ಬೆಳಗಾವಿ: ಶನಿವಾರ ರಾಜ್ಯ ಸರ್ಕಾರದ ಆದೇಶದ ಅನ್ವಯ ಅಬಕಾರಿ ಜಂಟಿ ಆಯುಕ್ತರ ನೇತೃತ್ವದಲ್ಲಿ ಬೆಳಗಾವಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸ್ಥಗಿತಗೊಂಡಿರುವ ಮತ್ತು ಮಂಜೂರಾಗದೆ ಬಾಕಿ ಇರುವ ಸನ್ನದ್ದುಗಳ ಹರಾಜು ಪ್ರಕ್ರಿಯೆಗೆ ಸಂಬಂಧಪಟ್ಟಂತೆ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಹರಾಜಿಗೆ ಸಂಬಂಧಪಟ್ಟಂತೆ ಹಾಜರಿದ್ದ ಬಿಡ್ ಅರ್ಜಿದಾರರು ಮತ್ತು ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಬೆಳಗಾವಿ ಜಿಲ್ಲಾ ಅಬಕಾರಿ ಜಂಟಿ ಆಯುಕ್ತ ಹೆಚ್. ಎಫ್ ಛಲವಾದಿ ಅವರು, ಎಂ.ಎಸ್.ಟಿ.ಸಿ ಲಿಮಿಟೆಡ್ ವತಿಯಿಂದ ಹರಾಜು ಪ್ರಕ್ರಿಯೆ ನಡೆಸಲಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 21 ಸನ್ನದ್ದುಗಳನ್ನು ಹರಾಜಿಗೆ ಇಡಲಾಗಿದೆ. ಸಿಎಲ್ 2ಎ ಹಾಗೂ 9ಎ ವರ್ಗದ ಮದ್ಯದ ಅಂಗಡಿಗಳು ಲಭ್ಯವಿವೆ ಎಂದು ಮಾಹಿತಿ ನೀಡಿದರು.
ಇಂದಿನ ತರಬೇತಿಯಲ್ಲಿ ಆಸಕ್ತ ಸಾರ್ವಜನಿಕರು ಅಥವಾ ಸಂಭಾವ್ಯ ಬಿಡ್ ದಾರರು ಹಾಗೂ ಸನ್ನದ್ದುದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾವಹಿಸಿರುವುದು ಉತ್ತಮವಾಗಿದೆ. ಸಾಮಾನ್ಯವರ್ಗ, ಎಸ್.ಸಿ, ಎಸ್.ಟಿ ವರ್ಗಗಳಾಗಿ ಸನ್ನದ್ದುಗಳನ್ನು ವರ್ಗೀಕರಣ ಮಾಡಲಾಗಿದೆ. ಬಿಡ್ ನ ಬೇಸ್ ಮೊತ್ತವನ್ನು 70 ಲಕ್ಷ ದಿಂದ 1.1 ಕೋಟಿ ನಿಗದಿಪಡಿಸಲಾಗಿದೆ. ಬಿಡ್ ಪ್ರಾರಂಭವಾಗುವ ಮೊದಲು ಸನ್ನದ್ದುಗಳಿಗೆ ಅನುಗುಣವಾಗಿ 1.4 ಲಕ್ಷದಿಂದ 2.2 ಲಕ್ಷದವರೆಗೆ ಇ.ಎಂ.ಡಿ ಮೊತ್ತವನ್ನು ಪಾವತಿಸಲು ಸೂಚಿಸಲಾಗಿದೆ ಎಂದರು.
ಆಸಕ್ತ ಬಿಡ್ ದಾರರು ಮೊದಲು https://www.mstceecommerce.com ವೆಬ್ ಸೈಟ್ ತೆರೆಯಬೇಕು. ನಂತರ ಅಲ್ಲಿ ಇರುವ ಫಾರ್ಮ್ ನಲ್ಲಿ ತಮ್ಮ ಪ್ರಾಥಮಿಕ ಮಾಹಿತಿಗಳನ್ನು ದಾಖಲಿಸಿ 1 ಸಾವಿರ ರೂಪಾಯಿ ಮತ್ತು ಅದಕ್ಕೆ ಸಂಬಂಧಪಟ್ಟ ಜಿ.ಎಸ್.ಟಿ ಮೊತ್ತವನ್ನು ಪಾವತಿಸಬೇಕು. ಪಾವತಿ ಧೃಡೀಕರಣಗೊಂಡ ನಂತರ ಅಧಿಕೃತ ವರ್ಚುವಲ್ ಅಕೌಂಟ್ ನಂಬರ್ ವೆಬ್ ಪರದೆಯ ಮೇಲೆ ಅನಾವರಣಗೊಳ್ಳಲಿದ್ದು, ಅದಕ್ಕೆ ಸಂಬಂಧಪಟ್ಟ ಸನ್ನದ್ದುಗಳು ಮತ್ತು ವರ್ಗೀಕರಣಕ್ಕೆ ಅನುಗುಣವಾಗಿ ಅಪ್ಲಿಕೇಶನ್ ಮತ್ತು ಇಎಂಡಿ ಮೊತ್ತವನ್ನು ತಮ್ಮ ವರ್ಚುವಲ್ ಖಾತೆಗೆ ವರ್ಗಾಯಿಸಿ ಇಟ್ಟುಕೊಳ್ಳಬೇಕು. ಈ ಎಲ್ಲಾ ಪ್ರಕ್ರಿಯೆಗಳನ್ನು ಹರಾಜು ಪ್ರಕ್ರಿಯೆ ಆರಂಭವಾಗುವ 48 ಗಂಟೆಗಳ ಮೊದಲು ಪೂರೈಸಿರಬೇಕು ಎಂದು ಹೆಚ್. ಎಫ್ ಛಲವಾದಿ ವಿವರಿಸಿದರು.
ತರಬೇತಿ ಕಾರ್ಯಕ್ರಮದಲ್ಲಿ ಬೆಳಗಾವಿ ದಕ್ಷಿಣ ಮತ್ತು ಉತ್ತರ ಉಪ ವಿಭಾಗದ ಅಬಕಾರಿ ಉಪಾಯ ಆಯುಕ್ತರು, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.














