ಬೆಂಗಳೂರು: ಚಾಲುಕ್ಯ ವೃತ್ತ ಹಾಗೂ ವಿಧಾನಸೌಧ ಮುಂಭಾಗದಲ್ಲಿ ಸ್ಥಾಪಿತವಾಗಿರುವ ಕಾಯಕಯೋಗಿ ಬಸವಣ್ಣನವರ ಪುತ್ಥಳಿಗಳ ಸುತ್ತಮುತ್ತ ತುರ್ತು ಸ್ವಚ್ಛತೆ, ಸೌಂದರ್ಯೀಕರಣ, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಹಾಗೂ ಪ್ರತಿದಿನ ಧ್ವನಿ ವರ್ಧಕದ ಮೂಲಕ ವಚನ ಪ್ರಸಾರ ವ್ಯವಸ್ಥೆ ಕಲ್ಪಿಸಬೇಕು ಎಂದು ಕರ್ನಾಟಕ ರಾಜ್ಯ ಯುವ ಸಮೂಹ ವೇದಿಕೆಯಿಂದ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ.
ಈ ಕುರಿತು ಮಾತನಾಡಿರುವ ಕರ್ನಾಟಕ ರಾಜ್ಯ ಯುವ ಸಮೂಹದ ರಾಜ್ಯಾಧ್ಯಕ್ಷ ಎಸ್. ಸಂಗಮೇಶ್, ಬೆಂಗಳೂರು ನಗರದ ಹೃದಯಭಾಗದಲ್ಲಿರುವ ಚಾಲುಕ್ಯ ವೃತ್ತ ಹಾಗೂ ವಿಧಾನಸೌಧ ಮುಂಭಾಗದ ಕಾಯಕಯೋಗಿ, ವಿಶ್ವಗುರು ಬಸವಣ್ಣನವರ ಪುತ್ಥಳಿಯ ಸುತ್ತಮುತ್ತಲಿನ ಪ್ರದೇಶ ಸಮರ್ಪಕ ನಿರ್ವಹಣೆ ಮತ್ತು ಮೂಲಭೂತ ಸೌಲಭ್ಯಗಳ ಕೊರತೆಯಿಂದ ತನ್ನ ಗೌರವ ಮತ್ತು ಮೆರಗನ್ನು ಕಳೆದುಕೊಂಡಿರುವುದು ಅತ್ಯಂತ ವಿಷಾದನೀಯವಾಗಿದೆ ಎಂದಿದ್ದಾರೆ.
ರಾಜ್ಯದ ಪ್ರತಿಷ್ಠಿತ ಸ್ಮಾರಕ ಸ್ಥಳಗಳ ಈ ಪ್ರದೇಶವು ವಿಧಾನಸೌಧ, ಹೈಕೋರ್ಟ್ ಹಾಗೂ ಲೋಕಭವನದ ಸಮೀಪದಲ್ಲಿದ್ದು, ಪ್ರತಿದಿನ ಸಾವಿರಾರು ಸಾರ್ವಜನಿಕರು, ಗಣ್ಯರು ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಜನರು ಭೇಟಿ ನೀಡುವ ಪ್ರಮುಖ ಸ್ಥಳವಾಗಿದೆ. ಇಂತಹ ಮಹತ್ವದ ಸ್ಥಳದ ನಿರ್ಲಕ್ಷ್ಯವು ಸರ್ಕಾರದ ಗೌರವಕ್ಕೂ ಧಕ್ಕೆಯಾಗುವ ಸಂಗತಿಯಾಗಿದ್ದು, ಇದನ್ನು ತುರ್ತಾಗಿ ಸರಿಪಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಸವ ಜಯಂತಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಏಪ್ರಿಲ್ 20ರೊಳಗಾಗಿ ಕನಿಷ್ಟಪಕ್ಷ ಚಾಲುಕ್ಯ ವೃತ್ತ ಹಾಗೂ ವಿಧಾನಸೌಧ ಮುಂಭಾಗದಲ್ಲಿ ಸ್ಥಾಪಿತವಾಗಿರುವ ಕಾಯಕಯೋಗಿ ಬಸವಣ್ಣನವರ ಪುತ್ಥಳಿಗಳ ಸುತ್ತಮುತ್ತದ ಪ್ರದೇಶವನ್ನು ತಕ್ಷಣ ಸ್ವಚ್ಛಗೊಳಿಸಿ, ಶಾಶ್ವತ ನಿರ್ವಹಣಾ ವ್ಯವಸ್ಥೆ ಕಲ್ಪಿಸಬೇಕು. ಹಸಿರುಕರಣಕ್ಕೆ ಒತ್ತು ನೀಡಿ, ಅಲಂಕಾರಿಕ ಸಸ್ಯಗಳು, ಹೂವಿನ ಪಟಗಳು ಹಾಗೂ ಸುಂದರ ವಾತಾವರಣ ನಿರ್ಮಾಣ ಮಾಡಬೇಕು ಆಗ್ರಹಿಸಿದ್ದಾರೆ.
ಬಸವಣ್ಣನ ಪುತ್ತಳಿಗಳ ಸುತ್ತಮುತ್ತ ಸಾರ್ವಜನಿಕರು ಕುಳಿತುಕೊಳ್ಳಲು ಶಾಶ್ವತ ಕುರ್ಚಿ/ ಆಸನ ವ್ಯವಸ್ಥೆ ಕಲ್ಪಿಸಬೇಕು. ಸಮರ್ಪಕ ಬೆಳಕು, ಭದ್ರತೆ ಹಾಗೂ ದಿನನಿತ್ಯ ನಿರ್ವಹಣೆಗೆ ಸಿಬ್ಬಂದಿಯನ್ನು ನಿಯೋಜಿಸಬೇಕು. ಪ್ರತಿದಿನ ಬೆಳಗ್ಗೆ 5 ಗಂಟೆಯಿಂದ 10 ಗಂಟೆಯವರೆಗೆ ಹಾಗೂ ಸಂಜೆ 5.30 ರಿಂದ ರಾತ್ರಿ 10 ಗಂಟೆಯವರೆಗೆ ಧ್ವನಿ ವರ್ಧಕದ ಮೂಲಕ ಬಸವಣ್ಣನವರ ವಚನಗಳು, ಚಿಂತನೆಗಳು ಮತ್ತು ನೈತಿಕ ಸಂದೇಶಗಳನ್ನು ನಿರಂತರವಾಗಿ ಪ್ರಸಾರ ಮಾಡುವ ಶಾಶ್ವತ ವ್ಯವಸ್ಥೆ ಕಲ್ಪಿಸಬೇಕು. ಧ್ವನಿ ವರ್ಧಕ ವ್ಯವಸ್ಥೆ ಬಸವ ಜಯಂತಿಗೆ ಮಾತ್ರ ಸೀಮಿತವಾಗದೆ. ಪ್ರತಿದಿನ ನಿಯಮಿತವಾಗಿ ಕಾರ್ಯನಿರ್ವಹಿಸುವಂತೆ ಶಾಶ್ವತ ಆದೇಶ ಹೊರಡಿಸಬೇಕು ಎಂದು ಕೋರಿದ್ದಾರೆ.
ಬಸವಣ್ಣನವರ ವಚನಗಳು ಸಮಾಜದಲ್ಲಿ ಸಮಾನತೆ, ಕಾಯಕ ಮತ್ತು ದಾಸೋಹದ ಮೌಲ್ಯಗಳನ್ನು ಸಾರುವ ಅಮೂಲ್ಯ ಸಂದೇಶಗಳಾಗಿದ್ದು, ಅವು ಜನಮಾನಸಕ್ಕೆ ಪ್ರತಿದಿನ ತಲುಪುವಂತೆ ಮಾಡುವ ಜವಾಬ್ದಾರಿ ಸರ್ಕಾರದ್ದಾಗಿದೆ. ಆದ್ದರಿಂದ, ನಮ್ಮ ಮನವಿಯನ್ನು ಅತ್ಯಂತ ತುರ್ತು ವಿಷಯವಾಗಿ ಪರಿಗಣಿಸಿ ಸಂಬಂಧಿತ ಇಲಾಖೆಗಳ ಮೂಲಕ ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಅಗತ್ಯ ಅನುದಾನ ಬಿಡುಗಡೆ ಮಾಡಿ, ಶಾಶ್ವತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಎಸ್. ಸಂಗಮೇಶ್ ಆಗ್ರಹಪೂರ್ವಕ ವಿನಂತಿಯನ್ನು ಮಾಡಿದ್ದಾರೆ.
ಕರ್ನಾಟಕ ರಾಜ್ಯ ಯುವ ಸಮೂಹದ ವತಿಯಿಂದ ವಕೀಲರಾದ ಹನುಮೇಶ್ ಗುಂಡೂರ, ನಿಂಗರಾಜ ಗುಳೆ, ಮಲ್ಲಿಕಾರ್ಜುನ್ ಬಾಂಬೇಕರ್, ಜಿ. ಎಂ ಬಬಲದ, ಅಭಿಷೇಕ್, ಭೀಮಾಶಂಕರ ಬಿಲ್ಲವ, ಗುತ್ತಿಗೆದಾರ ಮಂಜುನಾಥ ಬಿ ಪತ್ರವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದಾರೆ.














