ಬೆಳಗಾವಿ: ಸಂಗೊಳ್ಳಿ ರಾಯಣ್ಣನ ವಂಶಸ್ಥರಾದ ಕರವೀರಪ್ಪ ದೇಮಪ್ಪ ರೋಗನ್ನವರ ಶನಿವಾರ ಮುಂಜಾನೆ ಬೆಳಗಾವಿ ನಗರದ ಸದಾಶಿವ ನಗರದ ತಮ್ಮ ಮನೆಯಲ್ಲಿ ಕೈಲಾಸವಾಸಿಗಳಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ಇಬ್ಬರು ಪುತ್ರರು, ಒಬ್ಬ ಪುತ್ರಿ ಹಾಗೂ ಅಪಾರ ಬಂಧು ಬಳಗದವರು ಹಾಗೂ ಮಿತ್ರರನ್ನು ಅಗಲಿದ್ದಾರೆ.
ಅವರು ಬೆಳಗಾವಿ ಜಿಲ್ಲಾ ಕನಕ ನೌಕರರ ಸಂಘದ ಸ್ಥಾಪಕ ನಿರ್ದೇಶಕರಾಗಿದ್ದರು. ಅದರಂತೆ ದಿ.ಪ್ರೊಫಸರ್ ಹಾಗೂ ಸಂಶೋಧಕ ಜೋತಿಹೊಸೂರ ಅವರಿಗೆ ಸಂಗೊಳ್ಳಿರಾಯಣ್ಣನ ಸಂಬಂಧದ ಮಾಹಿತಿ ಹಾಗೂ ದಾಖಲೆಗಳನ್ನು ಪೂರೈಸಿ ಅವರಿಂದ” ಸಂಗೊಳ್ಳಿ ರಾಯಣ್ಣ ಚರಿತ್ರೆ ಹಾಗೂ ಇತಿಹಾಸ” ಎಂಬ ಸಂಶೋಧನಾತ್ಮಕ ಪುಸ್ತಕ ಬರೆಯುವುದಕ್ಕೆ ಕಾರಣರಾಗಿದ್ದರು. ಈ ಪುಸ್ತಕವನ್ನು ಸಿಎಂ ಸಿದ್ದರಾಮಯ್ಯ ಬಿಡುಗಡೆಗೊಳಿಸಿದ್ದರು.
ಸಂತಾಪ ಸಂದೇಶ:
ನಮ್ಮ ಮಾವನವರಾದ ಕರವೀರಪ್ಪ ದೇಮಪ್ಪ ರೋಗನ್ನವರು ಜನಾನುರಾಗಿ ವ್ಯಕ್ತಿಯಾಗಿ ತಮ್ಮ ಜೀವನವನ್ನು ಸಮಾಜಕ್ಕಾಗಿ ಮುಡಿಪಾಗಿಟ್ಟಿದ್ದರು. ಅವರನ್ನು ನ್ಯಾಯಾಲಯದ ಆದೇಶದಂತೆ ರಾಜ್ಯ ಸರ್ಕಾರ ಅವರನ್ನು ಅಧಿಕೃತವಾಗಿ ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣರ ವಂಶಸ್ಥರು ಎಂದು ಗುರುತಿಸಿತ್ತು ಎಂದು ಬೆಳಗಾವಿ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತ ಕಲಾದಗಿ ಪ್ರಜಾನೆರಳು ಪತ್ರಿಕೆಯ ಮೂಲಕ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.















