ಧಾರವಾಡ: ಅಕ್ರಮ ಆಸ್ತಿಗಳಿಕೆ ಆರೋಪದ ಹಿನ್ನೆಲೆಯಲ್ಲಿ ಜಿಲ್ಲೆಯ ಭೂಮಾಪನ ಇಲಾಖೆಯ ಸರ್ವೇಯರ್ ಸೋಮಲಿಂಗಪ್ಪ ಸಿದ್ದನಗೌಡರ್ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಗುರುವಾರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಇಲ್ಲಿಯವರೆಗೆ ಪರಿಶೀಲನೆ ಮುಂದುವರೆದಿದೆ.
ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ಅವರ ನೇತೃತ್ವದ ತಂಡವು ಗುರುವಾರ ಮುಂಜಾನೆಯಿಂದ ಕಾರ್ಯಾಚರಣೆಗೆ ಇಳಿದಿದೆ. ಧಾರವಾಡದ ಭಾರತಿ ನಗರದ ಬಳಿಯಿರುವ ಲಕ್ಷೇಶ್ವರ ಗಾರ್ಡನ್‌ನಲ್ಲಿರುವ ಸೋಮಲಿಂಗಪ್ಪ ಅವರ ಬಂಗಲೆ, ಮುರಗೋಡ್‌ನಲ್ಲಿರುವ ಅವರ ಹಳೆಯ ನಿವಾಸ ಹಾಗೂ ಅವರು ಕರ್ತವ್ಯ ನಿರ್ವಹಿಸುತ್ತಿರುವ ಎಡಿಎಲ್ ಆರ್ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ದಾಖಲೆಗಳನ್ನು ಜಾಲಾಡಲಾಗುತ್ತಿದೆ.
ಸೋಮಲಿಂಗಪ್ಪ ಅವರು ತಮ್ಮ ಅಧಿಕಾರಾವಧಿಯಲ್ಲಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ್ದಾರೆ ಎಂಬ ಮಾಹಿತಿ ಹಾಗೂ ದೂರುಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇನ್ನೂ ಅಧಿಕಾರಿಗಳು ಮನೆಯಲ್ಲಿರುವ ಚಿನ್ನಾಭರಣ, ನಗದು, ಆಸ್ತಿ ಪತ್ರಗಳು ಹಾಗೂ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.














