ಬೆಂಗಳೂರು: ಹೊಸ ಮದ್ಯದ ಸನ್ನದು ನೀಡಲು ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಮಂಡ್ಯ ಜಿಲ್ಲಾ ಅಬಕಾರಿ ಉಪ ಆಯುಕ್ತ ಆರ್. ನಾಗಶಯನ ಅವರನ್ನು ರಾಜ್ಯ ಸರ್ಕಾರ ಕರ್ತವ್ಯದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ಸುಂದರ್ ಎಂಬುವವರಿಗೆ ಸಿಎಲ್-7 ಪರವಾನಗಿ ಮಂಜೂರು ಮಾಡಲು ಅಬಕಾರಿ ಉಪ ಆಯುಕ್ತ 60 ಲಕ್ಷ ರೂಪಾಯಿ ಲಂಚ ಕೇಳಿದ್ದರು ಎನ್ನಲಾಗಿತ್ತು. ಈ ಕುರಿತು ಅಧಿಕಾರಿಯದ್ದೇ ಎನ್ನಲಾದ ಆಡಿಯೋ ಸಂಭಾಷಣೆಯೊಂದು ಖಾಸಗಿ ವಾಹಿನಿಗಳಲ್ಲಿ ವೈರಲ್ ಆಗಿತ್ತು. ಇದು ಸರ್ಕಾರಿ ನೌಕರರ ನಡತೆ ನಿಯಮಗಳ ಸ್ಪಷ್ಟ ಉಲ್ಲಂಘನೆ ಎಂದು ಪರಿಗಣಿಸಲಾಗಿತ್ತು.
ಆರೋಪ ಕೇಳಿಬಂದ ತಕ್ಷಣ ಅಬಕಾರಿ ಆಯುಕ್ತರ ಕಚೇರಿಯಿಂದ ನಾಗಶಯನ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಆದರೆ, ಅವರು ನೀಡಿದ ಸಮಜಾಯಿಷಿ ತೃಪ್ತಿಕರವಾಗಿಲ್ಲದ ಕಾರಣ ಮತ್ತು ಲಂಚದ ಬೇಡಿಕೆ ಇಟ್ಟಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ, ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಜಯ್ ಎಸ್. ಕೊರಡೆ ಅಮಾನತುಗೊಳಿಸಿ ಆದೇಶಿಸಿದ್ದಾರೆ.















