ಬೆಂಗಳೂರು: ನಗರದ ಬ್ಯಾಡರಹಳ್ಳಿ ವ್ಯಾಪ್ತಿಯ ಖಾಸಗಿ ಡಯಾಗ್ನೋಸ್ಟಿಕ್ ಲ್ಯಾಬ್‌ವೊಂದರಲ್ಲಿ ತಪಾಸಣೆಗೆ ಬಂದಿದ್ದ ಮಹಿಳೆಗೆ ಕಿರುಕುಳ ನೀಡಿದ ಬಳಿಕ ಜೀವ ಬೆದರಿಕೆ ಹಾಕಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಪ್ರಕಾಶ್ ಡಯಾಗ್ನೋಸ್ಟಿಕ್ ಲ್ಯಾಬೋರೇಟರಿ ಮ್ಯಾನೇಜರ್ ಪ್ರಭಾಕರ್ ಹಾಗೂ ಸಿಬ್ಬಂದಿ ಪ್ರದೀಪ್ ಎಂಬುವವರ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ವಕೀಲೆಯೊಬ್ಬರು ಥೈರಾಯ್ಡ್ ತಪಾಸಣೆಗಾಗಿ ಬ್ಯಾಡರಹಳ್ಳಿಯ ಪ್ರಕಾಶ್ ಡಯಾಗ್ನೋಸ್ಟಿಕ್ ಲ್ಯಾಬೋರೇಟರಿಗೆ ತೆರಳಿದ್ದರು. ಈ ವೇಳೆ ರಕ್ತದ ಮಾದರಿ ಸಂಗ್ರಹಿಸುವ ಸಂದರ್ಭದಲ್ಲಿ ಲ್ಯಾಬ್ ತಂತ್ರಜ್ಞ ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸಿದ್ದಾನೆ ಎಂದು ಆಕೆ ಆರೋಪಿಸಿದ್ದಾರೆ. ರಕ್ತ ತೆಗೆಯುವಾಗ ನೋವಾಗುತ್ತಿದೆ ಎಂದು ಮಹಿಳೆ ಕಿರುಚಿಕೊಂಡರೂ ನಿರ್ಲಕ್ಷ್ಯ ವಹಿಸಿ ಬಲವಂತವಾಗಿ ರಕ್ತ ತಗೆದರು. ಇದರ ಪರಿಣಾಮವಾಗಿ ಮಹಿಳೆಯ ಕೈನಲ್ಲಿ ರಕ್ತ ಹೆಪ್ಪುಗಟ್ಟಿ, ತೀವ್ರ ಸ್ವರೂಪದ ಊತ ಕಾಣಿಸಿಕೊಂಡಿದೆ. ಈ ಬಗ್ಗೆೆ ಅದೇ ಲ್ಯಾಬ್ ತಂತ್ರಜ್ಞರ ಬಳಿ ಕೇಳಿದಾಗ ಐಸ್ ಪ್ಯಾಕ್ ಇಟ್ಟುಕೊಳ್ಳುವಂತೆ ತಿಳಿಸಿದ್ದರು. ಇದು ಹೆಮಟೋಮಾ ಆದ್ದರಿಂದ ಬೇರೆ ವೈದ್ಯರ ಬಳಿ ಟೆಸ್ಟ್ ಮಾಡಿಸಿಕೊಳ್ಳಿ ಎಂದೂ ಹೇಳಿದ್ದರು ಎಂದು ಮಹಿಳೆ ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ.














