ಬೆಳಗಾವಿ: ಜಿಲ್ಲೆಯ ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ನಕಲಿ ಬಿಲ್ ಹಾವಳಿ, ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಪ್ರಜಾ ನೆರಳು ದಿನಪತ್ರಿಕೆ ಕಳೆದ ಕೆಲ ದಿನಗಳಿಂದ ನಿರಂತರವಾಗಿ ವರದಿ ಮಾಡುತ್ತಿದೆ. ಅಕ್ರಮಗಳಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಪಿಡಿಒಗಳ ಬಗ್ಗೆ ಪತ್ರಿಕೆಯು ದಾಖಲೆ, ಆಡಿಯೋ ಸೇರಿದಂತೆ ಹಲವಾರು ಸಾಕ್ಷಿಗಳನ್ನು ಬಹಿರಂಗ ಮಾಡಿದೆ ಆದರೂ ಮೇಲಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಉದಾಹರಣೆಗೆ ಪಾರವಾಡ, ಜಾಂಬೋಟಿ ಹಾಗೂ ಬೈಲೂರ ಗ್ರಾಪಂ ಗಳಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ಪತ್ರಿಕೆಯು ವಿಸ್ತೃತವಾಗಿ ವರದಿ ಮಾಡಿದೆ. ಈ ಹಿಂದೆ ಪಾರವಾಡ ಗ್ರಾಪಂನ ಪಿಡಿಒ ಆಗಿದ್ದ ವೀರೇಶ ಸಜ್ಜನ ಎಂಬುವರು ಲಂಚಕ್ಕೆ ಬೇಡಿಕೆ ಇಟ್ಟಿದ್ದು ಹಾಗೂ ಆನ್ ಲೈನ್ ಮೂಲಕ ಕಮಿಷನ್ ಪಡೆದ ಬಗ್ಗೆ ಪತ್ರಿಕೆಯು ದಾಖಲೆ ಹಾಗೂ ಆಡಿಯೋ ಸಮೇತ ವರದಿ ಮಾಡಿತ್ತು. ಇನ್ನು ಬೈಲೂರ ಗ್ರಾಪಂನ ಕಂಪ್ಯೂಟರ್ ಆಪರೇಟರ್ ತನ್ನ ಪತ್ನಿಯ ಹೆಸರನ್ನು ಮನರೇಗಾ ಕಾರ್ಮಿಕರ ಪಟ್ಟಿಯಲ್ಲಿ ಸೇರಿಸಿ ಅಕ್ರಮ ಎಸಗಿದ ಬಗ್ಗೆ ವರದಿ ಮಾಡಲಾಗಿತ್ತು. ಜೊತೆಗೆ ಈ ಎಲ್ಲ ವರದಿಗಳ ಬಗ್ಗೆ ಬೆಳಗಾವಿ ಜಿಲ್ಲಾ ಪಂಚಾಯಿತಿಯ ಮೇಲಧಿಕಾರಿಗಳ ಗಮನಕ್ಕೂ ತರಲಾಗಿತ್ತು ಆದರೆ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸವಾಗಿದೆ.
ಇಷ್ಟೆಲ್ಲ ಆಗಿ ಹಲವಾರು ದಿನಗಳು ಕಳೆದರು ಕೂಡ ಆರೋಪಿತ ಉದ್ಯೋಗಿಗಳ ಮೇಲೆ ಯಾವುದೇ ಶಿಸ್ತು ಕ್ರಮ ಆಗದಿರುವುದು ಏಕೆ ಎಂದು ಸಂಬಂಧಿತ ಗ್ರಾಮಗಳ ಜನತೆ ಪ್ರಶ್ನಿಸುತ್ತಿದ್ದಾರೆ. ಲಂಚ ಪಡೆದು ಅಭಿವೃದ್ಧಿ ಕಾರ್ಯ ಮಾಡದೆ ಸರ್ಕಾರಿ ಉದ್ಯೋಗಕ್ಕೆ ನ್ಯಾಯ ಒದಗಿಸದ ಪಿಡಿಒಗಳು ಹಾಗೂ ಇತರ ನೌಕರರ ಬಗ್ಗೆ ಜನತೆ ಸಾಕಷ್ಟು ಆಕ್ರೋಶ ಹೊರಹಾಕುತ್ತಿದ್ದಾರೆ. ಅಕ್ರಮಗಳ ಬಗ್ಗೆ ಇಷ್ಟೆಲ್ಲ ಸಾಕ್ಷಿಗಳು ಲಭ್ಯವಿದ್ದರೂ ತಾಪಂ ಹಾಗೂ ಜಿಪಂ ಮಟ್ಟದಲ್ಲಿ ಯಾವುದೇ ಕ್ರಮ ಆಗದಿರುವುದನ್ನು ನೋಡಿದರೆ ಹಿರಿಯ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆಯೇ ಸಂಶಯ ಮೂಡುವಂತಾಗಿದೆ.
ಅಕ್ರಮ ಎಸಗಿರುವ ಆರೋಪ ಹೊತ್ತಿರುವವರು ನಮ್ಮನ್ನು ಯಾರೂ ಏನೂ ಮಾಡಿಕೊಳ್ಳಲಾಗದು ಎಂದು ಬಹಿರಂಗವಾಗಿ ಹೇಳುತ್ತ ಓಡಾಡಿಕೊಂಡಿರುವುದನ್ನು ನೋಡಿಯೂ ನೋಡದಂತೆ ಮೇಲಧಿಕಾರಿಗಳು ವರ್ತಿಸುತ್ತಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಈಗಲಾದರೂ ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಂಡು ಅಕ್ರಮ ಎಸಗಿರುವ ಆರೋಪ ಹೊತ್ತಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಲಿ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.














