ಬೆಂಗಳೂರು: ಪ್ರತಿಷ್ಠಿತ ಸೆಂಟ್ರಲ್ ಕಾಲೇಜು ತದ ನಂತರ ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಮೂರು ದಶಕಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಇದೀಗ ನಿವೃತ್ತರಾದ ಜೀವ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ವಿಜ್ಞಾನ ನಿಕಾಯದ ಹಿಂದಿನ ಡೀನ್ ಪ್ರೊ. ವಿ.ಆರ್. ದೇವರಾಜ್ ರನ್ನು ಸಹೋದ್ಯೋಗಿಗಳು ಮತ್ತು ಶಿಷ್ಯವೃಂದ ಆತ್ಮೀಯವಾಗಿ ಅಭಿನಂದಿಸಿ ಬೀಳ್ಕೊಟ್ಟರು.
ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ ವಿಭಾಗದ ವತಿಯಿಂದ ಶುಕ್ರವಾರ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಕುಲಪತಿ ಪ್ರೊ. ರಮೇಶ್.ಬಿ., ವಿಶ್ರಾಂತ ಕುಲಪತಿ ಪ್ರೊ.ಲಿಂಗರಾಜ ಗಾಂಧಿ ಸೇರಿದಂತೆ ಅನೇಕ ಪ್ರಮುಖರು ಪ್ರೊ. ವಿ.ಆರ್. ದೇವರಾಜ್ ಅವರ ಅಮೂಲ್ಯ ಕೊಡುಗೆಯನ್ನು ಸ್ಮರಿಸಿದರು.
ಸಮಾರಂಭದಲ್ಲಿ ಕುಲಪತಿ ಪ್ರೊ. ರಮೇಶ್. ಬಿ. ಮಾತನಾಡಿ, ಬೋಧನೆ ಮತ್ತು ಸಂಶೋಧನೆ ಎರಡೂ ಕ್ಷೇತ್ರಗಳಲ್ಲಿ ಮಹತ್ವಪೂರ್ಣ ಸೇವೆಯ ಮೂಲಕ ಅಪಾರ ಸಂಖ್ಯೆಯ ವಿದ್ಯಾರ್ಥಿಗಳಿಗೆ ಅತ್ಯಮೂಲ್ಯ ಮಾರ್ಗದರ್ಶನ ನೀಡಿರುವ ಪ್ರೊ. ವಿ..ಆರ್. ದೇವರಾಜ್ ಹೊಸ ಪೀಳಿಗೆಯ ಅಧ್ಯಾಪಕರಿಗೆ ಅತ್ಯುತ್ತಮ ಮಾದರಿಯಾಗಿದ್ದಾರೆ ಎಂದು ಬಣ್ಣಿಸಿದರು.
ಹಳೆಯ ತಲೆಮಾರಿನ ಬಹುತೇಕ ಅನುಭವಿ ಪ್ರಾಧ್ಯಾಪಕರು ಸರದಿಯಂತೆ ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ಖಾಯಂ ಬೋಧಕರ ನೇಮಕಾತಿ ಪ್ರಕ್ರಿಯೆಗೆ ಸರ್ಕಾರದ ನೆರವಿನಿಂದ ಆದಷ್ಟು ಬೇಗ ಚಾಲನೆ ನೀಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಪ್ರೊ.ಲಿಂಗರಾಜ ಗಾಂಧಿ ಮಾತನಾಡಿ, ದೇಶದಲ್ಲೇ ಮೂಲ ವಿಜ್ಞಾನ ವಿಷಯಗಳ ಅಧ್ಯಯನದ ಪ್ರಮುಖ ಕೇಂದ್ರವಾದ ಸೆಂಟ್ರಲ್ ಕಾಲೇಜಿನ ಮಹೋನ್ನತ ಪರಂಪರೆಯನ್ನು ಮುಂದುವರಿಸುವ ಮೂಲಕ ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಪ್ರೊ. ವಿ.ಆರ್. ದೇವರಾಜ್ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ ಎಂದು ಶ್ಲಾಘಿಸಿದರು.
ಕಲ್ಬುರ್ಗಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ವಿ.ಎಚ್.ಮೂಲಿಮನಿ, ಸೆಂಟ್ರಲ್ ಕಾಲೇಜಿನಲ್ಲಿಯೇ ಸೇವೆ ಸಲ್ಲಿಸಿದ್ದ ಪ್ರೊ. ಎನ್. ರಾಮಚಂದ್ರಸ್ವಾಮಿ ಹಾಗೂ ಪ್ರೊ.ಬಿ.ಎಂ.ಸ್ವಾಮಿ ಪ್ರೊ.ದೇವರಾಜ್ ಅವರ ಕರ್ತವ್ಯನಿಷ್ಠೆ, ಶಿಸ್ತು ಮತ್ತು ವಿದ್ಯಾರ್ಥಿ ಕೇಂದ್ರಿತ ಸೇವಾ ಮನೋಭಾವದ ಬಗ್ಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಪ್ರೊ. ವಿ.ಆರ್. ದೇವರಾಜ್ ದಂಪತಿಗಳನ್ನು ಗೌರವಿಸಿ ಶುಭ ಹಾರೈಸಲಾಯಿತು. ಕುಲಸಚಿವ ಎ. ನವೀನ್ ಜೋಸೆಫ್, ವಿತ್ತಾಧಿಕಾರಿ ಎಂ.ವಿ.ವಿಜಯಲಕ್ಷ್ಮಿ, ನಿವೃತ್ತ ಪ್ರಭಾರ ಕುಲಪತಿ ಪ್ರೊ.ಎನ್.ನರಸಿಂಹಮೂರ್ತಿ, ಹಿರಿಯ ಪ್ರಾಧ್ಯಾಪಕ ಪ್ರೊ. ಎಚ್. ಹರಿಪ್ರಸಾದ್, ವಿಭಾಗದ ಮುಖ್ಯಸ್ಥ ಪ್ರೊ. ಪಿ.ಆರ್. ಚೇತನ ಉಪಸ್ಥಿತರಿದ್ದರು.














