ಬೆಂಗಳೂರು: ರಾಜ್ಯ ಸರ್ಕಾರದಿಂದ 50 ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಆಗಬಾರದೆಂಬ ದುರುದ್ದೇಶದಿಂದ ಮೇಲಿಂದ ಮೇಲೆ ತಪ್ಪು ಮಾಡುತ್ತಿದೆ. ಮೀಸಲಾತಿ ವಿಚಾರದಲ್ಲಿ ಪರಿಶಿಷ್ಟ ಜಾತಿಯ 101 ಜಾತಿಗಳಿಗೂ ಈ ಸರ್ಕಾರ ಅನ್ಯಾಯ ಮಾಡಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಆರೋಪಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶನಿವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರ್ಕಾರ ನೇಮಕಾತಿ ಮಾಡಲು ಸಿದ್ಧವಿತ್ತು. ಆದರೆ ಕೋರ್ಟಿನ ತಡೆಯಾಜ್ಞೆ ಇದ್ದುದರಿಂದ ನೇಮಕಾತಿ ಆಗಿಲ್ಲ ಎಂದು ಯುವಜನತೆಗೆ ತಿಳಿಸಲು ಯೋಜಿಸಿದಂತಿದೆ. 50 ಸಾವಿರಕ್ಕೂ ಹೆಚ್ಚು ಹುದ್ದೆಗೆ ನೇಮಕಾತಿ ಪ್ರಕಟಿಸಿದ್ದರೂ ವೇತನ ಕೊಡಲು ಹಣವನ್ನು ಬಜೆಟ್ನಲ್ಲಿ ಇಟ್ಟಿಲ್ಲ ಎಂದು ಆಕ್ಷೇಪಿಸಿದರು.
ದಲಿತರ ವಿಷಯ ಬಂದಾಗ ಅಡ್ವೊಕೇಟ್ ಜನರಲ್ ಅನ್ನು ಕೋರ್ಟಿಗೆ ಕಳಿಸುವ ಬದ್ಧತೆಯನ್ನು ಈ ಸರ್ಜಾರ ತೋರಿಸಿಲ್ಲ ಎಂದು ಟೀಕಿಸಿದರು. ಮಧ್ಯಂತರ ತಡೆಯಾಜ್ಞೆ ಇದ್ದಾಗಲೇ ಅಧಿವೇಶನದಲ್ಲಿ ಮಸೂದೆ ಅಂಗೀಕಾರ ಮಾಡಿದ್ದಾರೆ. ಶೇ 17 ಮೀಸಲಾತಿ ಮಾಡುವುದಾಗಿ ಹೇಳಿದ್ದರು. ನಿನ್ನೆ 15 ಶೇಕಡಾಕ್ಕೆ ಇಳಿಸಿದ್ದಾರೆ. ಹಾಗಿದ್ದರೆ ಸದನದ ಗೌರವ ಏನು ಉಳಿಯಿತು ಎಂದು ಪ್ರಶ್ನೆ ಹಾಕಿದರು.
ಬಸವರಾಜ ಬೊಮ್ಮಾಯಿ ಸರ್ಮಾಕಾರ ಮಾಧುಸ್ವಾಮಿ ಉಪ ಸಮಿತಿ ವರದಿಯನ್ನು ಆಧರಿಸಿ ವೈಜ್ಞಾನಿಕವಾಗಿ ಹಂಚಿಕೆ ಮಾಡಿತ್ತು. ಅವೆಲ್ಲವನ್ನೂ ಕಡಿಮೆ ಮಾಡಿದ್ದಾರೆ. ಎಡ, ಬಲ ಸೇರಿ ಎಲ್ಲರಿಗೂ ಅನ್ಯಾಯ ಮಾಡಿದ್ದಾರೆ. ಬೊಮ್ಮಾಯಿಯವರ ಸರ್ಕಾರ ಅಲೆಮಾರಿಗಳ ಪ್ರತ್ಯೇಕ ಗುಂಪು ಮಾಡಿದ್ದರು. ಇಲ್ಲಿ ಆ ಪ್ರತ್ಯೇಕ ಗುಂಪನ್ನು ಉಳಿಸಿಲ್ಲ ಎಂದರು
ಶಾಸಕ ಮಾನಪ್ಪ ವಜ್ಜಲ್ ಮಾತನಾಡಿ, ಸರ್ಕಾರದ ನಿರ್ಣಯದಿಂದ ಪರಿಶಿಷ್ಟ ಜಾತಿ, ಪಂಗಡಗಳ ಮೇಲೆ ಪೆಟ್ಟು ಬೀಳಲಿದೆ. ಬೋವಿ, ಬಂಜಾರ ಸಮುದಾಯಕ್ಕೂ ಅನ್ಯಾಯ ಆಗಲಿದೆ. ಬೋವಿ, ಬಂಜಾರ, ಕೊರಮ, ಕೊರಚ ಸಮುದಾಯದ ಮುಂದಿನ ಪೀಳಿಗೆಗೂ ಇದರಿಂದ ಅನ್ಯಾಯ ಆಗಲಿದೆ. ಆದ್ದರಿಂದ ಕಾಂಗ್ರೆಸ್ ಸರ್ಕಾರದ ತೀರ್ಮಾನವನ್ನು ಒಪ್ಪಲು ಸಾಧ್ಯವಿಲ್ಲ. ಕೋರ್ಟ್ ಆದೇಶವನ್ನೂ ಬದಿಗಿಟ್ಟು ಸರ್ಕಾರ ತೀರ್ಮಾನ ಮಾಡಿದೆ ಎಂದು ಟೀಕಿಸಿದರು.













