ಬೆಂಗಳೂರು: ಪ್ರಸ್ತುತ ದಿನಗಳಲ್ಲಿ ಕೌಶಲಕ್ಕೆ ಹೆಚ್ಚಿನ ಮಹತ್ವವಿದ್ದು, ವೃತ್ತಿ ಜೀವನದಲ್ಲಿ ಸಾಧನೆ ಮಾಡಲು ಯಾವುದೇ ಶಾರ್ಟ್‌ಕಟ್‌ಗಳಿಲ್ಲ. ಕಠಿಣ ಪರಿಶ್ರಮ, ನಿರಂತರ ಜ್ಞಾನಾರ್ಜನೆ ಹಾಗೂ ಶ್ರದ್ಧೆಯಿಂದ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ಆರ್‌ವಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ನಿರ್ದೇಶಕ ಪುರುಷೋತ್ತಮ ಬಂಗ್ ಹೇಳಿದರು.
ಜೆ.ಪಿ. ನಗರದ ಆರ್‌ವಿ ಡೆಂಟಲ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸಮಾಜದಲ್ಲಿ ಸದಾ ಕಾರ್ಯಪ್ರವೃತ್ತರಾಗಿರಬೇಕು. ಸಮಾಜಕ್ಕೆ ತಮ್ಮಿಂದಾದ ಕೊಡುಗೆ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು. ವರ್ಷದ 365 ದಿನಗಳನ್ನೂ ಜ್ಞಾನಾರ್ಜನೆಗಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಸಮಾಜಕ್ಕೆ ನಾವು ನೀಡುವ ಕೊಡುಗೆಗೆ ಅನುಗುಣವಾಗಿ ನಮ್ಮ ಬೆಳವಣಿಗೆಯೂ ನಿರ್ಧಾರವಾಗುತ್ತದೆ ಎಂದರು.
ಜೀವನದಲ್ಲಿ ಸಾಧನೆ ಮಾಡಲು ಶೇ.100ರಷ್ಟು ಪರಿಶ್ರಮ ವಿನಿಯೋಗಿಸಬೇಕು. ಗುರುಗಳು, ಹಿರಿಯರು ಹಾಗೂ ಕಿರಿಯರು ಸೇರಿದಂತೆ ಎಲ್ಲರನ್ನೂ ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು. ಆಗ ಸಮಾಜವೂ ನಮ್ಮನ್ನು ಗೌರವಿಸುತ್ತದೆ. ವಿದ್ಯಾರ್ಥಿಗಳ ಆಲೋಚನೆಗಳು ವಿಶಾಲವಾಗಿರಬೇಕು. ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಸೇರಿದಂತೆ ಹಲವು ಗಣ್ಯ ಸಾಧಕರನ್ನು ಆದರ್ಶವಾಗಿಟ್ಟುಕೊಂಡು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಪ್ರೊ. ವಿಕ್ರಮ್ ಪಿ. ಮಾತನಾಡಿ, ಉತ್ತಮ ಫಲಿತಾಂಶದೊಂದಿಗೆ ಪದವಿ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿ, ಪದವಿ ಶಿಕ್ಷಣದ ಬಳಿಕ ಮುಂದಿನ ಗುರಿ ಹಾಗೂ ವೃತ್ತಿ ಜೀವನದ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಸಮಾಜಕ್ಕೆ ಉಪಯುಕ್ತವಾದ ಕೊಡುಗೆ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ವಿದ್ಯಾರ್ಥಿಗಳ ಮುಂದಿನ ವೃತ್ತಿ ಜೀವನ ಉಜ್ವಲವಾಗಿರಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ರಮೇಶ್ ಬಿ.,ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ನ ಉಮಾ ಶರ್ಮ, ಸೌಮ್ಯ, ಅನಿತಾ, ಅರ್ಪಣಾ ಕೆ. ರಾವ್, ಎ. ರಾಜನ್ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.














