ಪಂಚಾಯ್ತಿ, ವಾರ್ಡ್ ಮಟ್ಟದ ಗ್ಯಾರಂಟಿ ಸಮಿತಿಗಳನ್ನು ರಚಿಸಲಾಗುವುದು: ಸಿಎಂ ಡಿ.ಕೆ. ಶಿವಕುಮಾರ್

WhatsApp
Telegram
Facebook
Twitter
LinkedIn

ಬೆಂಗಳೂರು: ಮುಂದಿನ ದಿನಗಳಲ್ಲಿ ಪ್ರತಿ ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ ಐದು ಸದಸ್ಯರ ಗ್ಯಾರಂಟಿ ಸಮಿತಿಯನ್ನು ರಚಿಸಲಾಗುವುದು. ಈ ಸಮಿತಿ ಸದಸ್ಯರು ಗ್ಯಾರಂಟಿ ಫಲಾನುಭವಿಗಳ ದಾಖಲೆ ಮರುಪರಿಶೀಲನೆ ಮಾಡುತ್ತಾರೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.

ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಸಂಕಲ್ಪ ಸಮಾವೇಶದಲ್ಲಿ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಬಿ.ಕೆ. ಹರಿಪ್ರಸಾದ್ ರಿಗೆ ಹಸ್ತಾಂತರಿಸಿ ಮಾತನಾಡಿದರು. ಕಳೆದ ಆರು ವರ್ಷಗಳಲ್ಲಿ ನನ್ನ ಜೊತೆ ಪಕ್ಷದ ಅನೇಕ ಪದಾಧಿಕಾರಿಗಳು ಶ್ರಮಿಸಿದ್ದು, ಎಲ್ಲಾ ಶಾಸಕರು ಹಾಗೂ ಮುಖಂಡರು ತನು, ಮನ, ಧನ ಅರ್ಪಿಸಿ ನನಗೆ ಶಕ್ತಿ ತುಂಬಿದ್ದಾರೆ. ಎಷ್ಟೋ ಜನಕ್ಕೆ ಅಧಿಕಾರ ನೀಡಲು ಸಾಧ್ಯವಾಗಿಲ್ಲ. ನಾವು ಗ್ಯಾರಂಟಿ ಯೋಜನೆಗಳ ಸಮಿತಿ ಮಾಡಿ, ಸಾವಿರಾರು ಕಾರ್ಯಕರ್ತರಿಗೆ ಅಧಿಕಾರ ನೀಡಿದ್ದೇವೆ. ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ ಸಮಿತಿ ರಚನೆಗೆ ನಾನು ಹಾಗೂ ನಮ್ಮ ವರಿಷ್ಠರು ಚರ್ಚೆ ಮಾಡಿದ್ದೇವೆ. ಎಲ್ಲಾ ವರ್ಗದವರಿಗೂ ಸಮಾನವಾಗಿ ಈ ಸಮಿತಿಯಲ್ಲಿ ನೇಮಕ ಮಾಡಲಾಗುವುದು ಎಂದು ಘೋಷಿಸಿದರು.

ಪ್ರತಿ ವಾರ್ಡ್ ಹಾಗೂ ಪಂಚಾಯಿತಿಯಲ್ಲಿ ಐದು ಜನರಂತೆ, 7 ಸಾವಿರ ಪಂಚಾಯಿತಿ, 4 ಸಾವಿರ ವಾರ್ಡ್ ಗಳಲ್ಲಿ ಗ್ಯಾರಂಟಿ ಸಮಿತಿ ರಚಿಸಲಾಗುವುದು. ಆಮೂಲಕ ನಾವು ಎಷ್ಟು ನಾಯಕರನ್ನು ತಯಾರು ಮಾಡುತ್ತಿದ್ದೇವೆ ಎನ್ನುವುದನ್ನು ಆಲೋಚಿಸಬೇಕು. ನಾಯಕನಾದವನು ನಾಯಕರನ್ನು ಬೆಳೆಸಬೇಕೇ ಹೊರತು, ಹಿಂಬಾಲಕರನ್ನಲ್ಲ ಎಂಬುದಕ್ಕೆ ಕಾಂಗ್ರೆಸ್ ಪಕ್ಷ ಬದ್ಧವಾಗಿದೆ ಎಂದು ತಿಳಿಸಿದರು.

ಇಡೀ ಸರ್ಕಾರ ಹಾಗೂ ಪಕ್ಷ ಹರಿಪ್ರಸಾದ್ ಅವರ ಜೊತೆಗೆ ಇರಲಿದೆ. ನಾನು ಮುಖ್ಯಮಂತ್ರಿಯಾಗಿದ್ದರೂ, ಕಾರ್ಯಕರ್ತನಾಗಿ ನಿಮ್ಮ ಜತೆಗೆ ಕೆಲಸ ಮಾಡುತ್ತೇನೆ. 2028ರಲ್ಲಿ ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತಂದು 2029ರಲ್ಲಿ ರಾಹುಲ್ ಗಾಂಧಿ ಅವರನ್ನು ದೇಶದ ಪ್ರಧಾನಿಯಾಗಿ ಮಾಡಲು ನಾವೆಲ್ಲರೂ ಸಂಕಲ್ಪ ಮಾಡಿದ್ದೇವೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೆ ಸಿಕ್ಕ ಅವಕಾಶ ನಮಗೆ ಸಿಕ್ಕಿಲ್ಲ ಎಂದು ಬಿಜೆಪಿಯವರು ಕೈ ಹಿಸುಕಿಕೊಳ್ಳುತ್ತಿದ್ದಾರೆ. ನೀವು ಚಿಂತೆ ಮಾಡುವ ಅಗತ್ಯವಿಲ್ಲ. 2028ರಲ್ಲಿ ಹಾಗೂ 2029ರಲ್ಲೂ ಕಾಂಗ್ರೆಸ್ ಸರ್ಕಾರವೇ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ರಾಹುಲ್ ಗಾಂಧಿ ಅವರ ಮಾರ್ಗದರ್ಶನದಂತೆ ವಿದ್ಯಾರ್ಥಿ ನಾಯಕರ ಚುನಾವಣೆಯನ್ನು ಕಾಲೇಜುಗಳಲ್ಲಿ ನಡೆಸಲು ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗುವುದು. ಆಮೂಲಕ ಪಂಚಾಯಿತಿಗಳಿಂದ ಪಾರ್ಲಿಮೆಂಟ್ ವರೆಗೂ ನಾಯಕರನ್ನು ತಯಾರು ಮಾಡಲಾಗುವುದು. ಇದೇ ವರ್ಷದಿಂದ ವಿದ್ಯಾರ್ಥಿ ಚುನಾವಣೆ ನಡೆಸಲಾಗುವುದು. ಇನ್ನು ಮಹಿಳೆಯರಿಗೆ ಮೀಸಲಾತಿ ನೀಡುವುದನ್ನು ತಪ್ಪಿಸಲಾಗುವುದಿಲ್ಲ. ಹೀಗಾಗಿ ವಿದ್ಯಾರ್ಥಿ ಮತ್ತು ಮಹಿಳಾ ಘಟಕ ಹೆಚ್ಚಿನ ಸಂಘಟನೆ ಮಾಡಬೇಕು ಎಂದು ಕರೆ ನೀಡಿದರು.

ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು 2020 ರ ಮಾರ್ಚ್ 10 ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದರು. ನನಗೆ ಈ ರೀತಿ ದೊಡ್ಡ ಕಾರ್ಯಕ್ರಮ ಮಾಡಲು ಬಿಜೆಪಿ ಸರ್ಕಾರ ಅವಕಾಶ ನೀಡಿರಲಿಲ್ಲ. ಪ್ರತಿ ಪಂಚಾಯಿತಿಯಲ್ಲಿ ಹೊಸ ಇತಿಹಾಸ ಸೃಷ್ಟಿಸಿ ಜೂಮ್ ಮೂಲಕ 11 ಸಾವಿರ ಕಡೆಗಳಿಂದ ಡಿಜಿಟಲ್ ವೇದಿಕೆ ಮೂಲಕ ಸಂವಿಧಾನದ ಪೀಠಿಕೆ ಪಠಿಸಿ, ನಾನು ದಿನೇಶ್ ಗುಂಡೂರಾವ್ ರಿಂದ ಅಧಿಕಾರ ಸ್ವೀಕಾರ ಮಾಡಿದ್ದೆ ಎಂದು ತಿಳಿಸಿದರು.

ನನ್ನ ಶಕ್ತಿ ಮೀರಿ, ಕಾರ್ಯಕರ್ತರ ಸೇವೆ ಮಾಡಿ, ಪಕ್ಷವನ್ನು ಸಂಘಟನೆ ಮಾಡಿದ್ದೇನೆ. ನನ್ನಿಂದ ಅನೇಕ ತಪ್ಪುಗಳಾಗಿರಬಹುದು. ರೈತರು, ಕಾರ್ಮಿಕರು, ಯುವ ಪೀಳಿಗೆಯವರ ಮಧ್ಯೆ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಇಂದು ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ರಿಗೆ ನಾನು ಅಧಿಕಾರ ಹಸ್ತಾಂತರ ಮಾಡಿದ್ದೇನೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಎಲ್ಲಾ ವರ್ಗದವರು ಅಧಿಕಾರಕ್ಕೆ ಬಂದಂತೆ. ನಾವು ವಿರೋಧ ಪಕ್ಷದಲ್ಲಿದ್ದಾಗ, ನಾನು ಹಾಗೂ ಸಿದ್ದರಾಮಯ್ಯನವರು ಸೇರಿ ನಿಮ್ಮೆಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಿ, ದೇಶದ ಐಕ್ಯತೆ, ಸಮಗ್ರತೆ, ಶಾಂತಿ ಕಾಪಾಡಲು ಶ್ರಮಿಸಿದ್ದೇವೆ ಎಂದು ತಿಳಿಸಿದರು.

ನಾನು ಈ ಜವಾಬ್ದಾರಿ ವಹಿಸಿಕೊಂಡಾಗ ಕೋವಿಡ್ ಬಿಕ್ಕಟ್ಟು ಎದುರಾಗಿತ್ತು. ನಾನು, ನಮ್ಮ ಕಾರ್ಯಾಧ್ಯಕ್ಷರು, ಶಾಸಕರು, ಪಕ್ಷದ ಎಲ್ಲಾ ಘಟಕಗಳ ಅಧ್ಯಕ್ಷರು ಒಟ್ಟಾಗಿ ಸೇರಿ ಪರಿಸ್ಥಿತಿ ಎದುರಿಸಿದೆವು. ಸಂಕಷ್ಟದಲ್ಲಿದ್ದ ಜನರಿಗೆ ಲಕ್ಷಾಂತರ ಆಹಾರ ಕಿಟ್ ವಿತರಣೆ ಮಾಡಿದೆವು. ರೈತರ ಸಂಕಷ್ಟಕ್ಕೆ ಸ್ಪಂದಿಸಿ ಅವರ ಬೆಳೆ ಖರೀದಿ ಮಾಡಿ, ಬಡವರಿಗೆ ಉಚಿತವಾಗಿ ಹಂಚಿದೆವು. ಆಮೂಲಕ ಜನರಿಗೆ ಆತ್ಮಧೈರ್ಯ ತುಂಬಿದೆವು. ಬಿಜೆಪಿ ಸರ್ಕಾರ, ವಲಸೆ ಕಾರ್ಮಿಕರಿಂದ ಬಸ್ ದರ ಮೂರು ಪಟ್ಟು ಹೆಚ್ಚಿಸಿ ಸುಲಿಗೆ ಮಾಡಲು ಮುಂದಾದಾಗ ಸರ್ಕಾರಕ್ಕೆ 1 ಕೋಟಿ ಹಣ ನೀಡಲು ಮುಂದಾಗಿ, ಕಾರ್ಮಿಕರಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದೆವು. ನಮ್ಮ ಆಗ್ರಹ ದೇಶಕ್ಕೆ ಮಾದರಿಯಾಯಿತು. ನಂತರ ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ನಮ್ಮ ಜನ ಪ್ರಾಣಬಿಟ್ಟರು. ನಾನು ಹಾಗೂ ಸಿದ್ದರಾಮಯ್ಯ ಅವರು ಹೋಗಿ ಪರಿಸ್ಥಿತಿ ಪರಿಶೀಲಿಸಿದಾಗ ಅಲ್ಲಿನ ವಾಸ್ತವ ಅರಿತೆವು. ಈ ಬಗ್ಗೆ ವಿಧಾನಸಭೆಯಲ್ಲಿ ಹೋರಾಟ ಮಾಡಿದೆವು. ಸಂತ್ರಸ್ತರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ನೀಡುವ ವಾಗ್ದಾನ ನೀಡಿದೆವು. ನಾವು ಅದರಂತೆ ಆ ಕುಟುಂಬದವರಿಗೆ ಸರ್ಕಾರಿ ಉದ್ಯೋಗ ನೀಡಿ, ಕೊಟ್ಟ ಮಾತು ಈಡೇರಿಸಿದ್ದೇವೆ ಎಂದು ಸ್ಮರಿಸಿದರು.

ಇಡೀ ರಾಜ್ಯದ ಜನತೆ ನಮ್ಮ ಪ್ರತಿ ಹೆಜ್ಜೆಯಲ್ಲೂ ಬೆಂಬಲ ನೀಡಿದ್ದಾರೆ. ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರ ಕೃಷಿ ಕರಾಳ ಕಾಯ್ದೆ ಜಾರಿಗೆ ತಂದಾಗ ನಾವು ಹೋರಾಟ ಮಾಡಿದೆವು. ಇಂಧನ ದರ ಏರಿಕೆ ವಿರುದ್ಧ 100 ನಾಟೌಟ್, ಎತ್ತಿನಗಾಡಿ ಮೆರವಣಿಗೆ, ಟಾಂಗಾ ಜಾಥ, ಸೈಕಲ್ ಜಾಥ ಮಾಡಿದೆವು. ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿ ಇಬ್ಬರು ಮಂತ್ರಿಗಳು ರಾಜೀನಾಮೆ ನೀಡುವಂತೆ ಮಾಡಿದೆವು. ರಾಷ್ಟ್ರಧ್ವಜ ಅಪಮಾನಿಸಿದ ಈಶ್ವರಪ್ಪ ವಿರುದ್ಧ, ಪಿಎಸ್ಐ ಸೇರಿದಂತೆ ವಿವಿಧ ಹಗರಣ, ಸೋನಿಯಾ ಗಾಂಧಿ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಹಾಗೂ ತನಿಖಾ ಸಂಸ್ಥೆಗಳ ಕಿರುಕುಳ ಹಾಗೂ ಪಿತೂರಿ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿದೆವು ಎಂದು ಡಿ.ಕೆ. ಶಿವಕುಮಾರ್ ನೆನೆದರು.

 

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon