ಪ್ರಧಾನಿ ನರೇಂದ್ರ ಮೋದಿ ಅವರಂತಹ ದೇಶಸೇವಕನ ನಾಯಕತ್ವ ಅಗತ್ಯವಿದೆ: ಎಸ್.ಆರ್. ವಿಶ್ವನಾಥ್

WhatsApp
Telegram
Facebook
Twitter
LinkedIn

ಬೆಂಗಳೂರು: ಈಶಾನ್ಯ ರಾಜ್ಯಗಳಿಂದ ಹಿಡಿದು ಬೆಂಗಳೂರು ಸೇರಿದಂತೆ ದೇಶದ ವಿವಿಧ ಭಾಗಗಳಿಗೆ ಅನೇಕ ಮಹತ್ವಾಕಾಂಕ್ಷಿ ಯೋಜನೆಗಳನ್ನು ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರಂತಹ ದೇಶಸೇವಕನ ನಾಯಕತ್ವ ದೇಶಕ್ಕೆ ಇಂದು ಹಾಗೂ ಮುಂದೆಯೂ ಅಗತ್ಯವಿದೆ ಎಂದು ಶಾಸಕ ಎಸ್.ಆರ್. ವಿಶ್ವನಾಥ್ ಅಭಿಪ್ರಾಯಪಟ್ಟರು.

ನಗರದ ಸೆಂಚುರಿ ಕ್ಲಬ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಪ್ರಕಾಶ್ ಶೇಷರಾಘವಾಚಾರ್ ಅವರ ಮೂರನೇ ಕೃತಿಯಾದ ವಿಕಾಸ ಪಥ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ  ಮಾತನಾಡಿದ ಅವರು, ಐದು ಶತಮಾನಗಳ ಸಂಕಲ್ಪವಾಗಿದ್ದ ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣ ಹಾಗೂ ರಾಮಲಲ್ಲಾ ದರ್ಶನದ ಕನಸು ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಸಾಕಾರಗೊಂಡಿದೆ. ದೇಶದ ಭದ್ರತೆ ಮತ್ತು ರಕ್ಷಣಾ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಿದ ಹೆಗ್ಗಳಿಕೆ ಮೋದಿ ಸರ್ಕಾರದ್ದಾಗಿದೆ, ಶತ್ರು ರಾಷ್ಟ್ರಗಳಿಗೆ ಭಾರತದ ಸಾಮರ್ಥ್ಯದ ಅರಿವನ್ನು ಮೂಡಿಸಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ದಿನದ 18 ಗಂಟೆಗಳ ಕಾಲ ದೇಶಸೇವೆಗೆ ಮೀಸಲಿಟ್ಟಿರುವ ನಾಯಕರಾಗಿದ್ದಾರೆ. ದೇಶದ ಹಿತಕ್ಕಾಗಿ ಶ್ರಮಿಸುತ್ತಿರುವ ಅವರ ನಾಯಕತ್ವವನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬ ಭಾರತೀಯರ ಹೊಣೆಗಾರಿಕೆಯಾಗಿದೆ. ವಿಕಾಸ ಪಥ ಪುಸ್ತಕದಲ್ಲಿ ಮೋದಿ ಸರ್ಕಾರದ ವಿವಿಧ ಯೋಜನೆಗಳು, ಅಭಿವೃದ್ಧಿ ಕಾರ್ಯಗಳು ಹಾಗೂ ಆಡಳಿತದ ಕಾರ್ಯತಂತ್ರಗಳ ಕುರಿತು ಸಮಗ್ರ ಮಾಹಿತಿ ನೀಡಲಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಈ ಕೃತಿಯನ್ನು ಓದಿ, ಇತರರಿಗೂ ತಲುಪಿಸುವ ಕಾರ್ಯ ಮಾಡಬೇಕು ಎಂದು ಕರೆ ನೀಡಿದರು.

ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಮಾತನಾಡಿ, ರಾಜಕೀಯ ಕ್ಷೇತ್ರದಲ್ಲಿ ಮಾತನಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಬರೆಯುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಹಿಂದೆ ಜವಾಹರಲಾಲ್ ನೆಹರು, ಮಹಾತ್ಮ ಗಾಂಧಿ, ಸಿ. ರಾಜಗೋಪಾಲಾಚಾರಿ, ಬಾಲಗಂಗಾಧರ ತಿಲಕ್, ಅಟಲ್ ಬಿಹಾರಿ ವಾಜಪೇಯಿ ಮೊದಲಾದ ನಾಯಕರು ನಿರಂತರವಾಗಿ ಲೇಖನಗಳು ಮತ್ತು ಪುಸ್ತಕಗಳನ್ನು ಬರೆಯುತ್ತಿದ್ದರು. ಆದರೆ ಇಂದು ರಾಜಕೀಯ ಕ್ಷೇತ್ರದಲ್ಲಿ ಅಕ್ಷರಗಳೊಂದಿಗೆ ನಂಟು ಹೊಂದಿರುವವರ ಸಂಖ್ಯೆ ಕಡಿಮೆಯಾಗಿದೆ. ಪುಸ್ತಕ ಪ್ರೇಮಿಗಳಿಗೆ ಸಮಾಜದಲ್ಲಿ ವಿಶೇಷ ಗೌರವವಿದೆ. ರಾಜಕೀಯ ಪಕ್ಷಗಳಲ್ಲಿ ಸಾಹಿತ್ಯ, ಸಂಸ್ಕೃತಿ ಮತ್ತು ಅಕ್ಷರಗಳನ್ನು ಉಳಿಸಿ ಬೆಳೆಸುವ ಪ್ರತ್ಯೇಕ ವೇದಿಕೆಗಳ ಅಗತ್ಯವಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಸಲಹೆ ನೀಡಿದ್ದೇನೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ 30ಕ್ಕೂ ಹೆಚ್ಚು ಮಾಲ್‌ಗಳಿದ್ದರೂ, ವಿಶ್ವಮಟ್ಟದ ಸಾರ್ವಜನಿಕ ಗ್ರಂಥಾಲಯಗಳ ಕೊರತೆ ಇದೆ. ಒಂದು ಉತ್ತಮ ಪುಸ್ತಕ ಸಾವಿರಾರು ಜನರ ಬದುಕಿನ ಮೇಲೆ ಪ್ರಭಾವ ಬೀರುವ ಶಕ್ತಿಯನ್ನು ಹೊಂದಿದೆ. ಆದ್ದರಿಂದ ಲೇಖಕರು, ಪುಸ್ತಕಗಳು ಮತ್ತು ಸಾಹಿತ್ಯ ಸಂಸ್ಕೃತಿಯನ್ನು ಪೋಷಿಸುವುದು ರಾಜಕೀಯ ನಾಯಕರು ಹಾಗೂ ಪಕ್ಷಗಳ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ವಿಕಾಸ ಪಥ ಕೇವಲ ಅಭಿವೃದ್ಧಿ ಕಾರ್ಯಗಳ ದಾಖಲೆಯಲ್ಲ. ದೇಶ ಎದುರಿಸಿದ್ದ ವಿವಿಧ ಸಮಸ್ಯೆಗಳಿಗೆ ಮೋದಿ ಸರ್ಕಾರ ಹೇಗೆ ಪರಿಹಾರ ಕಂಡುಕೊಂಡಿದೆ ಎಂಬುದನ್ನು ವಿವರಿಸುವ ಕೃತಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್ ವ್ಯಾಖ್ಯಾನಿಸಿದರು.

ಪುಸ್ತಕದ ಲೇಖಕ ಪ್ರಕಾಶ್ ಶೇಷರಾಘವಾಚಾರ್ ಮಾತನಾಡಿ, ಸರ್ಕಾರದ ಕಾರ್ಯಗಳು ಮತ್ತು ಸಾಧನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಯಕ ಹಾಗೂ ಕಾರ್ಯಕರ್ತರ ಮೇಲಿದೆ. ಪ್ರಧಾನಿ ಮೋದಿ ಅವರ ಹೆಸರು ಮತ್ತು ಭಾವಚಿತ್ರವನ್ನು ಕೇವಲ ಚುನಾವಣೆ ಸಂದರ್ಭದಲ್ಲಿ ಬಳಸುವುದಕ್ಕಿಂತ, ಅವರು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು, ಯೋಜನೆಗಳು ಮತ್ತು ಜನಪರ ಕಾರ್ಯಕ್ರಮಗಳನ್ನು ಸಮಾಜದ ಎಲ್ಲ ವರ್ಗಗಳಿಗೂ ತಲುಪಿಸುವ ಕೆಲಸವನ್ನು ಕಾರ್ಯಕರ್ತರು ಮತ್ತು ನಾಯಕರು ಒಗ್ಗಟ್ಟಿನಿಂದ ಮಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon