ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯಂದೇ ಅರಣ್ಯ ಇಲಾಖೆಯ ಅಧಿಕಾರಿಗಳು ಆದಿವಾಸಿಗಳ ಮೇಲೆ ಎನ್‌ಕೌಂಟರ್ ನಡೆಸಿ ಕೊಲೆ ಮಾಡಿದ್ದಾರೆ ಎಂದು ಕರ್ನಾಟಕ ಆದಿವಾಸಿ ಬುಡಕಟ್ಟು ಸಂರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಜಗ್ಗು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಂಕೆ ಮಾಂಸ ಕೊಂಡೊಯ್ಯುತ್ತಿದ್ದರು ಮತ್ತು ತಮ್ಮ ಮೇಲೆ ದಾಳಿ ಮಾಡಲು ಬಂದಿದ್ದರು ಎಂಬ ಸುಳ್ಳು ನೆಪ ಹೇಳಿ ಆದಿವಾಸಿಗಳನ್ನು ಎನ್‌ಕೌಂಟರ್ ಮಾಡಲಾಗಿದೆ ಎಂದು ಆರೋಪಿಸಿದರು.
ಈ ದೇಶದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನವಿದೆ. ಎಷ್ಟೇ ದೊಡ್ಡ ಕೊಲೆಪಾತಕಿಯಾಗಿದ್ದರೂ ಅವರನ್ನು ಬಂಧಿಸಿ, ಕಾಲುಗಳಿಗೆ ಶೂಟ್ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಿ ಕಾನೂನಿನ ಪ್ರಕಾರ ಶಿಕ್ಷೆ ನೀಡಲು ಅವಕಾಶವಿದೆ. ಆದರೆ, ಆದಿವಾಸಿಗಳ ಮೇಲೆ ಈ ರೀತಿ ನೇರ ಎನ್‌ಕೌಂಟರ್ ನಡೆಸಿರುವುದು ಅರಣ್ಯ ಇಲಾಖೆಯ ದೌರ್ಜನ್ಯ ಮತ್ತು ಸರ್ಕಾರದ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆಧಾರರಹಿತ ಆರೋಪಗಳನ್ನು ಮಾಡುವ ಅಧಿಕಾರಿಗಳೇ ಹಿನ್ನೆಲೆಯಲ್ಲಿ ನಿಂತು ಸೃಷ್ಟಿಸುತ್ತಿರುವ ದೋಖಾ ಇದಾಗಿದೆ. ಅರಣ್ಯದ ಸುತ್ತಮುತ್ತಲಿನ ಅಧಿಕಾರಿಗಳೇ ಆದಿವಾಸಿಗಳನ್ನು ಹೆದರಿಸಿ, ಕಾಡಿನಿಂದ ಮಾಂಸ ತಂದುಕೊಡುವಂತೆ ಒತ್ತಡ ಹೇರುತ್ತಾರೆ. ಅಧಿಕಾರಿಗಳು ಮಾಂಸ ಕೇಳುತ್ತಾರೆಂದು ಹೋದಾಗ ಬೇಟೆಗೆ ಅವಕಾಶ ಮಾಡಿಕೊಟ್ಟಂತೆ ನಟಿಸಿ, ನಂತರ ಅವರನ್ನೇ ಹಿಡಿದು ಎನ್‌ಕೌಂಟರ್ ಮಾಡಿ ಸಾಯಿಸುತ್ತಾರೆ ಎಂದು ಗುರುತರ ಆರೋಪ ಮಾಡಿದರು.
ಎನ್‌ಕೌಂಟರ್ ನಡೆಸಿದ ಅರಣ್ಯಾಧಿಕಾರಿಗಳನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಿ, ಬಂಧಿಸಬೇಕು. ಪರಿಶಿಷ್ಟ ಜಾತಿ/ಪಂಗಡಗಳ ಕಾಯ್ದೆಯಡಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ ಶಿಕ್ಷೆ ನೀಡಬೇಕು. ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಆದಿವಾಸಿಗಳ ಕುಟುಂಬಕ್ಕೆ ತಲಾ 1 ಕೋಟಿ ರೂಪಾಯಿ ಪರಿಹಾರ ಧನವನ್ನು ಸರ್ಕಾರ ತಕ್ಷಣವೇ ಘೋಷಿಸಬೇಕು ಎನ್ನುವ ಹಕ್ಕೊತ್ತಾಯಗಳನ್ನು ಮಂಡಿಸಿದರು.
ಆದಿವಾಸಿಗಳು ಹುಟ್ಟಿನಿಂದಲೇ ಕಾಡಿನಲ್ಲಿ ತಮ್ಮ ಜೀವನ ರೂಪಿಸಿಕೊಂಡು ಬಂದವರಾಗಿದ್ದಾರೆ. ಆದ್ದರಿಂದ ಆದಿವಾಸಿಗಳನ್ನು ಕೇವಲ ಬಾಯಿ ಮಾತಿನಲ್ಲಿ ಮೂಲನಿವಾಸಿಗಳು ಎನ್ನದೇ, ಅವರ ಹಕ್ಕುಗಳನ್ನು ಕಾನೂನಾತ್ಮಕವಾಗಿ ರಕ್ಷಿಸಬೇಕು. ಆದಿವಾಸಿಗಳು ನೆಮ್ಮದಿಯಿಂದ ಬದುಕಲು ಸರ್ಕಾರ ಅವಕಾಶ ಮಾಡಿಕೊಡಬೇಕು ಎಂದು ಕರ್ನಾಟಕ ರಾಜ್ಯ ಅಲೆಮಾರಿ ಆದಿವಾಸಿ ಬುಡಕಟ್ಟು ಸಂರಕ್ಷಣಾ ಸಮಿತಿಯ ಪರವಾಗಿ ಸರ್ಕಾರಕ್ಕೆ ಮನವಿ ಮಾಡುವುದಾಗಿ ಜಗ್ಗು ಹೇಳಿದರು.














