ಬೆಂಗಳೂರು: ಅಯೋಧ್ಯಾ ನಗರ ನಾಮಧಾರಿ ನಗರ್ತ ಸಮುದಾಯದ ವತಿಯಿಂದ ಮಂಗಳವಾರ ನಗರದ ಫ್ರೀಡಂ ಪಾರ್ಕ್ ನಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಹಕ್ಕುಗಳಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ನಾಮಧಾರಿ ನಗರ್ತ ಸಮುದಾಯದ ಅಧ್ಯಕ್ಷ ಹಾಗೂ ಎಫ್.ಕೆ.ಸಿ.ಸಿ.ಐ ಉಪಾಧ್ಯಕ್ಷ ಟಿ. ಸಾಯಿರಾಂ ಪ್ರಸಾದ್, ಭಾವನಾತ್ಮಕ ಮತ್ತು ಐತಿಹಾಸಿಕ ಮಾದರಿಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಸಾಮದಾಯದ ಜನರು, ಮಹಿಳೆಯರು, ಕಾಲೇಜು ವಿದ್ಯಾರ್ಥಿಗಳು, ರೈತರು, ಕೂಲಿ ಕಾರ್ಮಿಕರು, ಹಿರಿಯ ನಾಗರಿಕರು ಮತ್ತು ಯುವಕರು ಪ್ರಭಟನೆಯಲ್ಲಿ ಭಾಗವಹಿಸಿ ಸಮಾಜದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ವ್ಯಕ್ತಪಡಿಸಲು ಮುಂದಾಗಿರುವುದು ನಮ್ಮ ಹೋರಾಟಕ್ಕೆ ಆನೆ ಬಲ ಸಿಕ್ಕಂತಾಗಿದೆ ಎಂದರು.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಸೇರಿದಂತೆ ಹಲವಾರು ಗ್ರಾಮೀಣ ಪ್ರದೇಶಗಳಿಂದ ಜನರು ಸ್ವಯಂಪ್ರೇರಿತವಾಗಿ ಆಗಮಿಸಿ ಹೋರಾಟದಲ್ಲಿ ಭಾಗವಸಿದ್ದಾರೆ. ಇದು ರಾಜಕೀಯ ಹೋರಾಟವಲ್ಲ. ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಸಮುದಾಯ ನಡೆಸುತ್ತಿರುವ ನ್ಯಾಯಯುತ ಹೋರಾಟ ಎಂದು ಸ್ಪಷ್ಟಪಡಿಸಿದರು.
ನಾಮಧಾರಿ ನಗರ್ತ ಎಂಬ ಹೆಸರಿನಿಂದ ಗುರುತಿಸಿಕೊಂಡಿರುವ ನಮ್ಮ ಸಮುದಾಯಕ್ಕೆ ಕರ್ನಾಟಕ ಸರ್ಕಾರದಿಂದ ಇನ್ನೂ ಅಧಿಕೃತ ಮಾನ್ಯತೆ ದೊರೆತಿಲ್ಲ. ಸಮುದಾಯದ ಹೆಸರು ಇನ್ನೂ ಗೆಜೆಟ್ ನಲ್ಲಿ ಹಾಗೂ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸದ ಕಾರಣ ಸಾವಿರಾರು ವಿದ್ಯಾರ್ಥಿಗಳು ಜಾತಿ ಪ್ರಮಾಣ ಪತ್ರ, ವಿದ್ಯಾರ್ಥಿವೇತನ, ಹಾಸ್ಟೆಲ್ ಶುಲ್ಕ ವಿನಾಯಿತಿ, ವಸತಿ ಶಾಲೆ ಸೇರಿದಂತೆ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸಂಚಾಲಕ ಶ್ರೀನಿವಾಸ್ ಶೆಟ್ಟಿ ಮಾತನಾಡಿ, ನಮ್ಮ ಸಮುದಾಯಕ್ಕೆ ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ 1985ರಿಂದಲೇ ತಮ್ಮ ಸಮುದಾಯಕ್ಕೆ ಮೀಸಲಾತಿ ಮತ್ತು ಸರ್ಕಾರಿ ಸೌಲಭ್ಯಗಳು ದೊರೆಯುತ್ತಿವೆ. ಆದರೆ ಕರ್ನಾಟಕದಲ್ಲಿ ಮಾತ್ರ ನಮ್ಮ ಸಮುದಾಯಕ್ಕೆ ಮಾನ್ಯತೆ ನೀಡದಿರುವುದು ದೊಡ್ಡ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಸಮುದಾಯದ ಬಹುತೇಕ ಕುಟುಂಬಗಳು ಸಣ್ಣ ರೈತರು ಮತ್ತು ಕೂಲಿ ಕಾರ್ಮಿಕರಾಗಿದ್ದಾರೆ. ಅನೇಕ ವಿದ್ಯಾರ್ಥಿಗಳು ಬಾಲ್ಯದಿಂದಲೇ ಹೊಲಗಳಲ್ಲಿ ಮತ್ತು ಬೇರೆ ರೈತರ ತೋಟಗಳಲ್ಲಿ ಕೂಲಿ ಕೆಲಸ ಮಾಡಿಕೊಂಡು ಓದುತ್ತಿದ್ದಾರೆ. ಜಾತಿ ಪ್ರಮಾಣ ಪತ್ರ ಇಲ್ಲದ ಕಾರಣ ಪ್ರತಿಯೊಂದು ಹಂತದಲ್ಲೂ ನಾವು ರಿಜೆಕ್ಟ್ ಆಗುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸಮುದಾಯದ ಮುಖಂಡರು ವಿದ್ಯಾರ್ಥಿಗಳು ಮತ್ತು ಯುವಕರು ತಮಗಾಗುತ್ತಿರುವ ನೋವನ್ನು ಹಂಚಿಕೊಂಡರು.














