ಬೆಂಗಳೂರು: ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರ್ಕಾರ ಟೋಪಿ ಸರಕಾರ, ಇವರು ಇಷ್ಟು ದಿನ ಕರ್ನಾಟಕದ ಕನ್ನಡಿಗರಿಗೆ ಟೋಪಿ ಹಾಕಿ, ಇವತ್ತು ಮಿನಿ ಬಾಂಗ್ಲಾದೇಶವನ್ನು ನಿರ್ಮಿಸುತ್ತಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಕ್ಷೇಪಿಸಿದರು.
ಒತ್ತುವರಿ ಹಿನ್ನೆಲೆಯಲ್ಲಿ ಅಕ್ರಮವಾಗಿ ವಾಸವಿದ್ದವರನ್ನು ತೆರವುಗೊಳಿಸಿದ ಯಲಹಂಕದ ಕೋಗಿಲು ಬಡಾವಣೆಗೆ ಬುಧವಾರ ಭೇಟಿ ನೀಡಿದ ವೇಳೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಈ ಸರ್ಕಾರ ಬಂದ ಬಳಿಕ ಕರ್ನಾಟಕವು ಮಿನಿ ಬಾಂಗ್ಲಾದೇಶೀಯರ ತಾಣ ಆಗುತ್ತಿದೆ. ಗೂಗಲ್ ಮ್ಯಾಪ್‍ನಡಿ ಇಲ್ಲಿ ಒಂದು ವರ್ಷದ ಹಿಂದೆ ಮನೆಗಳಿರಲಿಲ್ಲ. ಈಗ ಮನೆಗಳಿವೆ. ಇವರೆಲ್ಲ ಬಂದು ಆರು ತಿಂಗಳಾಗಿಲ್ಲ. ಇವರಿಗೆಲ್ಲ ವಿದ್ಯುತ್ ಸಂಪರ್ಕ ಕೊಟ್ಟದ್ದು ಹೇಗೆ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಸುಮಾರು 4 ಲಕ್ಷ ಜನರು ಅನಧಿಕೃತ ಮನೆ ಎಂಬ ಕಾರಣಕ್ಕೆ ವಿದ್ಯುತ್ ಸಂಪರ್ಕವಿಲ್ಲದೇ ಬದುಕುತ್ತಿದ್ದಾರೆ. ನಮ್ಮ ರಾಜ್ಯದ ತೆರಿಗೆದಾರರು ವಿದ್ಯುತ್ ಸಂಪರ್ಕವಿಲ್ಲದೇ ಜೀವನ ಸಾಗಿಸುತ್ತಿದ್ದರೆ, ಇಲ್ಲಿ ದುಬಾರಿ ಮೊತ್ತದ ಕೇಬಲ್ ಸಂಪರ್ಕ ಮಾಡಿ ವಿದ್ಯುತ್ ಬಳಸುತ್ತಿದ್ದಾರೆ. ಇವರೆಲ್ಲ ಆಂಧ್ರದ ಪೆನುಗೊಂಡದಿಂದ ಬಂದವರೆಂದು ಹೇಳುತ್ತಾರೆ. 28 ವರ್ಷದವರು ಎನ್ನುತ್ತಾರೆ. 25-26 ವರ್ಷದಿಂದ ವಾಸವಿದ್ದರೆ 2 ವರ್ಷಕ್ಕೆ ಹೇಗೆ ನಡೆದು ಬಂದರು ಎಂದು ಕೇಳಿದರು.
ಇದು ಸುಮಾರು 600 ಕೋಟಿ ಬೆಲೆಯ ಜಮೀನು. ಇದನ್ನು ಸರ್ಕಾರ ಯಾವ ಕಾನೂನಿನಡಿ ಕೊಡಲಿದೆ ಎಂದು ಗೊತ್ತಿಲ್ಲ. ನೆರೆಯಿಂದ ರಾಜ್ಯದಲ್ಲಿ 13 ಸಾವಿರ ಮನೆಗಳು ಬಿದ್ದಿವೆ. ಆದರೆ, ಕರ್ನಾಟಕದ ರೈತರಾದ ಅವರಿಗೆ ಇನ್ನೂ ಸೂರು ಕೊಟ್ಟಿಲ್ಲ. 2400 ಶಾಲೆಗಳ ಶೀಟ್‍ಗಳು ಹಾರಿ ಹೋಗಿವೆ. ಅವರಿಗೆ ವ್ಯವಸ್ಥೆ ಮಾಡದೇ ಮರದ ಕೆಳಗೆ ಪಾಠ ಮಾಡುವ ಸ್ಥಿತಿ ಇದೆ. ಇವರಿಗೆ ಪಟಾಪಟ್ ಎಂದು ಎರಡೇ ದಿನಗಳಲ್ಲಿ ಬಹುಮಹಡಿ ಮನೆಗಳಲ್ಲಿ ಜಾಗ ಕೊಡುತ್ತಿದ್ದಾರೆ ಎಂದು ಟೀಕಿಸಿದರು.














