ಬೆಂಗಳೂರು: ಕಲ್ಯಾಣ ಕರ್ನಾಟಕ ಅಸಮತೋಲನ ನಿವಾರಣೆ ನೆಪದಲ್ಲಿ ಮಾಡುತ್ತಿರುವ ತೀರ್ಮಾನಗಳು ಮೈಸೂರು, ಕರಾವಳಿ, ಕಿತ್ತೂರು ಕರ್ನಾಟಕ ಪ್ರದೇಶಗಳಿಗೆ ತಾರತಮ್ಯ ಉಂಟು ಮಾಡಿ ಹೊಸ ಪ್ರಾದೇಶಿಕ ಅಸಮತೋಲನ ಸೃಷ್ಟಿಗೆ ಎಡೆಮಾಡಿಕೊಟ್ಟಿದೆ ಎಂದು ರಾಜ್ಯ ಒಕ್ಕಲಿಗ ಮೀಸಲಾತಿ ಸಮಿತಿಯ ಸಂಚಾಲಕ ಆಡಿಟರ್ ನಾಗರಾಜ್ ಯಲಚವಾಡಿ ತಿಳಿಸಿದರು.
ಶನಿವಾರ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ವಿವಿಧ ಇಲಾಖೆಗಳಲ್ಲಿ ಮತ್ತು ನಿಗಮ ಮಂಡಳಿಗಳಲ್ಲಿ ಹೈದರಾಬಾದ್ ಕರ್ನಾಟಕಕ್ಕೆ ಮೀಸಲಿರಿಸಿರುವ ಹುದ್ದೆಗಳ ವಿವರಗಳನ್ನು ಪಾರದರ್ಶಕವಾಗಿ ಬಹಿರಂಗಪಡಿಸಬೇಕು. ಈ ಕುರಿತು ಸರ್ಕಾರ ಸೂಕ್ತ ಆದೇಶ ಹೊರಡಿಸಬೇಕು ಎಂದು ವಿನಂತಿಸಿದರು.
ಹೈದರಾಬಾದ್ ಕರ್ನಾಟಕ ಅನುಷ್ಠಾನ ಪರಾಮರ್ಶೆಗೆ ರಚಿಸಿರುವ ಸಚಿವ ಸಂಪುಟದ ಉಪಸಮಿತಿಯು ತೆಗೆದುಕೊಂಡಿರುವ ನಿರ್ಧಾರವನ್ನು ಸಮಗ್ರ ಕರ್ನಾಟಕದ ಹಿತದೃಷ್ಟಿಯಿಂದ ಮರುಪರಿಶೀಲಿಸಲು ಎಲ್ಲಾ ಭಾಗದ ಸಚಿವರ ಸಮಿತಿಯನ್ನು ರಚಿಸಿ ತೀರ್ಮಾನಗಳನ್ನು ಮರುಪರಿಶೀಲಿಸಬೇಕು. ಈ ಸಂಬಂಧ ರಾಜ್ಯದ ಸಚಿವ ಸಂಪುಟವು ಕೂಡಲೇ ಸೂಕ್ತ ನಿರ್ಣಯ ತೆಗೆದುಕೊಳ್ಳಬೇಕು ಎಂದರು.
ನಿವೃತ್ತ ಪೊಲೀಸ್ ಅಧಿಕಾರಿ ನಾಗರಾಜ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೈದರಾಬಾದ್ ಕರ್ನಾಟಕ ಮತ್ತು ಇತರ ಕರ್ನಾಟಕ ಭಾಗದ ಹುದ್ದೆಗಳನ್ನು ಪ್ರತ್ಯೇಕವಾಗಿ ನೇಮಕಾತಿ ಮಾಡಲಾಗುತ್ತಿದ್ದು, ನೇಮಕಾತಿ ಅರ್ಜಿ ಸಲ್ಲಿಸುವಾಗ ಹೈದರಾಬಾದ್ ಕರ್ನಾಟಕ ಸ್ಥಳೀಯ ವೃಂದದ ಅಭ್ಯರ್ಥಿಗಳಿಗೆ ಯಾವ ವೃಂದದಲ್ಲಿ ಪರಿಗಣಿಸಬೇಕು ಎಂದು ಅಭ್ಯರ್ಥಿಯಿಂದ ಆಪ್ಷನ್ ಪಡೆದು ಅದೇ ವೃಂದದಲ್ಲಿ ಪರಿಗಣಿಸಬೇಕು. ಈ ಕುರಿತು ಎಲ್ಲಾ ನೇಮಕಾತಿ ಪ್ರಾಧಿಕಾರಗಳಿಗೆ ಸರ್ಕಾರ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.
ನೌಕರರು ನೇಮಕಾತಿಯ ನಂತರವೂ ಹೆಚ್ಚಾಗಿ ಹೈದರಾಬಾದ್ ಕರ್ನಾಟಕ ವ್ಯಾಪ್ತಿಯಲ್ಲಿ ಕೆಲಸ ಮಾಡದೆ ಬೆಂಗಳೂರು ಮತ್ತು ಇತರ ಭಾಗಗಳಲ್ಲಿ ಹೆಚ್ಚು ಕಾರ್ಯನಿರ್ವಹಿಸುತ್ತಿದ್ದಾರೆ. ಆದ್ದರಿಂದ ಅಲ್ಲಿನ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಿ ಇತರ ಕರ್ನಾಟಕ ಭಾಗದ ಹುದ್ದೆಗಳನ್ನು ಖಾಲಿ ಬಿಡುವುದರಿಂದ ಇತರ ಕರ್ನಾಟಕ ಭಾಗದವರಿಗೆ ಅನ್ಯಾಯವಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷ ಟಿ.ಕೋನಪ್ಪ ರೆಡ್ಡಿ, ಆನಂದ್, ಪುಟ್ಟಸ್ವಾಮಿ, ಮೂಡ್ಲಿಗಿರಿಗೌಡ ಉಪಸ್ಥಿತರಿದ್ದರು.















