ಬೆಂಗಳೂರು/ಮೈಸೂರು: ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ಬೇಟೆ ಮುಂದುವರಿಸಿರುವ ಲೋಕಾಯುಕ್ತ ಪೊಲೀಸರು, ಗುರುವಾರದಿಂದ ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಪುರುಷೋತ್ತಮ್ ದಾಸ್ ಅವರಿಗೆ ಸೇರಿದ ನಿವಾಸ ಮತ್ತು ಕಚೇರಿಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ನಡೆದ ಈ ದಾಳಿಯಲ್ಲಿ ಅಧಿಕಾರಿಗಳು ಕಂಡ ದೃಶ್ಯ ಕಂಡು ದಂಗಾಗಿದ್ದಾರೆ. ಬೆಂಗಳೂರು ಮತ್ತು ಮೈಸೂರು ಸೇರಿದಂತೆ ಒಟ್ಟು 11 ಕಡೆಗಳಲ್ಲಿ ಪರಿಶೀಲನೆ ಇನ್ನೂ ನಡೆಯುತ್ತಿದೆ. ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ದೇವರಾಜ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಕಾರ್ಯಾಚರಣೆಯಲ್ಲಿ ಬೆಂಗಳೂರಿನ 6 ಕಡೆ ಮತ್ತು ಮೈಸೂರಿನ 5 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.
ಬೆಂಗಳೂರಿನ ಪದ್ಮನಾಭ ನಗರದಲ್ಲಿರುವ ಪುರುಷೋತ್ತಮ್ ಅವರ ನಾಲ್ಕು ಅಂತಸ್ತಿನ ಭವ್ಯ ಬಂಗಲೆಗೆ ನುಗ್ಗಿರುವ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿಯ ಸಮಯದಲ್ಲಿ ಪುರುಷೋತ್ತಮ್ ಮನೆಯಲ್ಲೇ ಇದ್ದು, ಅಧಿಕಾರಿಗಳ ವಿಚಾರಣೆಗೆ ಸಹಕರಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಅವರ ಸಂಬಂಧಿಕರ ಮನೆ ಮತ್ತು ಕಚೇರಿಗಳ ಮೇಲೆಯೂ ದಾಳಿ ಮುಂದುವರಿದಿದೆ. ಈ ವೇಳೆ ಅವರಿಗೆ ಸಂಬಂಧಿಸಿದ ಕೋಟಿ ಕೋಟಿ ಹಣ, ಬಂಗಾರ, 6 ಮನೆ, 2 ಶಾಲೆ ಪತ್ತೆಯಾಗಿದೆ ಎನ್ನುವ ಮಾಹಿತಿ ದೊರೆತಿದೆ.














