ಬೆಂಗಳೂರು: ಆಲ್ ಇಂಡಿಯಾ ಬ್ಯಾಂಕ್ ಪೆನ್ಷನರ್ಸ್ ಅಂಡ್ ರಿಟೈರೀಸ್ ಕಾನ್ಫೆಡರೇಶನ್ ಆಶ್ರಯದಲ್ಲಿ ಇಂಡಿಯನ್ ಓವರ್ಸೀಸ್ ಬ್ಯಾಂಕ್ ನಿವೃತ್ತ ಆಫೀಸರ್ಸ್ ಹಾಗೂ ನೌಕರರ ಸಂಘ – ಅರೈಸ್ ನ ಸಂಸ್ಥಾಪನಾ ದಿನಾಚರಣೆಯನ್ನು ನಗರದ ಖಾಸಗಿ ಹೋಟೆಲ್ ನಲ್ಲಿ ಆಚರಿಸಲಾಯಿತು.
2006ರ ಆಗಸ್ಟ್ 20 ರಂದು ಸ್ಥಾಪನೆಯಾದ ಈ ಸಂಸ್ಥೆಯು ಇಂಡಿಯನ್ ಓವರ್ಸೀಸ್ ಬ್ಯಾಂಕಿನ ನಿವೃತ್ತ ನೌಕರರ ವಿವಿಧ ಬೇಡಿಕೆಗಳು ಹಾಗೂ ಸಮಸ್ಯೆಗಳ ಪರಿಹಾರಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದ್ದು, ಇದರೊಂದಿಗೆ ಸಂಸ್ಥಾಪನಾ ದಿನದ ಪ್ರಯುಕ್ತ ವೃಕ್ಷಗಳ ಸಂರಕ್ಷಣೆ, ಬಡ ಮಕ್ಕಳಿಗೆ ಶಿಕ್ಷಣದ ನೆರವು ಹಾಗೂ ವಿಕಲಾಂಗರ ಬೆಂಬಲಕ್ಕಾಗಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಘೋಷಣೆ ಮಾಡಿತು.
ಕಾರ್ಯಕ್ರಮದ ನಂತರ ಮಾಧ್ಯಮಗಳ ಜೊತೆ ಆಲ್ ಇಂಡಿಯಾ ಬ್ಯಾಂಕ್ ಪೆನ್ಷನರ್ಸ್ ಅಂಡ್ ರಿಟೈರೀಸ್ ಕಾನ್ಫೆಡರೇಶನ್ ಅಧ್ಯಕ್ಷ ಕೆ. ವಿ. ಆಚಾರ್ಯ ಮಾತನಾಡಿ, ಕೇಂದ್ರ ಸರ್ಕಾರಿ ನೌಕರರು, ರಿಸರ್ವ್ ಬ್ಯಾಂಕ್, ನಬಾರ್ಡ್, ಐಡಿಬಿಐ ನೌಕರರಿಗೆ ನೀಡಲಾಗುತ್ತಿರುವಂತೆ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್ ನಿವೃತ್ತ ನೌಕರರಿಗೆ ಮೂಲ ಪೆನ್ಷನ್ ಪರಿಷ್ಕರಣೆಯಾಗಬೇಕು. ವೇತನ ಆಯೋಗ ಅಥವಾ ಹೊಸ ಒಪ್ಪಂದಗಳ ಮೂಲಕ ಸೇವೆಯಲ್ಲಿರುವ ನೌಕರರ ವೇತನ ಹೆಚ್ಚಳವಾದಾಗ ಅದರ ಸೌಲಭ್ಯವನ್ನು ನಿವೃತ್ತರಿಗೂ ನೀಡಬೇಕು. ಈ ಅಂಶಗಳು ಬ್ಯಾಂಕ್ ಪೆನ್ಷನ್ ನಿಯಮಾವಳಿ ಗಳಲ್ಲಿ ಸ್ಪಷ್ಟವಾಗಿದ್ದರೂ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಹಾಗೂ ಸರ್ಕಾರ ಇದನ್ನು ಜಾರಿಗೆ ತಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸೀಲಿಂಗ್‌ಗೆ ಒಳಪಟ್ಟು ನೀಡಲಾಗುತ್ತಿದ್ದ ಕುಟುಂಬ ಪೆನ್ಷನ್ ಅನ್ನು ಕೇಂದ್ರ ಸರ್ಕಾರದ ಮಾದರಿಯಲ್ಲಿ ಹೆಚ್ಚಿಸಲು ನಿರಂತರ ಕಾನೂನು ಹೋರಾಟ ಮಾಡಲಾಗುತ್ತಿದೆ. ನಿವೃತ್ತ ನೌಕರರ ಪೆನ್ಷನ್ ಪರಿಷ್ಕರಣೆ ಕುರಿತಾದ ಪ್ರಮುಖ ಪ್ರಕರಣ ಕಳೆದ ಕೆಲ ವರ್ಷಗಳಿಂದ ಸುಪ್ರೀಂ ಕೋರ್ಟಿನಲ್ಲಿದ್ದು, ಪ್ರಕರಣದ ಅಂತಿಮ ವಿಚಾರಣೆ ನಡೆಯಬೇಕಿದೆ. ನ್ಯಾಯಾಧೀಶರ ಇತರ ತುರ್ತು ಸೇವೆಯ ಕಾರಣದಿಂದಾಗಿ ವಿಚಾರಣೆಯನ್ನು ಸೆಪ್ಟೆಂಬರ್ ತಿಂಗಳಿಗೆ ಮುಂದೂಡಲಾಗಿದೆ. ಸುಪ್ರೀಂ ಕೋರ್ಟ್‌ನಿಂದ ನಿವೃತ್ತರ ಪರವಾಗಿ ಸಕಾರಾತ್ಮಕ ತೀರ್ಪು ಬರುವ ಸಂಪೂರ್ಣ ವಿಶ್ವಾಸವಿದೆ ಎಂದು ತಿಳಿಸಿದರು.
ಅರೈಸ್ ಸಂಘದ ಸಂಸ್ಥಾಪನಾಧ್ಯಕ್ಷ ಕೆ.ಎಸ್ ರಂಗರಾಜನ್ ಮಾತನಾಡಿ, ಇಂದಿನ ಆರ್ಥಿಕ ಕ್ರಾಂತಿಗೆ ಬ್ಯಾಂಕ್ ನೌಕರರು ಹಾಗೂ ಅಧಿಕಾರಿಗಳ ಶ್ರಮವೇ ಪ್ರಮುಖ ಕಾರಣವಾಗಿದೆ. ಸರ್ಕಾರವು ಇದನ್ನು ಪರಿಗಣಿಸಿ, ನಿವೃತ್ತರಿಗೆ ನೀಡಬೇಕಾದ ನ್ಯಾಯಯುತ ಪೆನ್ಷನ್ ಹಕ್ಕುಗಳನ್ನು ತಕ್ಷಣವೇ ಒದಗಿಸಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಾದ ಎಸ್. ಆರ್ ಶ್ರೀಧರ, ಕೆ.ಎಸ್.ಎನ್ ಮೂರ್ತಿ, ಎಂ.ಆರ್ ಗೋಪಿನಾಥ ರಾವ್, ಎ.ಜಿ ಸತ್ಯನಾರಾಯಣ, ಎಸ್ ಅಶೋಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.














