ಸ್ವಾಮೀಜಿಗಳು ಒಬ್ಬರ ಪರ ಅಭಿಪ್ರಾಯ ವ್ಯಕ್ತಪಡಿಸುವ ವ್ಯಾಮೋಹ ಬಿಡಿ: ಹೆಚ್.ಡಿ.ಕೆ

WhatsApp
Telegram
Facebook
Twitter
LinkedIn

ಬೆಂಗಳೂರು: ರಾಜಕಾರಣಿಗಳು ರಾಜಕಾರಣ ಮಾಡಲಿ. ಆದರೆ ಸ್ವಾಮೀಜಿಗಳು ಯಾರೋ ಒಬ್ಬರ ಪರ ಅಭಿಪ್ರಾಯ ವ್ಯಕ್ತಪಡಿಸುವ ವ್ಯಾಮೋಹ ಬಿಡಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಎನ್.ಡಿ.ಎ ಸಮನ್ವಯ ಸಮಿತಿ ಸಭೆಯ ನಂತರ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಆಂತರಿಕ ಕಲಹದ ವಿಚಾರದಲ್ಲಿ ಸ್ವಾಮೀಜಿಗಳು ಮಧ್ಯ ಪ್ರವೇಶ ಮಾಡುವುದು ಅನಗತ್ಯ. ಅವರಿಗೆ ಇದರಲ್ಲಿ ಏನೂ ಕೆಲಸ ಇಲ್ಲ ಎಂದು ಅಭಿಪ್ರಾಯಪಟ್ಟರು.

ನಾನು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೆ. ಅಧಿಕಾರ ಹೋದಾಗ ಯಾವ ಮಠಾಧಿಪತಿಗಳ ನೆರವನ್ನು ನಾನು ಕೇಳಲಿಲ್ಲ. ರಾಜಕಾರಣಿಗಳ ಕೆಲಸವೇ ಬೇರೆ, ಸ್ವಾಮೀಜಿಗಳ ಕೆಲಸವೇ ಬೇರೆ. ಒಕ್ಕಲಿಗ ಸಮಾಜ ಅಷ್ಟೇ ಅಲ್ಲ, ಬೇರೆ ಯಾವುದೇ ಸಮಾಜದ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ. ಜಾತಿ ಧರ್ಮಗಳ ವಿಚಾರ ಹೇಳಿಕೊಂಡು ಧಾರ್ಮಿಕ ಕ್ಷೇತ್ರಗಳನ್ನು ದುರುಪಯೋಗಪಡಿಸಿಕೊಂಡು, ರಾಜಕಾರಣ ಮಾಡೋದು ಯಾರಿಗೂ ಶೋಭೆ ತರುವುದಿಲ್ಲ ಎಂದು ಎಂದು ಹೇಳಿದರು

ಸಮಾಜದಲ್ಲಿ ಜಾತಿ ಸಂಘರ್ಷಕ್ಕೆ ಅವಕಾಶ ಇರಬಾರದು. ಅದಕ್ಕೆ ಯಾರೂ ಕಾರಣ ಆಗಬಾರದು. ಸಮಾಜದಲ್ಲಿ ಶಾಂತಿ ನೆಮ್ಮದಿ ಮುಖ್ಯ. ಜಾತಿ ಮತ್ತು ಧರ್ಮ ಸಂಘರ್ಷ ಮಾಡಬಾರದು. ಅದು ರಾಜ್ಯಕ್ಕೆ ಒಳ್ಳೆಯದಲ್ಲ. ಕಾಂಗ್ರೆಸ್ ಪಕ್ಷದ ಕಲಹದಲ್ಲಿ ಜಾತಿ ಧರ್ಮಗಳನ್ನು ಎಳೆದು ತರೋದು ಬೇಕಾಗಿಲ್ಲ. ರಾಜ್ಯದಲ್ಲಿ ಈಗ ದೊಡ್ಡ ಮಟ್ಟದಲ್ಲಿ ಜಾತಿ ರಾಜಕಾರಣ ನಡೆಯುತ್ತಿದೆ. ಇದರಿಂದ ನಷ್ಟ ರಾಜಕಾರಣ ಮಾಡುವವರಿಗೆ ಆಗುವುದಿಲ್ಲ. ರಾಜ್ಯಕ್ಕೆ ದೊಡ್ಡ ನಷ್ಟ ಆಗುತ್ತದೆ. ರಾಜ್ಯದಲ್ಲಿ ಸಮಾಜಗಳ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ. ಇದರ ಅವಶ್ಯಕತೆ ಇಲ್ಲ. ಇದು ಕಾಂಗ್ರೆಸ್ ಪಕ್ಷಕ್ಕೆ ಆಗುವ ಮುಜುಗರ ಅಲ್ಲ. ಕರ್ನಾಟಕ ಜನತೆಗೆ ಆಗುವ ಮುಜುಗರ ಎಂದು ವಾಗ್ದಾಳಿ ನಡೆಸಿದರು.

ಈ ಸರ್ಕಾರಕ್ಕೆ ರಾಜ್ಯದ ಜನ 140 ಸ್ಥಾನ ನೀಡಿದ್ದಾರೆ. ಅಷ್ಟು ಬಹುಮತ ಕೊಟ್ಟರೂ ಜನರ ನಿರೀಕ್ಷೆ ಹುಸಿ ಮಾಡಿದ್ದಾರೆ. ಕಳೆದ ಎರಡೂವರೆ ವರ್ಷದಿಂದ ಇವರು ಕುರ್ಚಿಗಾಗಿ ಕಿತ್ತಾಟ ಮಾಡುತ್ತಿದ್ದಾರೆ. ರಾಜ್ಯದ ಬಗ್ಗೆ ಇವರಿಗೆ ಕಾಳಜಿ ಇಲ್ಲ. ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗಬೇಕು ಎನ್ನುವ ಪರಿಜ್ಞಾನ ಇವರಿಗೆ ಇಲ್ಲ. ನನ್ನ ಪ್ರಕಾರ ಈ ಸರ್ಕಾರದ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆಯೇ ಇಲ್ಲ ಎಂದು ಕಿಡಿಕಾರಿದರು.

2028ರ ಚುನಾವಣೆ ತುಂಬಾ ದೂರ ಇದೆ. ತೇಜಸ್ವಿ ಯಾದವ್ ಬಿಹಾರದಲ್ಲಿ ಪ್ರಮಾಣ ವಚನ ದಿನಾಂಕವನ್ನೇ ನಿಗದಿ ಮಾಡಿದ್ದರು. ಆದರೆ ಅಲ್ಲಿ ಏನು ಆಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಅನಗತ್ಯ ಜಾತಿ ಧರ್ಮವನ್ನು ಎಳೆದುತಂದು ಜನರನ್ನು ಪರಸ್ವರ ಎತ್ತಿಕಟ್ಟುವ ಕೆಲಸ ನಡೆಯುತ್ತಿದೆ. ಇದು ಆಗಬಾರದು. ಒಕ್ಕಲಿಗ, ಕುರುಬರ ಮತ್ತು ಇತರ ಸಮಾಜದ ಸ್ವಾಮೀಜಿಗಳ ಹೇಳಿಕೆಗಳು ಅವರ ವೈಯಕ್ತಿಕ ಅಭಿಪ್ರಾಯ. ಧರ್ಮ ಸಂಘರ್ಷ ಮಾಡಬಾರದು ಎಂದು ಹೇಳಿದರು.

ಎಲ್ಲಾ ರೀತಿಯಲ್ಲಿಯೂ ಕಾಂಗ್ರೆಸ್ ರಾಜ್ಯದಲ್ಲಿ ವಿಫಲವಾಗಿದೆ. ಜನರ ಪರವಾಗಿ ದನಿಯೆತ್ತಲಿಕ್ಕಾಗಿಯೇ ನಾವು ಇಲ್ಲಿ ಸಭೆ ಸೇರಿದ್ದೇವೆ. ಡಿಸೆಂಬರ್ 8ರಿಂದ ಬೆಳಗಾವಿ ಅಧಿವೇಶನ ನಡೆಯುತ್ತದೆ. ಎರಡು ಪಕ್ಷಗಳು ಪರಿಣಾಮಕಾರಿಯಾಗಿ ಸರ್ಕಾರದ ವಿರುದ್ಧ ಹೋರಾಟ ನಡೆಸಲಿವೆ. ಬೆಂಗಳೂರಿನಿಂದ ಶಾಸಕರು ಕಾಟಾಚಾರಕ್ಕೆ ಬರುತ್ತಾರೆ ಎನ್ನುವ ಅಭಿಪ್ರಾಯ ಬೇಡ. ಉತ್ತರ ಕರ್ನಾಟಕದ ಜನ ಕಷ್ಟದಲ್ಲಿದ್ದಾರೆ. ನೆರೆ ಬಂದು ಅನೇಕ ಜಿಲ್ಲೆಗಳ ಜನರು ಕಷ್ಟಕ್ಕೆ ಸಿಲುಕಿದ್ದರು. ಆಸ್ತಿ, ಮನೆಮಠ ಕಳೆದುಕೊಂಡ ಜನರ ನೆರವಿಗೆ ರಾಜ್ಯ ಸರ್ಕಾರ ಬಂದಿಲ್ಲ. ಕೇವಲ ಕೇಂದ್ರ ಸರ್ಕಾರವನ್ನು ದೂರುವ ಕೆಲಸ ಮಾಡುತ್ತಿದೆ. ತುಂಗಭದ್ರಾ ನೀರು ಬಳಕೆ ಮಾಡುವ ರೈತರಿಗೆ ಎರಡನೇ ಬೆಳೆಗೆ ನೀರು ಬಿಡುವುದಿಲ್ಲ ಎಂದು ಹೇಳುತ್ತಿದೆ. ಈ ವಿಷಯವನ್ನು ಎರಡು ಪಕ್ಷಗಳ ಶಾಸಕರು ಸದನದಲ್ಲಿ ಚರ್ಚೆ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಿದ್ಧರಾಮಯ್ಯ ಅಧಿಕಾರಕ್ಕೆ ಬಂದಾಗಲೆಲ್ಲ ಪೊಲೀಸರ ದರೋಡೆ:

ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆದರೆ ಕೆಲ ಪೊಲೀಸರೇ ದರೋಡೆ ಸೇರಿ ಅಪರಾಧ ಕೃತ್ಯಗಳಲ್ಲಿ ಭಾಗಿ ಆಗುತ್ತಾರೆ. ಹಿಂದೆ ಅವರು ಐದು ವರ್ಷ ಸಿಎಂ ಆಗಿದ್ದಾಗ ಮೈಸೂರಿನ ಬಿಳಿಕೆರೆಯಲ್ಲಿ ಬಸ್ಸಿನಲ್ಲಿ ಹಣವನ್ನು ದೋಚಲಾಗಿತ್ತು. ಆ ಪ್ರಕರಣದಲ್ಲಿಯೂ ಪೊಲೀಸ್ ಅಧಿಕಾರಿಯೊಬ್ಬ ಭಾಗಿಯಾಗಿದ್ದ. ಇತ್ತೀಚೆಗೆ ಎಟಿಎಂ ಹಣ ದರೋಡೆ ಮಾಡಿದ ಪ್ರಕರಣದಲ್ಲಿಯೂ ಪೊಲೀಸ್ ಒಬ್ಬ ಭಾಗಿ ಆಗಿದ್ದಾನೆ. ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಏನು ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅಲ್ಲಿ ಉಗ್ರರ ಕೈಗೆ  ಸ್ಮಾರ್ಟ್ ಫೋನ್ ಹೋಗುತ್ತಿದೆ. ಅದನ್ನು ಗೃಹ ಸಚಿವರು ಖುದ್ದು ಪರಿಶೀಲನೆ ಮಾಡಿದ್ದರು. ಇತ್ತೀಚೆಗೆ ಇನ್ನೊಬ್ಬ ಮಂತ್ರಿ ಜೈಲಿಗೆ ಭೇಟಿ ನೀಡಿದ್ದರು. ಅವರು ಏನು ಪರಿಶೀಲನೆ ಮಾಡಿದರೋ ಗೊತ್ತಿಲ್ಲ. ಆದರೆ ಅವರು ಭೇಟಿ ನೀಡಿದ ನಂತರ ಜೈಲಿನಲ್ಲಿ ಡಿಸ್ಟಿಲರಿಯೇ ನಡೆಯುತ್ತಿರುವುದು ಪತ್ತೆ ಆಯಿತು. ಸ್ವತಃ ಅವರೇ ಜೈಲ್ ಡಿಸ್ಟಿಲರಿ ಡ್ರಿಂಕ್ಸ್ ಗುಣಮಟ್ಟ ಪರಿಶೀಲನೆ ಮಾಡೋಕೆ ಹೋದಂತಿದೆ ಎಂದು ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon