ಮೇ 31 ರಂದು ರಾಜ್ಯ ಒಕ್ಕಲಿಗರ ಸಂಘದ ಸರ್ವ ಸದಸ್ಯರ ಸಭೆ: ಎಲ್.ಶ್ರೀನಿವಾಸ್

WhatsApp
Telegram
Facebook
Twitter
LinkedIn

ಬೆಂಗಳೂರು: ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರ ಸಭಾಂಗಣದಲ್ಲಿ ಮೇ 31ರಂದು ರಾಜ್ಯ ಒಕ್ಕಲಿಗರ ಸಂಘದ ಸರ್ವ ಸದಸ್ಯರ ಮತ್ತು ಆಡಳಿತ ಮಂಡಳಿ ಸಭೆ ಏರ್ಪಡಿಸಲಾಗಿದೆ. ಇದು ಹನ್ನೊಂದು ವರ್ಷದ ನಂತರ ನಡೆಯುತ್ತಿರುವ ಪ್ರಮುಖ ಸಭೆಯಾಗಿದೆ ಎಂದು ಅಧ್ಯಕ್ಷ ಎಲ್.ಶ್ರೀನಿವಾಸ್ ಮಾಹಿತಿ ನೀಡಿದರು.

ಬುಧವಾರ ವಿವಿ ಪುರದ ರಾಜ್ಯ ಒಕ್ಕಲಿಗರ ಸಂಘದ  ಮುಖ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಭೆಯಲ್ಲಿ 2014-15 ರಿಂದ 2024-25ರವರೆಗಿನ ಸಂಘದ ಆಡಳಿತ ವರದಿ ಮಂಡಿಸಲಾಗುತ್ತದೆ. ಆಡಿಟರ್‌ರವರಿಂದ ಪರಿಶೋಧಿಸಲ್ಪಟ್ಟ ಲೆಕ್ಕ ಪತ್ರಗಳನ್ನು ಮಂಡಿಸಲಾಗುತ್ತದೆ. ಜಮಾ-ಖರ್ಚು, ಆದಾಯ-ವೆಚ್ಚ ಮತ್ತು ಆಸ್ತಿ ಜವಾಬ್ದಾರಿ ಕುರಿತಾಗಿ ಸಭೆಯಲ್ಲಿ ಪರಿಶೀಲಿಸಿ ಅನುಮೋದಿಸಲಾಗುತ್ತದೆ ಎಂದರು.

ಸಭೆಯಲ್ಲಿ 2025-26ನೇ ಸಾಲಿನ ಪರಿಷ್ಕೃತ ಹಾಗೂ 2026-27ನೇ ಸಾಲಿನ ಆಯ-ವ್ಯಯ ಅಂದಾಜು ಪಟ್ಟಿಯನ್ನು ಇದೇ ಸಂದರ್ಭದಲ್ಲಿ ಮಂಡಿಸಿ ಅನುಮೋದಿಸಲಾಗುತ್ತದೆ. 2025-26ನೇ ಸಾಲಿನ ಲೆಕ್ಕಪುಸ್ತಕಗಳ ಪರಿಶೀಲನೆಗೆ ಆಡಿಟರ್ ಅವರನ್ನು ನೇಮಕ ಮಾಡುವ ಕುರಿತಾಗಿ ಚರ್ಚಿಸಲಾಗುತ್ತದೆ. ಜೊತೆಗೆ ಸಂಘದ ಸದಸ್ಯರಿಂದ ಸಭೆಗೆ 7 ದಿನಗಳ ಮುಂಚಿತವಾಗಿ ಬಂದಿರುವ ವಿಷಯಗಳ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.

ಮೇ 31ರಂದು ಬೆಳಗ್ಗೆ ಸರ್ವ ಸದಸ್ಯರ ಸಭೆ ನಡೆದ ನಂತರ ಮಧ್ಯಾಹ್ನ ಆಡಳಿತ ಮಂಡಳಿಯ ಸಭೆ ಜರುಗಲಿದೆ. ಸರ್ವ ಸದಸ್ಯರ ಸಭೆಯಲ್ಲಿ ಸಂಘದ ಅಧ್ಯಕ್ಷರು, ನಿರ್ದೇಶಕರನ್ನು ಒಳಗೊಂಡ ಪದಾಧಿಕಾರಿಗಳು ಹಾಗೂ 10 ಸಾವಿರಕ್ಕಿಂತ ಹೆಚ್ಚಿನ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.

ರಾಜ್ಯದಾದ್ಯಂತ 6.51 ಲಕ್ಷ ಸದಸ್ಯರು ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದಲ್ಲಿದ್ದಾರೆ. ರಾಜ್ಯದ ಹಲವು  ಸಂಘದ ಸದಸ್ಯರು ಈ ಸರ್ವ ಸಭೆಯಲ್ಲಿ ಭಾಗವಹಿಸಲು ಸಂಘವು ಮನವಿ ಮಾಡಿದ್ದು, ಸದಸ್ಯರು ಸಭೆಗೆ ಬರುವಾಗ ತಮ್ಮ ಗುರುತಿನ ಚೀಟಿಯನ್ನು ತರಬೇಕು ಎಂದು ಹೇಳಿದರು

ಮುಖ್ಯವಾಗಿ ಸರ್ವ ಸದಸ್ಯರ ಸಭೆಯಲ್ಲಿ ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಪ್ರಮುಖವಾಗಿ ಒಕ್ಕಲಿಗರ ಸಂಘಕ್ಕೆ ಸೇರಿರುವ ಕೆಂಪೇಗೌಡ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಈಗಾಗಲೇ 150 ಎಂಬಿಬಿಎಸ್ ಸೀಟ್‌ಗಳಿದ್ದು, ಮುಂದಿನ ಶೈಕ್ಷಣಿಕ ಸಾಲಿನಿಂದ 100 ಸೀಟ್‌ಗಳನ್ನು ಹೆಚ್ಚಿಸಲು ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ರಾಜ್ಯ ಒಕ್ಕಲಿಗರ ಸಂಘದ ಬೈಲಾವನ್ನು ತಿದ್ದುಪಡಿ ಮಾಡಿರುವ ಬಗ್ಗೆ ಸರ್ವ ಸದಸ್ಯರ ಸಭೆಯಲ್ಲಿ ಮುಂದಿಡಲಾಗುತ್ತದೆ. ಬಹುಮುಖ್ಯವಾಗಿ ಬೆಂ. ಗ್ರಾಮಾಂತರ, ಬೆಂ. ದಕ್ಷಿಣ ಹಾಗೂ ಬೆಂ.ನಗರ ಜಿಲ್ಲೆಯಲ್ಲಿಯೇ 2.51 ಲಕ್ಷದಷ್ಟು ಸದಸ್ಯರಿದ್ದಾರೆ. ಈ ಸಂಬಂಧ ಕೆಲ ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.

ಎಲ್ಲಾ ಸಮುದಾಯಗಳನ್ನು ಒಳಗೊಂಡ ಗರ್ಭಿಣಿಯರಿಗೆ ಕೆಂಪೇಗೌಡ ಆಸ್ಪತ್ರೆ ವತಿಯಿಂದ ಉಚಿತ ಹೆರಿಗೆ ಸೌಲಭ್ಯವನ್ನು ನೀಡಲಾಗುತ್ತಿದ್ದು, ಇದರ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಪ್ರಸ್ತುತ ರಾಜ್ಯ ಒಕ್ಕಲಿಗರ ಸಂಘ ಮತ್ತು ಅಧೀನ ವಿದ್ಯಾಸಂಸ್ಥೆಗಳಲ್ಲಿ ಒಟ್ಟು 13,451 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೆ ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆ ಸೇರಿ ಒಟ್ಟು 2,115 ಖಾಯಂ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದೂ ಎಲ್.ಶ್ರೀನಿವಾಸ್ ತಿಳಿಸಿದರು

ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಕೆಂಚಪ್ಪಗೌಡ, ಪ್ರಧಾನ ಕಾರ್ಯದರ್ಶಿ ಸಿ.ಜಿ. ಗಂಗಾಧರ್, ಉಪಾಧ್ಯಕ್ಷ  ಡಾ.ರೇಣುಕಾಪ್ರಸಾದ್ ಕೆ.ವಿ, ಎಂ.ಪುಟ್ಟಸ್ವಾಮಿ ಹಾಗೂ ಪದಾಧಿಕಾರಿಗಳಾದ ಆರ್. ಪ್ರಕಾಶ್, ನೆಲ್ಲಿಗೆರೆ ಬಾಲು, ಸಿ.ದೇವರಾಜ್ ಹಾಗೂ ಇತರರಿದ್ದರು.

 

 

 

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon