಯು.ಕೆ.ಜಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಇಂಗ್ಲಿಷ್ ಹಾಗೂ ಕನ್ನಡ ಮಾಧ್ಯಮದ ಪಠ್ಯಪುಸ್ತಕಗಳು, ಬ್ಯಾಗ್ ಮತ್ತು ಸ್ವೆಟರ್‌ಗಳನ್ನು ಮಹಾಲಕ್ಷ್ಮಿ ಎಜುಕೇಶನಲ್ ಟ್ರಸ್ಟ್ ವತಿಯಿಂದ ಉಚಿತವಾಗಿ ನೀಡಲಾಗುತ್ತಿದೆ ಎಂದು ತಿಳಿಸಿದರು.

10ನೇ ತರಗತಿಯ 10 ಸಾವಿರ ಸ್ಟೇಟ್‌ ಸಿಲೆಬಸ್‌ ವಿದ್ಯಾರ್ಥಿಗಳಿಗೆ ಉಚಿತವಾಗಿ ಪರೀಕ್ಷಾ ಮಾರ್ಗದರ್ಶಿ ಪುಸ್ತಕಗಳನ್ನು ವಿತರಿಸಲಾಗಿದೆ. ಇದರ ಫಲವಾಗಿ ಈ ಸಾಲಿನಲ್ಲಿ ಮಕ್ಕಳು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಎಲ್‌.ಕೆ.ಜಿಯಿಂದ ಪಿ.ಯು.ಸಿವರೆಗೆ ಶಿಕ್ಷಣ ನೀಡುತ್ತಿರುವ ಈ ಆವರಣದಲ್ಲೇ ಮುಂದಿನ ದಿನಗಳಲ್ಲಿ ಡಿಗ್ರಿ ಕಾಲೇಜನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆಯನ್ನು ನೀಡಿದರು.

ಸ್ಥಳೀಯ ಮುಖಂಡರುಗಳಾದ ಕಿರಣ್‌, ಡಾ.ಜಿ. ಸಂಜಯ್‌ ಗೌಡ, ಬಿ.ವಿ.ಸೋಮಶೇಖರ್‌, ರಂಗನಾಥ್‌, ರಾಘವೇಂದ್ರ (ಗುರು) ಹಾಗೂ ಪೋಷಕರು ಈ ಸಮಾರಂಭದಲ್ಲಿ ಪಾಲ್ಗೊಂಡು ಸ್ವಾಮೀಜಿಯವರ ಆಶೀರ್ವಾದ ಪಡೆದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon