ಬೆಳಗಾವಿ: ತಾಲೂಕಿನ ಮೋದಗಾ ಗ್ರಾಮ ಪಂಚಾಯಿತಿಯ ಪಿಡಿಒ ಪ್ರಶಾಂತ ಮುನವಳ್ಳಿ ಅವರಿಗೆ ತಾಲೂಕು ಪಂಚಾಯತ್ ಇಒ ಅವರಿಂದ ಕಾರಣ ಕೇಳಿ ನೋಟಿಸ್ (ಶೋಕಾಸ್ ನೋಟಿಸ್) ನೀಡಲಾಗಿದೆ. ಗ್ರಾಪಂನಲ್ಲಿ ತಾವು ಶೇ 90ರಷ್ಟು ಕೆಲಸಗಳನ್ನು ಕಾನೂನುಬಾಹಿರವಾಗಿಯೇ ಮಾಡುವುದಾಗಿ ಮಾತಾಡಿದ್ದ ಆಡಿಯೋ ವೈರಲ್ ಆಗಿದ್ದ ಹಿನ್ನೆಲೆಯಲ್ಲಿ ಈ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಪ್ರಶಾಂತ ಅವರಿಗೆ ನೋಟಿಸ್ ನೀಡಲಾಗಿದೆ.
ಸದರಿ ಪ್ರಶಾಂತ ಮುನವಳ್ಳಿ ಅವರು ವ್ಯಕ್ತಿಯೊಬ್ಬರೊಂದಿಗೆ ಫೋನ್ ನಲ್ಲಿ ಮಾತಾಡಿದ್ದನ್ನು ಪ್ರಜಾ ನೆರಳು ದಿನಪತ್ರಿಕೆ ಬಹಿರಂಗ ಮಾಡಿತ್ತು. ತಾನು ಕಚೇರಿಯಲ್ಲಿ ಶೇ 90ರಷ್ಟು ಕೆಲಸಗಳನ್ನು ಕಾನೂನುಬಾಹಿರವಾಗಿಯೇ ಮಾಡುವುದಾಗಿ ಹೇಳಿದ ಈ ಆಡಿಯೋ ವೈರಲ್ ಆಗಿತ್ತು. ಸದ್ಯ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ. 90 ಪರ್ಸೆಂಟ್ ಕೆಲಸ ಕಾನೂನು ಬಾಹಿರ ಎಂಬ ಹೇಳಿಕೆಯು ಪಂಚಾಯತ್ ರಾಜ್ ಇಲಾಖೆಯ ಘನತೆಗೆ ಧಕ್ಕೆ ತರುವಂತಿದ್ದು, ಸಾರ್ವಜನಿಕರಲ್ಲಿ ಪಂಚಾಯತ್ ಆಡಳಿತದ ಬಗ್ಗೆ ಅಪನಂಬಿಕೆ ಮೂಡಿಸುವಂತಿದೆ ಎಂದು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ.
ಈ ಆರೋಪಗಳು ಮೇಲ್ನೋಟಕ್ಕೆ ಕರ್ತವ್ಯಲೋಪ ಮತ್ತು ದುರ್ನಡತೆಯನ್ನು ತೋರಿಸುತ್ತವೆ. ಹೀಗಾಗಿ ಪ್ರಜಾನೆರಳು ದಿನ ಪತ್ರಿಕೆಯಲ್ಲಿ ಪ್ರಕಟವಾದ ಸದರಿ ಆಡಿಯೋ ಸಂಭಾಷಣೆಯಲ್ಲಿರುವ ಧ್ವನಿ ನಿಮ್ಮದೇ ಹೌದಾ ಎಂದು ಪಿಡಿಒ ಪ್ರಶಾಂತ ಮುನವಳ್ಳಿ ಅವರಿಗೆ ನೋಟಿಸ್ ಮೂಲಕ ಪ್ರಶ್ನಿಸಲಾಗಿದೆ. ನೋಟಿಸ್ ತಲುಪಿದ 24 ಗಂಟೆಯೊಳಗೆ ಉತ್ತರ ನೀಡುವಂತೆ ತಿಳಿಸಲಾಗಿದೆ. ಒಂದೊಮ್ಮೆ ಉತ್ತರ ಬರದಿದ್ದರೆ ವರದಿಯಲ್ಲಿನ ಅಂಶಗಳನ್ನು ನೀವು ಒಪ್ಪಿಕೊಂಡಿರುವಿರಿ ಎಂದು ಭಾವಿಸಿ ಕರ್ನಾಟಕ ಸಿವಿಲ್ ಸೇವಾ ನಿಯಮಗಳ ಪ್ರಕಾರ ಶಿಸ್ತು ಕ್ರಮ ಜರುಗಿಸಲು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.
ಬೆಳಗಾವಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯವರು ಈ ನೋಟಿಸ್ ಅನ್ನು ಜಾರಿ ಮಾಡಿದ್ದಾರೆ. ತಾಪಂ ಇಒ ಯಶವಂತ್ ಅವರು ಈ ಪ್ರಕರಣದಲ್ಲಿ ತ್ವರಿತವಾಗಿ ಕ್ರಮ ಕೈಗೊಂಡಿರುವುದಕ್ಕೆ ಪ್ರಜಾ ನೆರಳು ದಿನಪತ್ರಿಕೆ ಅವರಿಗೆ ಅಭಿನಂದನೆಗಳನ್ನು ತಿಳಿಸುತ್ತದೆ. ಇದೇ ರೀತಿ ಬೆಳಗಾವಿ ತಾಲೂಕಿನಲ್ಲಿನ ಕೆಲ ಭ್ರಷ್ಟ ಪಿಡಿಒ ಗಳ ವಿರುದ್ಧವೂ ಅವರು ಕ್ರಮಕ್ಕೆ ಮುಂದಾಗಲಿ ಎಂಬುದು ಜನರ ಆಗ್ರಹವಾಗಿದೆ.















