ಬೆಂಗಳೂರು: ಗ್ರೀನ್ ಬರ್ಡ್ಸ್ ಆಗ್ರೋ ಫಾರಂ ಲಿಮಿಟೆಡ್ ಕಂಪನಿಗೆ ರಾಜ್ಯಾದ್ಯಂತ ಸುಮಾರು ಒಂದುವರೆ ಲಕ್ಷಕ್ಕೂ ಹೆಚ್ಚು ಠೇವಣಿದಾರರು 100 ಕೋಟಿಗೂ ಹೆಚ್ಚು ಹಣ ಹೂಡಿಕೆ ಮಾಡಿ ವಂಚನೆಗೆ ಒಳಗಾಗಿದ್ದು, 2013ರಲ್ಲಿ ವಂಚನೆ ಒಳಗಾದ ಸುಮಾರು 10 ಸಾವಿರಕ್ಕೂ ಹೆಚ್ಚು ಠೇವಣಿದಾರರು, ರೈತ ಮುಖಂಡರು ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಪ್ರಬಲ ಹೋರಾಟ ನಡೆಸಿದ್ದರೆ ಪರಿಣಾಮ ಗ್ರೀನ್ ಬರ್ಡ್ಸ್ ಆಗ್ರೋ ಕಂಪನಿಯ ಮುಖ್ಯಸ್ಥ, ನಿರ್ದೇಶಕರು, ಸಂಬಂಧಿಕರ ಮೇಲೆ ಕ್ರಮ ಕೈಗೊಂಡು120 ಕ್ಕೂ ಹೆಚ್ಚು ವಂಚನೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಕಂಪನಿಗೆ ಸಂಬಂಧಪಟ್ಟ ಆಸ್ತಿಗಳನ್ನು 90 ಭಾಗ ಹರಾಜು ಮಾಡಲಾಗಿದ್ದು, ಇದರಿಂದ ಬಂದಿರುವ ಹಣದಿಂದ ಠೇವಣಿ ದಾರರಿಗೆ ಹಂತ ಹಂತವಾಗಿ ಕೂಡ ಕೂಡಲೇ ಹಣ ಪಾವತಿಸಬೇಕು, ಬಾಕಿ ಉಳಿದಿರುವ ಈ ಸಂಸ್ಥೆಯ ಶೇಕಡಾ 10% ಆಸ್ತಿಗಳನ್ನು ಕೂಡಲೇ ಹರಾಜು ಮಾಡಿ ಠೇವಣಿದಾರರಿಗೆ ಬಾಕಿ ಉಳಿದ ಹಣ ನೀಡಬೇಕು ಎಂದು ಆಗ್ರಹಿಸಿದರು.
ಅತಿ ಹೆಚ್ಚಾಗಿ ಮೈಸೂರು ಚಾಮರಾಜನಗರ ಜಿಲ್ಲೆಯಲ್ಲಿ ಈ ಕಂಪನಿ ಆಸ್ತಿಗಳನ್ನು ಹೊಂದಿದ್ದು ಅದರಲ್ಲಿ ಕೆಲವೊಂದು ಆಸ್ತಿಗಳನ್ನು ಕೆಲವು ಅಧಿಕಾರಿಗಳ ಬೆಂಬಲದಿಂದ ಸರ್ಕಾರಕ್ಕೆ ಮರೆಮಾಚಿ ಅಕ್ರಮವಾಗಿ ಮಾರಾಟ ಮಾಡಲಾಗಿದೆ. ಕೂಡಲೇ ಆ ಆಸ್ತಿಗಳನ್ನು ಪ್ರಾಧಿಕಾರ ವಶಪಡಿಸಿಕೊಳ್ಳಬೇಕು. ಈಗಾಗಲೇ ಕಳೆದ 13 ವರ್ಷಗಳಲ್ಲಿ ರಾಜ್ಯಾದ್ಯಂತ ಸುಮಾರು 25ಕ್ಕೂ ಹೆಚ್ಚು ಕಾರ್ಯಕರ್ತರು ಕಂಪನಿ ವಂಚನೆ ಮಾಡಿದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದ ಅವರ ಕುಟುಂಬ ಬೀದಿಪಾಲಾಗಿದ್ದು ಅವರ ಕುಟುಂಬಕ್ಕೆ ತಲಾ 5 ಲಕ್ಷ ಸರ್ಕಾರವೇ ಪರಿಹಾರ ನೀಡಬೇಕು. ಕಂಪನಿ ಮುಚ್ಚಿ14 ವರ್ಷ ಕಳೆದಿದ್ದು, ಕಾರ್ಯಕರ್ತರು ಹಾಗೂ ಠೇವಣಿದಾರರು ಬಹಳ ನಷ್ಟ ಅನುಭವಿಸಿದ್ದಾರೆ ಆದ್ದರಿಂದ ಕೂಡಲೇ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಕುರುಬೂರು ಶಾಂತಕುಮಾರ್ ಹೇಳಿದರು.
ಪ್ರತಿಭಟನೆಯಲ್ಲಿ ಜಿ ವಿ ಲಕ್ಷ್ಮೀದೇವಿ. ಬರಡನಪುರ ನಾಗರಾಜ್, ಅತ್ತಳ್ಳಿ ಧೇವರಾಜ್. ಪುರ ಜಗದೀಶ್, ಪುಷ್ಪ, ನಂದನ್ ಕುಮಾರ್, ಮಂಡ್ಯ ಮಾದೇವಪ್ಪ, ಚಾಮರಾಜನಗರ ಷಡಕ್ಷರಿ, ಶ್ರೀಕಂಠ, ಚನ್ನಪಟ್ಟಣ ಬಸವರಾಜು, ಪ್ರಿಯಾಪಟ್ಟಣ ಮಾದೇವ, ಗುಂಡ್ಲುಪೇಟೆ ಶಿವಮಲ್ಲಪ್ಪ, ಕೆ ಆರ್ ನಗರ ಹೇಮೇಶ್, ಕೊಡಗು ರೀಟ, ಚಿತ್ರದುರ್ಗ ಗುರುಮೂರ್ತಿ, ತಿಪಟೂರು ಮುಂತಾಜ್, ಕೋಲಾರ ಅಶೋಕ್ ಹಾಜರಿದ್ದರು.














