ಬೆಂಗಳೂರು: ದುಡ್ಡು ಹೊಡೆಯುವ ಸುರಂಗ ರಸ್ತೆ ಬೇಡ. ಇದರಿಂದ ಸರ್ಕಾರ ಎಡವುವುದು ಬೇಡ. ಬದಲಾಗಿ ಜನೋಪಯುಕ್ತವೆನಿಸಿದ ಮೆಟ್ರೋ ಯೋಜನೆಯನ್ನು ವಿಸ್ತರಿಸಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.
ಮೇಲುಸೇತುವೆಗಳನ್ನು ನಿರ್ಮಿಸಿ, ಸ್ಯಾಂಕಿ ಕೆರೆಯ ನಾಶಕ್ಕೆ ಮುಂದಾಗಿರುವುದುರ ವಿರುದ್ದ ಶನಿವಾರ ಸಹಿ ಸಂಗ್ರಹಿಸಿ, ಸರ್ಕಾರದ ಅಧಿಕಾರಿಗಳೊಂದಿಗೆ ಪರಿಶೀಲನೆಯನ್ನು ಕೈಗೊಂಡು ಕೆರೆಯ ಮುಖ್ಯದ್ವಾರದ ಬಳಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ಬೆಂಗಳೂರಿನಲ್ಲಿ ಮೆಟ್ರೋ ಯೋಜನೆ ಸಾಫಲ್ಯಗೊಂಡಿದೆ. ಸುಮಾರು 60 ಲಕ್ಷಕ್ಕೂ ಹೆಚ್ಚು ಜನರು ಇದರಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಸುರಂಗ ರಸ್ತೆಯಿಂದ ಪರಿಸರವೂ ಹಾಳಾಗುತ್ತದೆ. ಸದ್ಯ ಜನರು ತೆರಿಗೆ ಭಾರದ ನೋವಿನ ಜೊತೆ ಬದುಕುತ್ತಿದ್ದಾರೆ. ಚಿತ್ರಹಿಂಸೆ ಅನುಭವಿಸುತ್ತಿದ್ದಾರೆ. ಕಸ, ನೀರು ಸೇರಿ ಎಲ್ಲ ತೆರಿಗೆಗಳನ್ನು ಹೆಚ್ಚಿಸಲಾಗಿದೆ ಎಂದು ಆಕ್ಷೇಪಿಸಿದರು.
ಸಾವಿರಾರು ಕೋಟಿ ವೆಚ್ಚದಿಂದ ಬೆಂಗಳೂರಿನ ಸಂಚಾರ ಸುಗಮ ಆಗುವುದಿಲ್ಲ. ಸಮರ್ಪಕ ಯೋಜನೆ ಮಾಡಲಾಗಿಲ್ಲ; ಸುಮ್ಮನೆ ಟೆಂಡರ್ ಕರೆದು ದುಡ್ಡು ಹೊಡೆಯುವ ಸ್ಕೀಂ ಇದಾಗಿದ್ದು, ಕಾಂಗ್ರೆಸ್ ಸಚಿವರು ಸುಳ್ಳುಗಳನ್ನು ಹಬ್ಬಿಸುತ್ತಿದ್ದು, ಬಿಜೆಪಿ ಅಭಿವೃದ್ಧಿ ವಿರೋಧಿಯಲ್ಲ ಎಂದು ಸ್ಪಷ್ಟಪಡಿಸಿದರು.















