ಬೆಂಗಳೂರು: ರೋಗಿ ಕೇಂದ್ರಿತ ಆರೋಗ್ಯ ಸೇವೆಗಳನ್ನು ಮತ್ತಷ್ಟು ಸುಧಾರಿಸುವ ಉದ್ದೇಶದಿಂದ ಎನ್ಯು ಆಸ್ಪತ್ರೆ ಮೂರು ನೂತನ ಉಪಕ್ರಮಗಳಿಗೆ ಚಾಲನೆ ನೀಡಿದೆ. ಅತ್ಯಾಧುನಿಕ ಎಎಂಎಸ್ ಎಡ್ಜ್ ರೋಬೋಟಿಕ್ ಸರ್ಜಿಕಲ್ ಸಿಸ್ಟಮ್, ರೋಗಿಗಳಿಗೆ ಅನುಕೂಲ ಕಲ್ಪಿಸುವ ಎನ್ಯು ಆ್ಯಪ್ ಹಾಗೂ ಆಸ್ಪತ್ರೆಯ ಸಾಧನೆಗಳನ್ನು ದಾಖಲಿಸುವ ದಿ ಲಿಂಕ್ 2024-26ರ ವಾರ್ಷಿಕ ಸಂಚಿಕೆಯನ್ನು ಅನಾವರಣಗೊಳಿಸಲಾಗಿದೆ.
ಈ ಸಂಬಂಧ ಶುಕ್ರವಾರ ರಾಜಾಜಿನಗರದ ಎನ್ಯು ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ನಟ, ನಿರ್ದೇಶಕ ರಮೇಶ್ ಅರವಿಂದ್, ತಂತ್ರಜ್ಞಾನ ಮತ್ತು ಮಾನವೀಯ ಅನುಕಂಪಗಳು ಜತೆಯಾಗಿ ಸಾಗಿದಾಗ ಮಾತ್ರ ಆರೋಗ್ಯ ಸೇವೆಗಳು ಜನರ ಬದುಕಿನಲ್ಲಿ ನೈಜ ಬದಲಾವಣೆ ತರಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಎನ್ಯು ಆಸ್ಪತ್ರೆಯು ಉತ್ತಮ ಹೆಜ್ಜೆ ಇಟ್ಟಿದೆ ಎಂದು ಶ್ಲಾಘಿಸಿದರು.
ಎನ್ಯು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಹಿರಿಯ ಮಕ್ಕಳ ಮೂತ್ರಶಾಸ್ತ್ರ ತಜ್ಞ ಡಾ. ಪ್ರಸನ್ನ ವೆಂಕಟೇಶ್ ಎಂ.ಕೆ. ಮಾತನಾಡಿ, ರೋಗಿಗಳನ್ನು ಕೇಂದ್ರದಲ್ಲಿಟ್ಟುಕೊಂಡು ಅತ್ಯುತ್ತಮ ವಿಶೇಷ ಆರೋಗ್ಯ ಸೇವೆಗಳನ್ನು ಒದಗಿಸುವುದು ಸಂಸ್ಥೆಯ ಮೊದಲ ಆದ್ಯತೆಯಾಗಿದೆ. ರೋಬೋಟಿಕ್ ಶಸ್ತ್ರಚಿಕಿತ್ಸಾ ತಂತ್ರಜ್ಞಾನವು ವೈದ್ಯರ ಕೌಶಲಕ್ಕೆ ಮತ್ತಷ್ಟು ಬಲ ತುಂಬಲಿದ್ದು, ಚಿಕಿತ್ಸೆಯ ಗುಣಮಟ್ಟವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿದೆ ಎಂದರು.
ಆಸ್ಪತ್ರೆಯ ಅಧ್ಯಕ್ಷ ಡಾ. ವೆಂಕಟೇಶ್ ಕೃಷ್ಣಮೂರ್ತಿ ಮಾತನಾಡಿ, ಸಂಸ್ಥೆಯ ಪ್ರತಿಯೊಂದು ಮೈಲಿಗಲ್ಲೂ ರೋಗಿಗಳು ಇಟ್ಟಿರುವ ನಂಬಿಕೆ ಹಾಗೂ ವೈದ್ಯಕೀಯ ತಂಡದ ಬದ್ಧತೆಗೆ ಸಾಕ್ಷಿಯಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ನಿರಂತರವಾಗಿ ಹೊಸ ತಂತ್ರಜ್ಞಾನಗಳು ಅಭಿವೃದ್ಧಿಯಾಗುತ್ತಿರುವ ಹಿನ್ನೆಲೆಯಲ್ಲಿ ಅವುಗಳನ್ನು ಅಳವಡಿಸಿಕೊಳ್ಳುವುದರ ಜತೆಗೆ ರೋಗಿಗಳಿಗೆ ಕಾಳಜಿಯುತ ಆರೈಕೆ ಒದಗಿಸುವುದು ಸಂಸ್ಥೆಯ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಗ್ರೂಪ್ ಮೆಡಿಕಲ್ ಡೈರೆಕ್ಟರ್ ಡಾ. ದಿಲೀಪ್ ರಂಗರಾಜನ್ ಮಾತನಾಡಿ ತಂತ್ರಜ್ಞಾನವು ರೋಗಿಗಳಿಗೆ ಮತ್ತು ವೈದ್ಯಕೀಯ ತಂಡಗಳ ಸೇವೆಗಳನ್ನು ಸರಳಗೊಳಿಸಿದಾಗ ಮಾತ್ರ ಅದಕ್ಕೊಂದು ನೈಜ ಅರ್ಥ ಬರುತ್ತದೆ. ಎನ್ಯು ಆ್ಯಪ್ ಮೂಲಕ ನಾವು ಅತ್ಯಗತ್ಯ ಆರೋಗ್ಯ ಸೇವೆಗಳನ್ನು ರೋಗಿಗಳಿಗೆ ಸುಲಭವಾಗಿ ತಲುಪಿಸುವ ಗುರಿ ಹೊಂದಿದ್ದೇವೆ. ಇದರಿಂದ ಅವರ ಸಮಯ ಉಳಿಯಲಿದ್ದು, ವೈದ್ಯಕೀಯ ಮಾಹಿತಿಯನ್ನು ಪಡೆಯುವುದು ಹೆಚ್ಚು ಅನುಕೂಲಕರವಾಗಲಿದೆ ಎಂದು ತಿಳಿಸಿದರು.














