ಬೆಂಗಳೂರು: ಚುನಾವಣಾ ಪೂರ್ವ ನೀಡಿರುವ ಪ್ರಣಾಳಿಕೆ ಭರವಸೆಯಂತೆ ಸಾರಿಗೆ ನೌಕರರಿಗೂ ಸರ್ಕಾರಿ ನೌಕರರಂತೆ ಸರಿಸಮಾನ ವೇತನ ಕೂಡಲೇ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದಿಂದ ಸೋಮವಾರ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಯಿತು.
2020 ರಿಂದಲೇ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಮಾಡಲಾಗಿದ್ದು, ಸದರಿ ವೇತನ ಪರಿಷ್ಕರಣೆಯ 38 ತಿಂಗಳ ಹಿಂಬಾಕಿಯನ್ನು ನೀಡಬೇಕು. ಸಾರಿಗೆ ಸಂಸ್ಥೆಗಳಲ್ಲಿ ಸಂಘಗಳ ಮಾನ್ಯತೆಗಾಗಿ, ಕಾರ್ಮಿಕ ಸಂಘಟನೆಗಳ ಚುನಾವಣೆಯನ್ನು ನಡೆಸಬೇಕು ಹಾಗೂ ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕೆಂದು ಎಂದು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ರಾಜ್ಯಾಧ್ಯಕ್ಷ ಆರ್.ಚಂದ್ರಶೇಖರ್, ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಲ್ಲಿ ಪ್ರತಿದಿನ ಒಂದು ಕೋಟಿಗೂ ಅಧಿಕ ಪ್ರಯಾಣಿಕರಿಗೆ ಸೇವೆ ನೀಡಲಾಗುತ್ತಿದೆ. ಸರಿಸುಮಾರು 1.06 ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದು ಹಬ್ಬ-ಹರಿದಿನಗಳಲ್ಲಿ ಕುಟುಂಬ ಸದಸ್ಯರೊಂದಿಗೆ ಇರದೆ, ಮಳೆ-ಗಾಳಿ-ಬಿಸಿಲು ಎನ್ನದೆ ಅತೀ ಒತ್ತಡದಲ್ಲಿ ಕಷ್ಟಪಟ್ಟು ದುಡಿಯುವ ವರ್ಗವಾಗಿದೆ. ಆದರೆ ಸರ್ಕಾರಿ ಮತ್ತು ಇತರೆ ನಿಗಮ ಮಂಡಳಿಗಳ ನೌಕರರ ವೇತನಕ್ಕೆ ಹೋಲಿಸಿದರೆ ನಮಗೆ ಸಿಗುತ ವೇತನ ಅತ್ಯಲ್ಪ ಮತ್ತು ಹಲವು ಸೌಲಭ್ಯಗಳಿಂದ ವಂಚಿತವಾಗಿದ್ದಾಗಿದೆ ಎಂದು ಹೇಳಿದರು.
ನೌಕರರು ಹಗಲು ರಾತ್ರಿಯನ್ನದೆ ದುಡಿಯುವ ಕಾರಣದಿಂದಲೇ ಸಂಸ್ಥೆಗೆ ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳು ಒಲಿದು ಬಂದಿವೆ. ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾಂದ ಶಕ್ತಿ ಯೋಜನೆಯನ್ನು ಜಾರಿಗೆ ತರುವ ಸಂಧರ್ಭದಲ್ಲಿ ಸಂಸ್ಥೆಯಲ್ಲಿ ಸಾಕಷ್ಟು ಬಸ್ಸುಗಳ ಮತ್ತು ನೌಕರರ ಕೊರತೆ ಇದ್ದರೂ ಸಾರಿಗೆ ನೌಕರರು ಕಷ್ಟ ಪಟ್ಟು ದುಡಿದ ಪರಿಣಾಮ ಇಂದು ಶಕ್ತಿ ಯೋಜನೆಯಲ್ಲಿ ನೂರಾರು ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿ ದಾಖಲೆ ಸಹ ನಿರ್ಮಾಣವಾಗಿದೆ. ಜೊತೆಗೆ ಸರ್ಕಾರಕ್ಕೆ ಅತೀ ಹೆಚ್ಚು ಜನಪ್ರಿಯತೆ ತಂದುಕೊಟ್ಟ ಯೋಜನೆ ಎಂದರೆ ಶಕ್ತಿ ಯೋಜನೆಯಾಗಿದೆ ಎಂದರು.
ಇತ್ತೀಚೆಗೆ ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವ ಪ್ರಣಾಳಿಕೆ ಭರವಸೆಯಂತೆ ಸಾರಿಗೆ ನೌಕರರನ್ನು ಸರ್ಕಾರದಲ್ಲಿ ವಿಲೀನ ಮಾಡಲು ಸಮಿತಿ ರಚನೆ ಮಾಡುವ ಮೂಲಕ ಅವರ ಇತರ ಬೇಡಿಕೆಗಳನ್ನು ಈಡೇರಿಸಿದ್ದಾರೆ. ಕರ್ನಾಟಕದಲ್ಲೂ ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ ಸಾರಿಗೆ ನೌಕರರಿಗೂ, ಸರ್ಕಾರಿ ನೌಕರರಿಗೆ ಇರುವ ಸರಿಸಮಾನ ವೇತನ ಮತ್ತು ಇತರೆ ಸೌಲಭ್ಯಗಳನ್ನು ನೀಡುವ ಭರವಸೆ ನೀಡಿದ್ದು, ನುಡಿದಂತೆ ನಡೆಯುವ ಸರ್ಕಾರವೆಂದು ಹೇಳಿಕೊಳ್ಳುವ ಮುಖ್ಯಮಂತ್ರಿಗಳು ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಕಳೆದರು ಇದುವರೆಗೂ ಯಾವುದೇ ಬೇಡಿಕೆಯನ್ನು ಈಡೇರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳು, ಸಾರಿಗೆ ಸಚಿವರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಸಾಲು ಸಾಲು ಸಭೆಗಳನ್ನು ನಡೆಸಿದರೆ ಹೊರತು ಸಾರಿಗೆ ನೌಕರರಿಗೆ ನೀಡಿರುವ ಪ್ರಣಾಳಿಕೆ ಭರವಸೆ ಈಡೇರಿಸಲು ಯಾವುದೇ ಕ್ರಮಗಳನ್ನು ಕೈಗೊಳ್ಳಲಿಲ್ಲ. ಮತ್ತೇ ಹಳೆಯ ಚೌಕಸಿ ವೇತನ ಪದ್ಧತಿಯಲ್ಲಿ ಶೇಕಡ 3, 5, 7 ವೇತನ ಹೆಚ್ಚಳ ಮಾಡುವ ಬಗ್ಗೆ ತಿಳಿಸುತ್ತಿರುವುದು ನಿಜಕ್ಕೂ ಬೇಸರ ಮತ್ತು ಅವಮಾನದ ಸಂಗತಿಯಾಗಿದೆ. ಇದರಿಂದ ಸಾರಿಗೆ ನೌಕರರು ತಮ್ಮ ದಿನ ನಿತ್ಯದ ಅಗತ್ಯ ವಸ್ತುಗಳ ಖರೀದಿಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ಇತರೆ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸಾದ್ಯವಾಗದೆ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ ಎಂದು ಆರ್.ಚಂದ್ರಶೇಖರ್ ಕಿಡಿಕಾರಿದರು.














