ಚಾರಿತ್ರ್ಯವೇ ಪ್ರಥಮ ಎಂದು ಭೀಮಣ್ಣ ಖಂಡ್ರೆ ಪ್ರತಿಪಾದಿಸುತ್ತಿದ್ದರು: ಈಶ್ವರ್ ಖಂಡ್ರೆ

WhatsApp
Telegram
Facebook
Twitter
LinkedIn

ಬೆಂಗಳೂರು: ಜಾತಿ ಭೇದ, ವರ್ಗಭೇದ, ಧರ್ಮ ಭೇದ, ಶ್ರೇಣಿ ಭೇದ, ಲಿಂಗಭೇದವಿಲ್ಲದ ಸಮಾಜದ ಪ್ರತಿಪಾದಕರಾಗಿದ್ದ ಲಿಂಗೈಕ್ಯ ಡಾ. ಭೀಮಣ್ಣ ಖಂಡ್ರೆ ಅವರು ವಿಶ್ವಗುರು ಬಸವಣ್ಣನವರ ತತ್ವಾದರ್ಶಗಳನ್ನೇ ಮೈಗೂಡಿಸಿ ಬಾಳಿ ಬದುಕಿದರು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸ್ಮರಿಸಿದರು.

ಶನಿವಾರ ಬೆಂಗಳೂರಿನ ಗಾಯತ್ರಿ ವಿಹಾರದಲ್ಲಿ ಬೃಹತ್ ಜನಸ್ತೋಮದ ಹಾಗೂ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ತಂದೆ ಯಾರೇ ಬಡವರು, ನಿರ್ಗತಿಕರು, ಶೋಷಿತರು ಸಹಾಯ ಬೇಡಿ ಬಂದರೂ ಅವರ ಕಣ್ಣೀರು ಒರೆಸಿ ಅವರಿಗೆ ನ್ಯಾಯ ದೊರಕಿಸುದ್ದರು ಎಂದರು.

ಮಹಾನ್ ರಾಷ್ಟ್ರಭಕ್ತರು ಮತ್ತು ರಾಷ್ಟ್ರೀಯವಾದಿಗಳಾಗಿದ್ದ ನನ್ನ ತಂದೆ ಭೀಮಣ್ಣ ಖಂಡ್ರೆ, ಸದಾ ರಾಷ್ಟ್ರವೇ ಪ್ರಥಮ ಎಂದು ಪ್ರತಿಪಾದಿಸುತ್ತಿದ್ದರು. ಬಿಡುವು ದೊರೆತಾಗಲೆಲ್ಲಾ ಮಕ್ಕಳೆಲ್ಲರನ್ನೂ ಕೂರಿಸಿಕೊಂಡು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಮಹಾನ್ ನಾಯಕರ ಬಗ್ಗೆ ತಿಳಿಸುತ್ತಿದ್ದರು ಎಂದು ತಿಳಿಸಿದರು.

ತಮ್ಮ ದೀಕ್ಷಾಗುರು ಡಾ. ಚನ್ನಬಸವಸ್ವಾಮಿ ಪಟ್ಟದ್ದೇವರ ಶತಮಾನೋತ್ಸವ ಹಾಗೂ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಭವ್ಯ ಎಂಜಿನಿಯರಿಂಗ್ ಕಟ್ಟಡ ಉದ್ಘಾಟನೆಗೆ ಅಂದಿನ ರಾಷ್ಟ್ರಪತಿ ಡಾ. ಶಂಕರ ದಯಾಳ್ ಶರ್ಮಾ ಅವರನ್ನೇ ಕರೆಸಿ ಒಂದು ವಾರದಲ್ಲಿ ಕಾರ್ಯಕ್ರಮ ಆಯೋಜಿಸಿದ್ದರು. ಅವರು ಹಠವಾದಿ, ಛಲವಾದಿಯಾಗಿದ್ದರು ಎಂದು ಹೇಳಿದರು.

ಅನ್ನದಾತನ ಬಗ್ಗೆ ಅವರಿಗೆ ಅಪಾರವಾದ ಕಾಳಜಿ ಇತ್ತು. ರೈತರ ಪರವಾಗಿ ಸದಾ ಹೋರಾಟ ಮಾಡುತ್ತಿದ್ದರು. ಅವರಿಗೆ ಅನ್ಯಾಯ ಆದಾಗ ನ್ಯಾಯ ಕೊಡಿಸುತ್ತಿದ್ದರು. ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಎಲ್ಲರನ್ನೂ ಒಗ್ಗೂಡಿಸಲು ಗುರುವಿರಕ್ತರ ಸಮಾವೇಶವನ್ನು ನಡೆಸಿದ್ದರು. 12ನೇ ಶತಮಾನದ ಅನುಭವ ಮಂಟಪದ ಸ್ಥಳದಲ್ಲಿ ಈಗಿರುವ ಲಿಂಗಾಕೃತಿಯ ಗೋಪುರದ ಆಧುನಿಕ ಅನುಭವ ಮಂಟಪಕ್ಕೆ ತನು, ಮನ, ಧನವನ್ನೇ ಧಾರೆ ಎರೆದಿದ್ದರು. ತಾವೇ ತಲೆಯ ಮೇಲೆ ಮಣ್ಣು, ಜಲ್ಲಿ, ಕಲ್ಲು, ಸಿಮೆಂಟ್ ಹೊತ್ತು ಕೆಲಸಗಾರರನ್ನು ಹುರಿದುಂಬಿಸಿ, ಬೆಳಗಾಗುವುದರೊಳಗೆ ಕಾಮಗಾರಿ ಪೂರ್ಣಗೊಳಿಸಿದ ಹಿರಿಮೆ ಭೀಮಣ್ಣ ಖಂಡ್ರೆ ಅವರದಾಗಿತ್ತು ಎಂದರು.

ಬಸವಕಲ್ಯಾಣದ ಸಮಗ್ರ ಅಭಿವೃದ್ಧಿ ಪ್ರತ್ಯೇಕ ಪ್ರಾಧಿಕಾರ ರಚಿಸಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಮಾಡಿ, ಅವರ ಜೊತೆಗೂಡಿ ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಮನವಿ ಸಲ್ಲಿಸಿ, ಘೋಷಣೆ ಮಾಡಿಸಿದರು. ನಂತರ ಧರ್ಮಸಿಂಗ್ ಅವರ ಕಾಲದಲ್ಲಿ ಶಾಸನಬದ್ಧಗೊಳಿಸಲೂ ಅವಿರತವಾಗಿ ಶ್ರಮಿಸಿದರು ಎಂದು ಸ್ಮರಿಸಿದರು.

2013ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಗಳಾಗಿ ಬಸವಜಯಂತಿಯಂದೇ ಪ್ರಮಾಣ ವಚನ ಸ್ವೀಕರಿಸಿದ ಸಿದ್ದರಾಮಯ್ಯನವರು ಈಗ ನಿರ್ಮಾಣವಾಗುತ್ತಿರುವ ಅತ್ಯಾಧುನಿಕ ಅನುಭವ ಮಂಟಪ ನಿರ್ಮಾಣದ ರೂಪುರೇಶೆ ತಯಾರಿಸಲು ಹಿರಿಯ ವಿದ್ವಾಂಸರಾದ  ಗೊ.ರು.ಚನ್ನಬಸಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದರು, ಕಾರ್ಯಯೋಜನೆ ಸಿದ್ಧಪಡಿಸಿ, ಬಜೆಟ್ ನಲ್ಲಿ ಘೋಷಿಸಿದರು. ನಂತರ ಮುಖ್ಯಮಂತ್ರಿಗಳಾದ ಯಡಿರೂಪ್ಪನವರು ಹಣ ಬಿಡುಗಡೆ ಮಾಡಿ  ಶಂಕುಸ್ಥಾಪನೆ ನೆರವೇರಿಸಿದರು. ಈಗ ಸಿದ್ದರಾಮಯ್ಯನವರು ಮತ್ತೆ ಮುಖ್ಯಮಂತ್ರಿಗಳಾದ ತರುವಾಯ 200 ಕೋಟಿ ರೂ. ಬಿಡುಗಡೆ ಮಾಡಿದ್ದು ಕಾಮಗಾರಿ ಭರದಿಂದ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

770 ಕಂಬಗಳ ಆಧಾರದ ಮೇಲೆ ಆಧುನಿಕ ಅನುಭವ ಮಂಟಪ ನಿರ್ಮಾಣವಾಗುತ್ತಿದೆ. ಮುಂದಿನ ವರ್ಷಾಂತ್ಯದೊಳಗೆ ಅನುಭವ ಮಂಟಪವನ್ನು ಲೋಕಾರ್ಪಣೆ ಮಾಡುವುದು ಸರ್ಕಾರದ ಗುರಿಯಾಗಿದೆ. ಇನ್ನು ಬೆಂಗಳೂರು ನಗರದಲ್ಲಿ 1000 ವಿದ್ಯಾರ್ಥಿನಿಯರಿಗಾಗಿ ಒಂದು ವಿದ್ಯಾರ್ಥಿನಿಲಯ ಕಟ್ಟಬೇಕು ಎಂಬುದು ತಮ್ಮ ತಂದೆ ಕನಸಾಗಿತ್ತು. ಹಿಂದಿನ ಅಧ್ಯಕ್ಷ ಶಾಮನೂರು ಶಿವಶಂಕರಪ್ಪನರಿಗೂ ಈ ಕನಸಿತ್ತು. ಈಗ ನನ್ನನ್ನು ಅವಿರೋಧವಾಗಿ ಮಹಾಸಭಾ ಅಧ್ಯಕ್ಷರನ್ನಾಗಿ ಮಾಡಿದ್ದು, ವಸತಿ ನಿಲಯ ಪೂರ್ಣಗೊಳಿಸುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ ಎಂದು ಹೇಳಿದರು.

ಸಮಾಜದ ಎಲ್ಲ ಒಳ ಪಂಗಡಗಳನ್ನು ಒಗ್ಗೂಡಿಸಬೇಕು ಎಂಬುದು ಅವರ ಧ್ಯೇಯವಾಗಿತ್ತು. ನಾನೂ ಸಮಾಜದ ಒಳಿತಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ಅಭಿಮಾನವಿಟ್ಟು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಎಲ್ಲ ಗುರು, ಹಿರಿಯವರು ಮತ್ತು ಜನನಾಯಕರುಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಈಶ್ವರ್ ಖಂಡ್ರೆ ಹೇಳಿದರು.

ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿರಿಗೆರೆ ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ, ಭಾಲ್ಕಿ ಹಿರೇಮಠದ ಶ್ರೀ ಬಸವಲಿಂಗ ಪಟ್ಟದ್ದೇವರು, ಕಿರಿಯ ಸ್ವಾಮೀಜಿ ಶ್ರೀ ಗುರುಬಸವ ಪಟ್ಟದ್ದೇವರು, ಹುಲಸೂರು ಶ್ರೀ ಶಿವಾನಂದ ಸ್ವಾಮೀಜಿಸ  ಬೆಲ್ದಾಳೆಯ ಸಿದ್ದರಾಮ ಶರಣರು, ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವ ವಿ. ಸೋಮಣ್ಣ, ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಎಂ.ವೀರಪ್ಪ ಮೊಯ್ಲಿ, ಬಿ.ಎಸ್. ಯಡಿಯೂರಪ್ಪ, ಸಚಿವರುಗಳಾದ ಡಾ. ಎಚ್.ಸಿ. ಮಹದೇವಪ್ಪ, ಡಾ. ಜಿ. ಪರಮೇಶ್ವರ್, ಕೆ.ಎಚ್. ಮುನಿಯಪ್ಪ, ಎಂ.ಸಿ. ಸುಧಾಕರ್, ಎಂ.ಬಿ. ಪಾಟೀಲ್, ಬೋಸ್ ರಾಜ್, ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳಿ, ಬೈರತಿ ಸುರೇಶ್, ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯ, ರಾಜಶೇಖರ ಪಾಟೀಲ್, ಬಂಡೆಪ್ಪ ಕಾಶೆಂಪೂರ, ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಸಂಸತ್ ಸದಸ್ಯರಾದ ಬಸವರಾಜ ಬೊಮ್ಮಾಯಿ, ಸಾಗರ್ ಖಂಡ್ರೆ, ಶಾಸಕರುಗಳಾದ ಡಾ. ಶೈಲೇಂದ್ರ ಬೆಲ್ದಾಳೆ, ಮಹಾಸಭಾದ ರಾಜ್ಯಾಧ್ಯಕ್ಷರಾದ ಶಂಕರ ಬಿದರಿ ಹಾಗೂ ಹರಗುರು ಚರಮೂರ್ತಿಗಳು ಪಾಲ್ಗೊಂಡಿದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon