ಬೆಂಗಳೂರು: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯನ್ನು ಆಕ್ರಮವಾಗಿ ನಡೆಸಲಾಗುತ್ತಿದೆ. ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ನಿಂದ ಈ ಕುರಿತು ತಡೆಯಾಜ್ಞೆ ಇದ್ದರೂ ಸಂವಿಧಾನಕ್ಕೆ ಅಪಚಾರ ಮಾಡಲಾಗುತ್ತಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೆ.ನಾಗನಗೌಡ ಆಪಾದಿಸಿದರು.
ಶುಕ್ರವಾರ ಗಾಂಧಿನಗರದಲ್ಲಿರುವ ಶಿಕ್ಷಕರ ಸಂಘದ ಕಚೇರಿ ಮುಂಭಾಗದಲ್ಲಿ ನೊಂದ ಶಿಕ್ಷಕರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನ್ಯಾಯಾಲಯದ ತಡೆಯಾಜ್ಞೆ ಪ್ರತಿಯನ್ನು ಸ್ವೀಕರಿಸಲು ಸಂಘದ ಚುನಾವಣಾಧಿಕಾರಿಗಳು ಕಚೇರಿಯಲ್ಲಿ ಇಲ್ಲದೇ ಮೋಸ ಮಾಡಿದ್ದಾರೆ, ಸಂಘದ 25 ಸಾವಿರ ಸದಸ್ಯರನ್ನು ಮತದಾನ ಪಟ್ಟಿಯಿಂದ ಹೊರಗಿಟ್ಟು ಚುನಾವಣೆ ನಡೆಸುತ್ತಿದ್ದಾರೆ ಎಂದು ದೂರಿದರು.
ಮಂಡ್ಯ ದಕ್ಷಿಣ ವಲಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಆರ್ಯ ಮಾತನಾಡಿ, ಮತದಾರರ ಪಟ್ಟಿಯಿಂದ ಕೆಲ ಶಿಕ್ಷಕರನ್ನು ಕೈ ಬಿಟ್ಟು ರಾಜ್ಯದೆಲ್ಲೆಡೆ ಚುನಾವಣೆ ನಡೆಸಲಾಗುತ್ತದೆ, ಇದನ್ನು ಪ್ರಶ್ನಿಸಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದ್ದು, ನ್ಯಾಯಾಧೀಶರು ತಡೆಯಾಜ್ಞೆ ನೀಡಿದ್ದಾರೆ. ಆದರೆ ನ್ಯಾಯಾಲಯ ಆದೇಶವನ್ನು ತೆಗೆದುಕೊಳ್ಳಲು ಚುನಾವಣಾಧಿಕಾರಿಗಳು ನಾಪತ್ತೆಯಾಗಿದ್ದಾರೆ ಎಂದು ಕಿಡಿಕಾರಿದರು.
ಬಾಗಲಕೋಟೆಯ ಚಂದ್ರಶೇಖರ್ ಶೆಡಸಾಳ್ ಮಾತನಾಡಿ, ರಾಜ್ಯದಲ್ಲಿ 25ಸಾವಿರ ಶಿಕ್ಷಕರನ್ನು ಚುನಾವಣೆಯಿಂದ ದೂರವಿಟ್ಟು ರಾಜ್ಯಾಧ್ಯಕ್ಷರು ಚುನಾವಣೆ ನಡೆಸುತ್ತಿದ್ದಾರೆ.10ಜಿಲ್ಲೆಗಳ ಶಿಕ್ಷಕರ ಸಂಘದ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಶಿಕ್ಷಕರ ಸಂಘವನ್ನು ದಿವಾಳಿಯತ್ತ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಅಪಾದಿಸಿದರು.
ಈ ವೇಳೆ ವಿಜಯಪುರ ಜಿಲ್ಲೆಯ ಜಯಶ್ರೀ ಬೆಣ್ಣಿ ಮಾತನಾಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಾರದು ಎಂಬ ಉದ್ದೇಶದಿಂದ ಅಸಾಂವಿಧಾನಿಕ ಕ್ರಮ ಕೈಗೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.














