ಬೆಂಗಳೂರು: ಬಿಜೆಪಿ ಯುವ ಮೋರ್ಚಾ ವತಿಯಿಂದ ಶನಿವಾರ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯನ್ನು ಉದ್ದೇಶಿಸಿ ಬಿಜೆಪಿ ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಶಾಸಕ ಧೀರಜ್ ಮುನಿರಾಜು ಮಾತನಾಡಿ, ಎಐ ಶೃಂಗಸಭೆಯಲ್ಲಿ ಪ್ರತಿಭಟನೆ ಮಾಡುವ ಮೂಲಕ ಕಾಂಗ್ರೆಸ್ಸಿನವರು ತಮ್ಮ ಕೆಟ್ಟ ಸಂಸ್ಕೃತಿಯನ್ನು ಅನಾವರಣ ಮಾಡಿದ್ದಾರೆ. ವಿದೇಶಿ ಅತಿಥಿಗಳ ಸಮ್ಮುಖದಲ್ಲಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಅವಮಾನ ಮಾಡುವಂತೆ ನಡೆದುಕೊಂಡಿದ್ದು ಖಂಡನೀಯ. ಯುವ ಕಾಂಗ್ರೆಸ್ಸಿಗರು ತಮ್ಮ ವರ್ತನೆಗೆ ಬೇಷರತ್ ಕ್ಷಮೆ ಕೇಳಲಿ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ ಮಾತನಾಡಿ, ಎಐ ಶೃಂಗಸಭೆಯಲ್ಲಿ 30- 35 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದು, ಭಾರತಕ್ಕೆ ಅವಮಾನವಾಗುವ ರೀತಿಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಅರೆ ಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ. ಇದು ಖಂಡನೀಯ ಎಂದು ತಿಳಿಸಿದರು.
ಭಾರತದಲ್ಲಿ ಉತ್ತಮ ಆವಿಷ್ಕಾರ ನಡೆಯುತ್ತಿದೆ. ಈ ಸಂದರ್ಭದಲ್ಲಿ ಪ್ರಧಾನಿಯವರಿಗೂ ಧಿಕ್ಕಾರ ಕೂಗಿದ ಯುವ ಕಾಂಗ್ರೆಸ್ಸಿಗರ ವರ್ತನೆ ಅನಪೇಕ್ಷಣೀಯ. ಇವರ ವರ್ತನೆಯನ್ನು ಖಂಡಿಸಿ ಸಾರ್ವಜನಿಕರೂ ಒದೆ- ಗೂಸಾ ಕೊಟ್ಟಿದ್ದಾರೆ. ಈ ಸಂಬಂಧ ಕೆಪಿಸಿಸಿ ಕಚೇರಿಗೂ ಮುತ್ತಿಗೆ ಹಾಕಲಾಗುವುದು. ಯುವ ಕಾಂಗ್ರೆಸ್ಸಿನವರು ಮಾನ ಮರ್ಯಾದೆ ಇಲ್ಲದವರಂತೆ ನಡೆದುಕೊಂಡಿದ್ದಾರೆ. ಅವರನ್ನು ಸಮರ್ಥಿಸುವ ನಾಯಕರ ಕ್ರಮವೂ ಖಂಡನೀಯ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಮಾತನಾಡಿ, ಕಾಂಗ್ರೆಸ್ಸಿನವರು ಎಲ್ಲ ಕಾರ್ಯಕ್ರಮ, ಯೋಜನೆಗಳಿಗೆ ತಮ್ಮ ನಾಯಕರಾದ ನೆಹರೂ, ಇಂದಿರಾ, ರಾಜೀವ್ ಗಾಂಧಿಯವರ ಹೆಸರು ಇಟ್ಟುಕೊಂಡಿದ್ದಾರೆ. ನಮ್ಮ ಪ್ರಧಾನಿ ಮೋದಿಜೀ ಅವರು ಯಾವುದೇ ಒಂದು ಯೋಜನೆಗೂ ತಮ್ಮ ಹೆಸರನ್ನು ಇಟ್ಟುಕೊಂಡಿಲ್ಲ. ದೇಶದ ಮಾನ ಕಳೆಯುವಂತೆ ನಿನ್ನೆ ನಡೆದ ಘಟನೆ ಅತ್ಯಂತ ಖಂಡನೀಯ ಎಂದು ಟೀಕಿಸಿದರು.
ಇದೇ ವೇಳೆ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ಸಿಗರಿಗೆ ಧಿಕ್ಕಾರ ಕೂಗಿದರು. ಬಿಜೆಪಿ ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಶಾಸಕ ಧೀರಜ್ ಮುನಿರಾಜ್, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಮುಖಂಡ ಉಮೇಶ್ ಶೆಟ್ಟಿ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.















