ಬೆಂಗಳೂರು: ಸಚಿವ ಜಮೀರ್ ಅಹಮದ್ ಖಾನ್ ಅವರ ಬಿಡ್ಡಿಂಗ್ ಕಾರಣಕ್ಕೆ ಪವನ್ ನೆಜ್ಜೂರ್ ಬಲಿಯಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು.
ಭಾನುವಾರ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಅಹಿತಕರ ಘಟನೆ ನಡೆದಾಗ ಪವನ್ ನೆಜ್ಜೂರ್ ಅವರು ಸ್ಥಳದಲ್ಲಿದ್ದರೆಂದು ಲೈವ್ ಬರುತ್ತಿದೆ. ಸರ್ಕಾರ ಈ ವಿಷಯದಲ್ಲಿ ಸುಳ್ಳು ಹೇಳುತ್ತಿದೆ ಎಂದು ಟೀಕಿಸಿದರು.
ಅಧಿಕಾರಿಗಳನ್ನು ಬಲಿ ಪಡೆಯುವುದನ್ನು ದಯಮಾಡಿ ಮೊದಲು ನಿಲ್ಲಿಸಿ. ಪವನ್ ನೆಜ್ಜೂರ್ ಅವರ ಅಮಾನತು ಆದೇಶಕ್ಕೆ ಸರ್ಕಾರ ಉತ್ತರ ಕೊಡಬೇಕು. ಪವನ್ ನೆಜ್ಜೂರ್ ಅವರ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಕೂಡ ಉತ್ತರ ಕೊಡಬೇಕು. ಪವನ್ ನೆಜ್ಜೂರ್ ಅವರ ಡೆತ್ ನೋಟಿನಲ್ಲಿ ಏನಿದೆ ಎಂಬುದನ್ನು ಬಹಿರಂಗ ಪಡಿಸಬೇಕು. ಇದರಲ್ಲಿ ಷಾಮೀಲಾದ ಅಧಿಕಾರಿಗಳು, ಯಾರ ಹೆಸರು ಬರೆದಿಟ್ಟಿದ್ದಾರೆ ಎಂಬುದು ಬಹಿರಂಗಕ್ಕೆ ತನ್ನಿ ಎಂದು ಒತ್ತಾಯಿಸಿದರು.
ಎಫ್‍ಐಆರ್ ಆಗಿರುವ ಭರತ್ ರೆಡ್ಡಿ ಜೊತೆ ಕುಳಿತು ಮುಖ್ಯಮಂತ್ರಿಗಳು ಮಾತಾಡಿದ್ದು ಸರಿಯಲ್ಲ. ಸಿಎಂ, ಅಪರಾಧಿಗಳ ಜೊತೆ ಕುಳಿತರೆ ನ್ಯಾಯ ಹೇಗೆ ಸಿಗುತ್ತದೆ. ನೇಮಕಾತಿ, ಬಡ್ತಿ, ವರ್ಗಾವಣೆಯಲ್ಲಿ ಭ್ರಷ್ಟಾಚಾರ ಹೊರಕ್ಕೆ ಬರಬೇಕಿದೆ. ನಮ್ಮ ಪೊಲೀಸ್ ವ್ಯವಸ್ಥೆಗೆ ದೇಶದಲ್ಲಿ ಒಳ್ಳೆಯ ಹೆಸರಿದೆ. ಇದನ್ನು ಬಿಗಡಾಯಿಸುತ್ತಿರುವುದು ಕಾಂಗ್ರೆಸ್ ಸರ್ಕಾರ. ಭ್ರಷ್ಟಾಚಾರ ಇಲ್ಲದೇ ವರ್ಗಾವಣೆ, ಬಡ್ತಿ, ನೇಮಕಾತಿ ಆಗುತ್ತಿಲ್ಲ. ಈ ಹಂತಕ್ಕೆ ಸರ್ಕಾರವನ್ನು ತೆಗೆದುಕೊಂಡು ಹೋಗಲಾಗಿದೆ ಎಂದು ಟೀಕಿಸಿದರು.
ಉಸ್ತುವಾರಿ ಸಚಿವರ ಮನೆಗೆ ಎಷ್ಟು? ಮುಖ್ಯಮಂತ್ರಿ ಮನೆಗೆ ಎಷ್ಟು? ಯಾವ ಸಚಿವರಿಗೆ ಎಷ್ಟು ಆಯಾ ಕಾಂಗ್ರೆಸ್ ಶಾಸಕನಿಗೆ ಎಷ್ಟು ಎಂಬ ಪರಿಸ್ಥಿತಿ ಇದೆ. ಇದು ಕರ್ನಾಟಕದಲ್ಲಿ ನಡೆಯುತ್ತಿದೆ. ಜನರು, ಅಧಿಕಾರಿಗಳೂ ಬೇಸತ್ತಿದ್ದಾರೆ. ನಿಮ್ಮ ಅಧಿಕಾರಿಗಳನ್ನು ಕೂರಿಸಿಕೊಂಡು ಕಷ್ಟ ಕೇಳಿ ಸಿದ್ದರಾಮಯ್ಯನವರೇ. ನೀವು ಯಾವತ್ತು ಅಧಿಕಾರಿಗಳ ಸಭೆ ನಡೆಸಿದ್ದೀರಿ? ಎಲ್ಲಿ ಜಿಲ್ಲಾ ಸಭೆ ಮಾಡಿದ್ದೀರಿ ಎಂದು ಪ್ರಶ್ನಿಸಿದರು.
ವಿಮಾನನಿಲ್ದಾಣದಿಂದ ಬರುವಾಗ ಬ್ರಿಡ್ಜ್ ಮೇಲೆಯೂ ಟ್ರಾಫಿಕ್ ಯಾಕೆಂದು ಮೊನ್ನೆ ಅಧಿಕಾರಿಯೊಬ್ಬರನ್ನು ಪ್ರಶ್ನಿಸಿದ್ದೆ. ಬ್ರಿಡ್ಜ್ ಮೇಲೆಯೂ ವಾಹನ ನಿಲ್ಲಿಸಿ ಸಂಗ್ರಹ ಮಾಡುತ್ತಾರೆ. ಯಾಕೆ ಎಂದು ಕೇಳಿದರೆ ‘ನಾವು ಮಂತ್ಲಿ ಪೇಮೆಂಟ್ ಮಾಡಬೇಕು ಎಂದು ಉತ್ತರಿಸಿದರು. ಸಂಗ್ರಹ ಮಾಡದೇ ಇದ್ದರೆ ನೀವು ಕೊಡುತ್ತೀರಾ ಎಂದು ತಮಾಷೆಗೆ ಆ ಅಧಿಕಾರಿ ಕೇಳಿದರು ಎಂದು ಗಮನ ಸೆಳೆದರು.
ನೀವು ನಿಮ್ಮ ಗೂಂಡಾ ಶಾಸಕರನ್ನು ರಕ್ಷಿಸಲು ಹೊರಟಿದ್ದೀರಿ. ಇವತ್ತು ಪವನ್ ನೆಜ್ಜೂರ್ ಅವರಿಗೆ ನ್ಯಾಯ ಬೇಕಾಗಿದೆ. ರಾಜ್ಯದ ಪೊಲೀಸ್ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಇತರ ಅಧಿಕಾರಿಗಳ ನೈತಿಕ ಬಲ ಕುಗ್ಗುತ್ತಿದೆ. ಬೆಂಗಳೂರಿನಲ್ಲಿ ಮನೆ ಪಡೆಯಲು ಜನರು 11 ತಿಂಗಳ ಒಪ್ಪಂದ ಮಾಡಿಕೊಳ್ಳುತ್ತಾರೆ. ಅದೇ ರೀತಿ ಅಧಿಕಾರಿಗಳ ಬಿಡ್ಡಿಂಗ್ ನಡೆಯುತ್ತಿದೆ. 11 ತಿಂಗಳಲ್ಲಿ ಬದಲಾಯಿಸುತ್ತಾರೆ. ಹೊಸಬ ಹೆಚ್ಚು ದುಡ್ಡು ಕೊಟ್ಟರೆ ಆ ಜಾಗಕ್ಕೆ ಬರುತ್ತಾರೆ. ಇಲ್ಲವೇ ಅಲ್ಲಿದ್ದವರು ಅದಕ್ಕಿಂತ ಹೆಚ್ಚು ದುಡ್ಡು ಕೊಡಬೇಕಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಅಧಿಕಾರಿಗಳು ಬಲಿಯಾಗುತ್ತಾರೆ ಎಂದು ಶೋಭಾ ಕರಂದ್ಲಾಜೆ ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್ ಹರೀಶ್, ರಾಜ್ಯ ವಕ್ತಾರ ನರೇಂದ್ರ ರಂಗಪ್ಪ ಭಾಗವಹಿಸಿದ್ದರು.














