ಬೆಂಗಳೂರು: ತಂತ್ರಜ್ಞಾನ ಬೆಳೆದಂತೆ ಆಟೋಮೊಬೈಲ್ ಕ್ಷೇತ್ರದಲ್ಲಿ ಬದಲಾವಣೆಗಳು ವೇಗವಾಗಿ ಬದಲಾಗುತ್ತಿದ್ದು, ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ದ್ವಿಚಕ್ರ ವಾಹನ ಮೆಕ್ಯಾನಿಕ್ಗಳನ್ನು ಸಜ್ಜುಗೊಳಿಸಲು ಕರ್ನಾಟಕ ಟೂ ವೀಲರ್ ವರ್ಕ್ಶಾಪ್ ಓನರ್ಸ್ ಅಂಡ್ ಟೆಕ್ನಿಷಿಯನ್ಸ್ ಅಸೋಸಿಯೇಷನ್ ಅಖಾಡಕ್ಕೆ ಇಳಿದಿದೆ.
ರಾಜ್ಯಾದ್ಯಂತ ಬಿಎಸ್-6 ಹಾಗೂ ಎಲೆಕ್ಟ್ರಿಕ್ ವಾಹನಗಳ ಉಚಿತ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸುತ್ತಿರುವ ಸಂಸ್ಥೆ, ಇತ್ತೀಚೆಗೆ ಬೆಂಗಳೂರಿನ ಇಟ್ಟಮಡು ಭಾಗದಲ್ಲಿ 60ನೇ ತರಬೇತಿ ಕಾರ್ಯಾಗಾರ ಯಶಸ್ವಿಯಾಗಿ ನಡೆಸಿದೆ. ಈ ಕಾರ್ಯಾಗಾರದಲ್ಲಿ ಸುಮಾರು 200ಕ್ಕೂ ಹೆಚ್ಚು ಮೆಕ್ಯಾನಿಕ್ಗಳು ಭಾಗವಹಿಸಿ ಹೊಸ ತಂತ್ರಜ್ಞಾನದ ಕುರಿತು ಮಾಹಿತಿ ಪಡೆದುಕೊಂಡಿದ್ದು ವಿಶೇಷವಾಗಿದೆ.
ಕಾರ್ಯಾಗಾರದ ಕುರಿತು ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಭಾಸ್ಕರ್ ಜಿ. ನಾಯ್ಡು ಮಾತನಾಡಿ, 2020ರಿಂದ ಭಾರತದಲ್ಲಿ ಬಿಎಸ್-6 ವಾಹನಗಳು ರಸ್ತೆಗೆ ಇಳಿದಿವೆ. ಆದರೆ, ಯಾವುದೇ ವಾಹನ ತಯಾರಿಕಾ ಕಂಪನಿಗಳು ಅಥವಾ ಸರ್ಕಾರಿ ಸಂಸ್ಥೆಗಳು ಮೆಕ್ಯಾನಿಕ್ಗಳಿಗೆ ಸೂಕ್ತ ತರಬೇತಿ ನೀಡುತ್ತಿಲ್ಲ. ಆದ್ದರಿಂದ ನಮ್ಮ ಅಸೋಸಿಯೇಷನ್ ವತಿಯಿಂದ ಅನುಭವಿ ನಾಲ್ಕು ಜನ ಮೆಕ್ಯಾನಿಕ್ಗಳನ್ನೇ ಮಾಸ್ಟರ್ ಟ್ರೈನರ್ ಗಳಾಗಿ ಸಿದ್ಧಪಡಿಸಿ, ರಾಜ್ಯದ ಪ್ರತಿಯೊಂದು ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲೂ ಉಚಿತವಾಗಿ ತರಬೇತಿ ನೀಡುತ್ತಿದ್ದೇವೆ. ಸದ್ಯ ಸರ್ವೋ ಹಾಗೂ ಇಂಡಿಯನ್ ಆಯಿಲ್ ಕಂಪನಿಗಳು ನಮ್ಮ ತರಬೇತಿ ಕಾರ್ಯಕ್ರಮಕ್ಕೆ ಬೆಂಬಲ ನೀಡುತ್ತಿವೆ ಎಂದು ತಿಳಿಸಿದ್ದಾರೆ.
ಬಿಎಸ್-6 ತರಬೇತುದಾರ ಅಮರನಾಥ್ ರೆಡ್ಡಿ ಮಾತನಾಡಿ, ಬಿಎಸ್-6 ವಾಹನಗಳಲ್ಲಿ ಫ್ಯೂಯಲ್ ಇಂಜೆಕ್ಷನ್ ಸಿಸ್ಟಮ್, ಇಸಿಎಂ ಹಾಗೂ ಸೆನ್ಸಾರ್ಗಳಂತಹ ಸಂಕೀರ್ಣ ತಂತ್ರಜ್ಞಾನಗಳಾಗಿವೆ. ಇವುಗಳ ರಿಪೇರಿ ಹಾಗೂ ಕುರಿತು ನಮ್ಮ ತರಬೇತುದಾರರಾದ ಮೈಸೂರು ನಗರದ ಮಂಜುನಾಥ್, ಜಯನಗರದ ಶಾಕಿರ್ ಹುಸೇನ್, ರಾಜಾಜಿನಗರದ ನವೀನ್ ಹಾಗೂ ನಾನು ಉಚಿತವಾಗಿ ಮಾಹಿತಿ ನೀಡುತ್ತಿದ್ದೇವೆ. ಕರ್ನಾಟಕ ಮಾತ್ರವಲ್ಲದೆ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಹಾಗೂ ಮಹಾರಾಷ್ಟ್ರದಲ್ಲೂ ಪ್ರಾದೇಶಿಕ ಭಾಷೆಗಳಲ್ಲಿ ಉಚಿತವಾಗಿ ತರಬೇತಿ ಕೊಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಮತ್ತೊಬ್ಬ ತರಬೇತುದಾರ ನವೀನ್ ಕುಮಾರ್ ಮಾತನಾಡಿ, ಕಂಪನಿಗಳು ಕೇವಲ ಶೇ. 10ರಷ್ಟು ವಾಹನಗಳ ಸೇವೆಯನ್ನು ಮಾತ್ರ ನಿರ್ವಹಿಸಬಲ್ಲವು. ಇನ್ನುಳಿದ ಶೇ. 90ರಷ್ಟು ವಾಹನಗಳು ನಮ್ಮಂತಹ ಸ್ಥಳೀಯ ಮಂದಿ ಮೆಕ್ಯಾನಿಕ್ ಗಳು ನಿರ್ವಹಿಸಬೇಕು. ನಾಲ್ಕು ಚಕ್ರದ ವಾಹನದ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳದ ಅನೇಕ ಗ್ಯಾರೇಜ್ಗಳು ಮುಚ್ಚಿಹೋದವು. ಈ ಪರಿಸ್ಥಿತಿ ದ್ವಿಚಕ್ರ ವಾಹನ ಮೆಕ್ಯಾನಿಕ್ಗಳಿಗೆ ಬರಬಾರದು ಎನ್ನುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದಿದ್ದಾರೆ.
ತರಬೇತುದಾರ, ಮೆಕ್ಯಾನಿಕ್ ಮಂಜುನಾಥ್ ಮಾತನಾಡಿ, ಬಿಎಸ್-6 ವಾಹನಗಳ ಫ್ಯೂಯಲ್ ಪ್ರೆಶರ್, ಇಂಜೆಕ್ಟರ್ ಕ್ಲೀನಿಂಗ್ ಹಾಗೂ ಪಲ್ಸಿಂಗ್ ಪರಿಶೀಲಿಸುವ ಸೆವೆನ್ ಇನ್ ಒನ್ ಮಲ್ಟಿ-ಟೂಲ್ ಉಪಕರಣವನ್ನು ಅಸೋಸಿಯೇಶನ್ ವತಿಯಿಂದ ತಯಾರಿಸಲಾಗಿದೆ. ಮಾರುಕಟ್ಟೆಯಲ್ಲಿ ಕಂಪನಿಗಳು 60 ಸಾವಿರ ರೂ.ನಿಂದ 1 ಲಕ್ಷ ರೂ.ವರೆಗೆ ಮಾರಾಟ ಮಾಡುವ ಈ ಡಯಾಗ್ನೋಸ್ಟಿಕ್ ಟೂಲ್ಗಳನ್ನು ಮೆಕ್ಯಾನಿಕ್ಗಳ ಹಿತದೃಷ್ಟಿಯಿಂದ ಉತ್ಪಾದನಾ ವೆಚ್ಚವಾದ ಕೇವಲ 2 ಸಾವಿರ ರೂ ಗೆ ಲಭ್ಯವಾಗುವಂತೆ ತಯಾರಿಸಲಾಗಿದೆ. ತರಬೇತಿ ಪಡೆಯುವ ಪ್ರತಿಯೊಬ್ಬ ಮೆಕ್ಯಾನಿಕ್ಗೂ ವಾಟ್ಸಾಪ್ ಗ್ರೂಪ್ಗಳ ಮೂಲಕ ಕೂಡ ನಿರಂತರವಾಗಿ ರಿಪೇರಿಗೆ ಸಂಬಂಧಿತ ತಾಂತ್ರಿಕ ನೆರವನ್ನು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.














