ಗಡಿ ಭಾಗದ ಪ್ರದೇಶಗಳಲ್ಲಿ ಮಲೆಯಾಳ ಭಾಷೆ ಹೇರುವ ಕೆಲಸ ಖಂಡನೀಯ: ಬಿ.ವೈ.ವಿಜಯೇಂದ್ರ

WhatsApp
Telegram
Facebook
Twitter
LinkedIn

ಬೆಂಗಳೂರು: ಕರ್ನಾಟಕದ ಗಡಿ ಭಾಗದ ಕೇರಳ ರಾಜ್ಯದ ಪ್ರದೇಶದಲ್ಲಿ ಕನ್ನಡ ಶಾಲೆಗಳಲ್ಲಿ ಒತ್ತಾಯಪೂರ್ವಕವಾಗಿ ಮಲೆಯಾಳ ಭಾಷೆ ಹೇರುವ ಕೆಲಸಕ್ಕೆ ಅಲ್ಲಿನ ಕಮ್ಯುನಿಸ್ಟ್ ಪಕ್ಷದ ಸರ್ಕಾರ ಕೈ ಹಾಕಿದೆ. ಇದು ಖಂಡನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ಕಿಡಿಕಾರಿದರು.

ಶನಿವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ನೀಡುತ್ತಾ, ಬಿಜೆಪಿ ಮಲೆಯಾಳ ಭಾಷೆಯ ಹೇರಿಕೆಯನ್ನು ಪ್ರಬಲವಾಗಿ ಖಂಡಿಸುತ್ತದೆ. ಅಷ್ಟೇ ಅಲ್ಲ; ಎಲ್ಲ ಕನ್ನಡಪರ ಸಂಘಟನೆಗಳು ಇದನ್ನು ಪ್ರಬಲವಾಗಿ ವಿರೋಧಿಸಿವೆ. ಕೇರಳದಲ್ಲಿರುವ ನಮ್ಮ ಕನ್ನಡ ಶಾಲೆಗಳನ್ನು ಉಳಿಸುವ ಕೆಲಸದಲ್ಲಿ ಕೇವಲ ಹೇಳಿಕೆ, ಪತ್ರ ಬರೆದರೆ ಸಾಕಾಗುವುದಿಲ್ಲ. ಕೆ.ಸಿ.ವೇಣುಗೋಪಾಲ್ ಅವರ ಕಿವಿ ಹಿಂಡಿ ಕನ್ನಡಿಗರಿಗೆ ಅನ್ಯಾಯ ಆಗಬಾರದು, ಕೇರಳದಲ್ಲಿರುವ ಕನ್ನಡ ಶಾಲೆಗಳ ರಕ್ಷಣೆ ಮಾಡಿ, ಮಲೆಯಾಳ ಹೇರಿಕೆಗೆ ಅವಕಾಶ ಕೊಡಬಾರದೆಂದು ಸಿದ್ದರಾಮಯ್ಯ ಸರ್ಕಾರ ಗಟ್ಟಿ ನಿಲುವನ್ನು ತೆಗೆದುಕೊಳ್ಳಲಿ ಎಂದು ಆಗ್ರಹಿಸಿದರು.

ಕಾಂಗ್ರೆಸ್ಸಿನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಕರ್ನಾಟಕದ ವಿಚಾರದಲ್ಲಿ ಪದೇಪದೇ ಮೂಗು ತೂರಿಸುವ ವಿಚಾರ ಮಾಡುತ್ತಾರೆ. ವಯನಾಡಿಗೆ ಇಲ್ಲಿನ ಕಾಂಗ್ರೆಸ್ ಸರ್ಕಾರ ವಿವಿಧ ಸಂದರ್ಭಗಳಲ್ಲಿ ಸಹಾಯಹಸ್ತ ಚಾಚಿದ್ದು ನಿಮಗೆಲ್ಲ ಗೊತ್ತಿದೆ. ಮೊನ್ನೆ ಕೋಗಿಲು ಪ್ರಕರಣದಲ್ಲಿ ಕೆ.ಸಿ.ವೇಣುಗೋಪಾಲ್ ಅಬ್ಬರಿಸಿದ್ದಕ್ಕೆ ಇಡೀ ಕಾಂಗ್ರೆಸ್ ಸರ್ಕಾರ ನಡುಗಿ ಹೋಗಿತ್ತು ಎಂದು ಹೇಳಿದರು.

ಸುದ್ದಿಗಾರರ ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದ ಅವರು, ದ್ವೇಷ ಭಾಷಣ ಸಂಬಂಧಿ ಕಾಯ್ದೆಯನ್ನು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಚರ್ಚೆಗೂ ಅವಕಾಶ ಕೊಡದೇ ಹಿಂಬಾಗಿಲಿನಿಂದ ಮಂಜೂರು ಮಾಡಲಾಯಿತು. ಈ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರ ಯಾವ ರೀತಿ ನಡೆದುಕೊಂಡಿದೆ ಎಂದು ಎಲ್ಲರಿಗೂ ಗೊತ್ತಿದೆ. ಬಿಜೆಪಿ ಮಾತ್ರವಲ್ಲದೇ, ಜೆಡಿಎಸ್, ಬೇರೆ ಬೇರೆ ಸಂಘಟನೆಗಳು ದ್ವೇಷ ಭಾಷಣ ಕಾಯ್ದೆಯನ್ನು ವಿರೋಧಿಸಿವೆ. ಕಾಂಗ್ರೆಸ್ ಸರ್ಕಾರ ಒಂದು ರೀತಿ ತುರ್ತು ಪರಿಸ್ಥಿತಿ ಹೇರುವಂಥ ದುಸ್ಸಾಹಸಕ್ಕೆ ಕೈ ಹಾಕಿದೆ. ರಾಜ್ಯದಲ್ಲಿ ಪ್ರತಿಯೊಬ್ಬರೂ ಇದನ್ನು ವಿರೋಧಿಸುತ್ತಿದ್ದಾರೆ. ಆದ್ದರಿಂದ ರಾಜ್ಯಪಾಲರು ಅದನ್ನು ತಡೆ ಹಿಡಿಯುವ ಕೆಲಸ ಮಾಡಿದ್ದಾರೆ. ನಾವು ಕೂಡ ಈ ವಿಚಾರವಾಗಿ ಮನವಿ ಮಾಡಿದ್ದೆವು ಎಂದು ತಿಳಿಸಿದರು.

ಎಲ್ಲ ಶಿವಾಲಯಗಳಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪೂಜೆ:

ಸೋಮನಾಥ ಸ್ವಾಭಿಮಾನಿ ಪರ್ವದ ಅಂಗವಾಗಿ ದೇಶದ ಎಲ್ಲ ಶಿವಾಲಯಗಳಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ದೇಶಭಕ್ತರು ಶಿವನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, 11 ಬಾರಿ ಓಂ ನಮಃ ಶಿವಾಯ ಧ್ಯಾನವನ್ನು ಮಾಡಿದ್ದೇವೆ. ಐತಿಹಾಸಿಕ ಸೋಮನಾಥ ಮಂದಿರಕ್ಕೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಮಲ್ಲೇಶ್ವರದ ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಹೇಳಿದರು.

ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ರಾಜ್ಯ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon