ಖಾನಾಪುರ: ತಾಲೂಕಿನ ಹಲಕರ್ಣಿ ಗ್ರಾಮದಲ್ಲಿನ ಕಸ ಸಂಗ್ರಹದ ಸಮಸ್ಯೆಗೆ ಕೊನೆಗೂ ಮುಕ್ತಿ ದೊರೆಯುವ ಲಕ್ಷಣ ಕಾಣಿಸುತ್ತಿವೆ. ಈ ಕುರಿತು ಪ್ರಜಾ ನೆರಳು ದಿನ ಪತ್ರಿಕೆಯು ದಿ.21-08-2026 ರಂದು ’ರೇಷ್ಮಾ ಮೇಡಂ.. ಹಲಕರ್ಣಿ ಗ್ರಾಮ ಸ್ವಚ್ಛಗೊಳಿಸಿ.. ಪ್ಲೀಸ್’ ಎಂಬ ಶೀರ್ಷಿಕೆಯಡಿ ಸಮಗ್ರ ವರದಿಯನ್ನು ಪ್ರಕಟಿಸಿತ್ತು.
ಸದ್ಯ ಈ ವರದಿಯಿಂದ ಎಚ್ಚೆತ್ತುಕೊಂಡಿರುವ ಜಿಪಂ, ತಾಪಂ ಹಾಗೂ ಗ್ರಾಪಂ ಅಧಿಕಾರಿಗಳು ಐದಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ತ್ಯಾಜ್ಯ ಸಂಗ್ರಹಣೆ ಸ್ಥಳದ ಸಮಸ್ಯೆಗೆ ಮುಕ್ತಿ ಹಾಡಲು ಮುಂದಾಗಿದ್ದಾರೆ. ಪ್ರಜಾ ನೆರಳು ದಿನಪತ್ರಿಕೆಯ ಸದರಿ ವರದಿಯನ್ನು ಗಮನಿಸಿದ ನಂತರ ತಕ್ಷಣ ಕಾರ್ಯಪ್ರವೃತ್ತರಾಗಿ ಸಮಸ್ಯೆ ಪರಿಹಾರಕ್ಕೆ ಸೂಚನೆ ನೀಡಿದ ಜಿಪಂ ಸಿಇಒ ರಾಹುಲ್ ಶಿಂದೆ ಅವರ ಕಾರ್ಯ ಶ್ಲಾಘನೀಯವಾಗಿದೆ.
ಸಮಸ್ಯೆಗಳನ್ನು ಪರಿಹರಿಸಲು ಯಾವುದೇ ಮುಲಾಜಿಲ್ಲದೆ ಮುಂದಾಗುವ ರಾಹುಲ್ ಅವರ ಕಾರ್ಯವೈಖರಿಗೆ ಹಲಕರ್ಣಿ ಗ್ರಾಮದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸುಮಾರು ವರ್ಷಗಳ ಸಮಸ್ಯೆಯನ್ನು ಪರಿಹರಿಸಿದ ಶಿಂದೆ ಅವರ ಕೆಲಸಕ್ಕೆ ನಾಗರಿಕರು ಸಂತಸಗೊಂಡಿದ್ದಾರೆ.
ಖಾನಾಪುರ ಇದು ಬೆಳಗಾವಿಗೆ ಅತ್ಯಂತ ಹತ್ತಿರದ ತಾಲೂಕು ಆಗಿದೆ. ಈ ತಾಲೂಕಿಗೆ ಮಾನ್ಯ ಜಿಪಂ ಸಿಇಒ ಸಾಹೇಬರು ಆಗಾಗ ಭೇಟಿ ನೀಡಿ ಇದೇ ರೀತಿ ಸಮಸ್ಯೆಗಳನ್ನು ಪರಿಹರಿಸಲಿ ಎಂದು ಹಲಕರ್ಣಿ ಗ್ರಾಮದ ಹಿರಿಯರು, ನಾಗರಿಕರು ಮನವಿ ಮಾಡಿಕೊಂಡಿದ್ದಾರೆ.
ಒಂದು ಬಾರಿ ಹಲಕರ್ಣಿ ಗ್ರಾಮದ ಕಸ ಸಂಗ್ರಹಣೆ ಜಾಗದ ಸಮಸ್ಯೆ ಪರಿಹಾರವಾದರೆ ಇಡೀ ಗ್ರಾಮ ಕಸ ಮತ್ತು ದುರ್ಗಂಧದಿಂದ ಮುಕ್ತಗೊಂಡು ಸ್ವಚ್ಛ ಹಾಗೂ ಸುಂದರ ಗ್ರಾಮವಾಗಲಿದೆ. ಗ್ರಾಮ ಸ್ವಚ್ಛವಾದರೆ ಅದರ ಕ್ರೆಡಿಟ್ ಜಿಪಂಗೆ ಸಿಗಲಿದೆ. ಹಲಕರ್ಣಿ ಗ್ರಾಮ ಪಂಚಾಯಿತಿಗೆ ದಕ್ಷ ಅಧಿಕಾರಿಗಳನ್ನು ನೇಮಿಸಬೇಕೆಂದು ಗ್ರಾಮಸ್ಥರ ಒತ್ತಾಸೆಯಾಗಿದೆ.














