ಬೆಂಗಳೂರು: ಎರಡ್ಮೂರು ದಿನಗಳ ಕಣ್ಣಾ ಮುಚ್ಚಾಲೆ ಆಟದ ತರುವಾಯ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಚುನಾವಣೆ ಸಂಬಂಧ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ನೀಡಿದ್ದ ತಡೆ ಆದೇಶವನ್ನು ಕಡೆಗೂ ತಮ್ಮ ಆಪ್ತ ಸಹಾಯಕರ ಮೂಲಕ ಚುನಾವಣಾಧಿಕಾರಿ ಮೆಹಬೂಬ್ ಪಾಷಾ ಮೂಲಿಮನಿ ಸ್ವೀಕರಿಸಿದ್ದಾರೆ ಎಂದು ಪದಾಧಿಕಾರಿ ಕೆ ನಾಗನಗೌಡ ತಿಳಿಸಿದರು.
ಸೋಮವಾರ ಗಾಂಧಿನಗರದ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಚೇರಿಯಲ್ಲಿನ ಚುನಾವಣಾಧಿಕಾರಿಗಳ ಕಚೇರಿಯ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗುರುವಾರ ಪ್ರಾಥಮಿಕ ತಡೆ ಆದೇಶವನ್ನು ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ನೀಡಿತ್ತು, ಅಂದು ಕರೆ ಅಥವಾ ವಾಟ್ಸ್ ಆ್ಯಪ್ ಮೂಲಕ ತಲುಪಿಸಲು ಪ್ರಯತ್ನಿಸಲಾಗಿತ್ತು. ಆದರೆ ಚುನಾವಣಾ ಪ್ರಕ್ರಿಯನ್ನು ಮುಂದುವರಿಸಲಾಯಿತು, ಅದಕ್ಕಾಗಿ ಶನಿವಾರ ಕೋರ್ಟ್ ಮೂಲಕ ಸ್ಪಷ್ಟ ಆದೇಶವನ್ನು ತರಲಾಯಿತು. ಇಂದು ಬೆಳಗಿನಿಂದ ಕೂಡ ಸಾಕಷ್ಟು ಕಾಯಿಸಿ ಸಂಜೆಯ ವೇಳೆಗೆ ಆದೇಶ ಪ್ರತಿಯನ್ನು ಸ್ವೀಕರಿಸಲಾಗಿದೆ ಎಂದು ತಿಳಿಸಿದರು.
ಈಗಲಾದರೂ ಈಗ ನೆಡೆಯುತ್ತಿರುವ ಚುನಾವಣಾ ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸಿ ಅನಧಿಕೃತವಾಗಿ ತಗೆದು ಹಾಕಲಾಗಿದ್ದ ಸದಸ್ಯರನ್ನು ಮೊದಲು ವೋಟರ್ ಲಿಸ್ಟ್ ಗೆ ಸೇರಿಸಿ ಚುನಾವಣಾ ಪ್ರಕ್ರಿಯೆಯನ್ನು ಪುನರಾರಂಭಿಸಬೇಕು. ಜೂನ್ 29 ರಂದು ಮುಂದಿನ ವಿಚಾರಣೆ ನಡೆಯಲಿದ್ದು ಅಷ್ಟರಲ್ಲಿ ಆಗಿರುವ ಲೋಪದೋಷಗಳನ್ನು ಚುನಾವಣಾಧಿಕಾರಿಗಳು ಸರಿಪಡಿಸಿ ಈ ಬಗ್ಗೆ ನ್ಯಾಯಾಲಯಕ್ಕೆ ಸಲ್ಲಿಸುತ್ತಾರೆ ಎನ್ನುವ ನಂಬಿಕೆಯಿದೆ. ನಂತರ ಪಾರದರ್ಶಕವಾದ ಚುನಾವಣೆ ನೆಡೆಯಲಿದೆ ಎನ್ನುವ ವಿಶ್ವಾಸವಿದೆ ಎಂದರು.
ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಸಹಕಾರ್ಯದರ್ಶಿ ಸುಮತಿ ವಿ ಮಾತನಾಡಿ, ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ಸಿಟಿ ಸಿವಿಲ್ ಅಧಿಕೃತವಾಗಿ ಪೂರ್ಣ ಪ್ರಮಾಣದ ತಡೆ ನೀಡಿ ಆದೇಶಿಸಿದೆ. ಮುಂದಿನ ಹಂತದ ವಿಚಾರಣೆ ಜೂನ್ 29 ರಂದು ನೆಡೆಯಲಿದ್ದು, ಅಲ್ಲಿಯವರೆಗೆ ಯಾವುದೇ ಚುನಾವಣಾ ಪ್ರಕ್ರಿಯೆ ಮುಂದುವರೆಸುವಂತಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ ಎಂದು ಹೇಳಿದರು.
ನ್ಯಾಯಾಲಯ ತಡೆಯಾಜ್ಞೆ ದಿಕ್ಕರಿಸಿ ಒಂದು ಹಂತದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯನ್ನು ನಡೆಸಲಾಗಿತ್ತು. ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ನಿಂದ ರಾಜ್ಯಾದ್ಯಂತ ನಡೆಯುತ್ತಿರುವ ಶಿಕ್ಷಕರ ಸಂಘದ ಚುನಾವಣೆಗೆ ತಡೆಯಾಜ್ಞೆ ಇದ್ದರೂ ಸಂವಿಧಾನಕ್ಕೆ ಅಪಚಾರ ಮಾಡಲಾಗಿತ್ತು. ಚುನಾವಣೆ ರದ್ದು ಪಡಿಸಿ ಮರುಚುನಾವಣೆ ನಡೆಸಬೇಕು ಮತ್ತು ಚುನಾವಣಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯರು ನ್ಯಾಯಾಲಯಕ್ಕೆ ದಾವೆಯನ್ನು ಹೂಡಿದ್ದರು, ಈ ಹಿನ್ನಲೆಯಲ್ಲಿ ನ್ಯಾಯಾಲಯದಿಂದ ಸ್ಪಷ್ಟ ನಿರ್ದೇಶನ ದೊರೆತಿದ್ದು, ಸತ್ಯ ಧರ್ಮಕ್ಕೆ ಜಯ ಸಿಕ್ಕಂತಾಗಿದೆ ಎಂದು ಅಭಿಪ್ರಾಯಪಟ್ಟರು.
ಶುಕ್ರವಾರ ನ್ಯಾಯಾಲಯದ ತಡೆಯಾಜ್ಞೆ ಪ್ರತಿಯನ್ನು ಸ್ವೀಕರಿಸಲು ಸಂಘದ ಚುನಾವಣಾಧಿಕಾರಿಗಳು ಕಚೇರಿಯಲ್ಲಿ ಇಲ್ಲದೇ ಮೋಸ ಮಾಡಿದ್ದರು, ರಾಜ್ಯ ಸಂಘದ 25ಸಾವಿರ ಸದಸ್ಯರನ್ನು ಮತದಾನ ಪಟ್ಟಿಯಿಂದ ಹೊರಗಿಟ್ಟು ಚುನಾವಣೆ ನಡೆಸಲಾಗುತ್ತಿತ್ತು, ಇದನ್ನು ಶನಿವಾರ ಮತ್ತೆ ಪ್ರಶ್ನಿಸಿ ಸಿವಿಲ್ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿ ನ್ಯಾಯಾಧೀಶರು ಸಂಪೂರ್ಣ ತಡೆ ನೀಡಿದ್ದು ಅದರ ಪ್ರತಿಯನ್ನು ಇಂದು ಅಧಿಕೃತವಾಗಿ ಕೊಡಲಾಗಿದೆ ಎಂದು ದಕ್ಷಿಣ ವಲಯದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಆರ್ಯ ಹೇಳಿದರು.
ಈ ಸಂದರ್ಭದಲ್ಲಿ ಹಲವು ಪದಾಧಿಕಾರಿಗಳು, ಶಿಕ್ಷಕರು ಹಾಜರಿದ್ದರು.














