ಬೆಂಗಳೂರು: ಪಾಶ್ಚಾತ್ಯ ಮೂಲದ ಪಿಟೀಲು ವಾದ್ಯವನ್ನು ಭಾರತೀಯ ಸಂಸ್ಕೃತಿಗೆ ಅಳವಡಿಸಿಕೊಂಡು, ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಅವಿಭಾಜ್ಯ ಅಂಗವಾಗುವಂತೆ ಬೆಳೆಸುವಲ್ಲಿ ನಮ್ಮ ಪೂರ್ವಿಕರ ಪರಿಶ್ರಮ ಮಹತ್ವದ್ದಾಗಿದೆ ಎಂದು ಪಿಟೀಲು ವಿದ್ವಾಂಸ ಹಾಗೂ ವಿಜಯ ಕಾಲೇಜ್ ಆಫ್ ಮ್ಯೂಸಿಕ್‌ನ ನಿರ್ದೇಶಕ ಎಚ್.ಕೆ. ವೆಂಕಟರಾಮ್ ಹೇಳಿದರು.
ವಿಜಯ ಕಾಲೇಜ್ ಆಫ್ ಮ್ಯೂಸಿಕ್ ವತಿಯಿಂದ ಸಂಗೀತ ಕಲಾರತ್ನ ಪ್ರೊ. ಎಚ್.ವಿ. ಕೃಷ್ಣಮೂರ್ತಿ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಭಾನುವಾರ ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಿದ್ದ ‘ಸ್ಟ್ರಿಂಗ್ಸ್ ಅಕ್ರಾಸ್ ಟ್ರೆಡಿಷನ್ಸ್’ ಕಾರ್ಯಕ್ರಮದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸುಮಾರು 250 ವರ್ಷಗಳ ಹಿಂದೆ ಪಾಶ್ಚಾತ್ಯ ಮೂಲದ ಪಿಟೀಲು ಭಾರತೀಯ ಸಂಗೀತ ಪರಂಪರೆಗೆ ಪ್ರವೇಶಿಸಿತು. ಇಂದು ಕರ್ನಾಟಕ ಶಾಸ್ತ್ರೀಯ ಸಂಗೀತದ ಕಚೇರಿಗಳಲ್ಲಿ ಪಿಟೀಲು ಇಲ್ಲದೆ ಕಾರ್ಯಕ್ರಮ ನಡೆಯದಷ್ಟು ಮಹತ್ವ ಪಡೆದುಕೊಂಡಿದೆ. ಈ ಬೆಳವಣಿಗೆಯ ಹಿಂದೆ ಹಿಂದಿನ ತಲೆಮಾರಿನ ವಿದ್ವಾಂಸರ ಶ್ರಮವಿದೆ ಎಂದರು
ಸಂಗೀತ ಕಚೇರಿಗಳನ್ನು ನಡೆಸುವ, ವಿದ್ಯಾರ್ಥಿಗಳಿಗೆ ಪಾಠ ಹೇಳುವ ಹಾಗೂ ಸಂಗೀತ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಅನೇಕ ಕಲಾವಿದರ ಕೊಡುಗೆ ಗುರುತಿಸುವ ಉದ್ದೇಶದಿಂದ 75 ಪಿಟೀಲು ವಿದ್ವಾಂಸರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗಿದೆ. ವಿಜಯ ಕಾಲೇಜ್ ಆಫ್ ಮ್ಯೂಸಿಕ್ ಸಂಸ್ಥಾಪಕರು ನನ್ನ ತಂದೆ ಪ್ರೊ. ಎಚ್.ವಿ. ಕೃಷ್ಣಮೂರ್ತಿ ಅವರಾಗಿದ್ದು, ಈ ಸಂಸ್ಥೆ 2028ರಲ್ಲಿ ಅಮೃತ ಮಹೋತ್ಸವ ಆಚರಿಸಲಿದೆ. ಅವರ ಗುರುಗಳಾದ ಎಲ್.ಎಸ್. ನಾರಾಯಣಸ್ವಾಮಿ ಭಾಗವತರು ಸಂಸ್ಥೆಯ ಸ್ಥಾಪನೆಗೆ ಕಾರಣಕರ್ತರಾಗಿದ್ದಾರೆ ಎಂದು ಸ್ಮರಿಸಿದರು.
ಅನನ್ಯ, ಫೋರ್ಟ್ ಹೈಸ್ಕೂಲ್ ರಾಮ ಸೇವಾ ಮಂಡಳಿ, ಶ್ರೀ ಕೃಷ್ಣ ಸಂಗೀತ ಸಭಾ, ನಾದ ಸುರಭಿ, ಎಂ.ಎ. ನರಸಿಂಹಾಚಾರ್ ಫೌಂಡೇಶನ್ ಹಾಗೂ ವಾಣಿ ಕಲಾ ಕೇಂದ್ರ ಸೇರಿದಂತೆ ವಿವಿಧ ಸಂಗೀತ ಸಂಸ್ಥೆಗಳ ಮುಖ್ಯಸ್ಥರ ಉಪಸ್ಥಿತಿಯಲ್ಲಿ ಕಲಾವಿದರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಪಿಟೀಲು ವಾದಕರಿಗೆ ಸನ್ಮಾನ, ವಿಜಯ ಕಾಲೇಜ್ ಆಫ್ ಮ್ಯೂಸಿಕ್‌ನ ವಿದ್ಯಾರ್ಥಿಗಳಿಂದ ಪಿಟೀಲು ವಾದನ ಹಾಗೂ ಸಂಗೀತ ಪ್ರದರ್ಶನಗಳು ಈ ವೇಳೆ ನಡೆದವು. ವಿಶೇಷವಾಗಿದೆ ಪದ್ಮವಿಭೂಷಣ ಪುರಸ್ಕೃತ ಪಿಟೀಲು ವಿದ್ವಾಂಸ ಡಾ. ಎಲ್. ಸುಬ್ರಹ್ಮಣ್ಯಂ ಅವರನ್ನು ಗೌರವಿಸಲಾಯಿತು. ಬೆಂಗಳೂರಿನ 18 ಪ್ರಮುಖ ವೀಣಾ ಕಲಾವಿದರಿಗೂ ಸನ್ಮಾನ ಆಯೋಜಿಸಲಾಗಿತ್ತು. ಮಾಜಿ ಉಪಮುಖ್ಯಮಂತ್ರಿ, ಮಲ್ಲೇಶ್ವರ ಕ್ಷೇತ್ರದ ಶಾಸಕ ಸಿ. ಎನ್ ಅಶ್ವಥ್ನಾರಾಯಣ್ ಆಗಮಿಸಿ ಕಾರ್ಯಕ್ರಮಕ್ಕೆ ಮೆರುಗನ್ನು ತುಂಬಿದರು.














