ಫ್ರೀಡಂ ಪಾರ್ಕ್ ನಲ್ಲಿ ಸಂಪೂರ್ಣ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಪ್ರತಿಭಟನಾ ಸಮಾವೇಶ

WhatsApp
Telegram
Facebook
Twitter
LinkedIn

ಬೆಂಗಳೂರು: ಸಂಪೂರ್ಣ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಮಾದಿಗ ಸಂಘಟನೆಗಳ ಒಕ್ಕೂಟದಿಂದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.

ಆರ್.ಪಿ.ಐ,ಡಿ.ಎಸ್. ಎಸ್ ರಾಜ್ಯಾಧ್ಯಕ್ಷ ಎನ್.ಮೂರ್ತಿ ಪ್ರತಿಭಟನೆಗೆ ಚಾಲನೆ ನೀಡಿ ಮಾತನಾಡಿ, ಸಂಪೂರ್ಣ ಒಳಮೀಸಲಾತಿ ಜಾರಿಯಾಗಬೇಕು, ರೋಸ್ಟರ್ ಬಿಂದು ಮಾರ್ಪಡಿಸಬೇಕು, ಬಡ್ತಿ, ಮುಂಬಡ್ತಿ ಎಸ್.ಸಿ.ಎಸ್.ಪಿ ಟಿ.ಎಸ್. ಟಿ ಹಾಗೂ ಮೀಸಲಾತಿ ಇರುವ ಕಡೆಯಲೆಲ್ಲಾ ಒಳ ಮೀಸಲಾತಿ ಅಳವಡಿಸಬೇಕು ಎಂದರು.

ಮೀಸಲಾತಿಯಿಂದ ವಂಚಿತರಾದ ಮಾದಿಗ ಸಮುದಾಯಗಳಿಗೆ ಸಮಾನ ಅವಕಾಶಗಳನ್ನು ಒದಗಿಸಿಕೊಡುವ, 101 ಪರಿಶಿಷ್ಟ ಜಾತಿಗಳಿಗೂ ಮೀಸಲಾತಿ ಸಮನಾಗಿ ಹಂಚಿಕೆಯ ಏಕೈಕ ಉದ್ದೇಶದಿಂದ ಒಳ ಮೀಸಲಾತಿ ವ್ಯವಸ್ಥೆ ಜಾರಿ ತರಲಾಗಿದೆ. ನಾಗಮೋಹನ್‌ದಾಸ್ ಹಾಗೂ ಜೆ.ಸಿ.ಮಾಧುಸ್ವಾಮಿ ವರದಿಯನ್ನು ಸರ್ಕಾರ ತಳ್ಳಿ ಹಾಕಿ ಒಳಮೀಸಲಾತಿ ವಿರೋಧಿಗಳ ಒತ್ತಡಕ್ಕೆ ಮಣಿದು ಬೀಸೋ ದೊಣ್ಣೆ ಏಟಿಗೆ ತಪ್ಪಿಸಿಕೊಳ್ಳಲು ಒಳಮೀಸಲಾತಿ ಜಾರಿಗೆ ತಂದಿರುವುದಾಗಿ ಬೀಗುತ್ತಿದೆ. ಇದು ರಾಜಕೀಯ ತಂತ್ರಗಾರಿಕೆಯ ಅವೈಜ್ಞಾನಿಕ ಒಳಮೀಸಲಾತಿಯಾಗಿದೆ ಎಂದರು.

ಒಳಮೀಸಲಾತಿ ಜಾರಿಗೊಳಿಸಿ ಹೊರಡಿಸಿರುವ ಅಧಿಸೂಚನೆ ಕಾನೂನು ಬಾಹಿರ ಹಾಗೂ ಅವೈಜ್ಞಾನಿಕ ‌ ಮತ್ತು ಗೊಂದಲದ ಗೂಡಾಗಿದೆ ಹಾಗೂ ಒಳಮೀಸಲಾತಿಯ ಉದ್ದೇಶ ವಿಫಲವಾಗಿದೆ. 3 ಕ್ಕಿಂತ ಕಡಿಮೆ ರೋಸ್ಟರ್ ಹುದ್ದೆಗಳು ಲಭ್ಯವಾಗುತ್ತಿದ್ದಲ್ಲಿ ಪರಿಶಿಷ್ಟ 101 ಜಾತಿಗಳು ಈ ಹುದ್ದೆಗೆ ಸ್ಪರ್ಧಿಸಬೇಕು ಎಂದು ಆದೇಶಿಸಲಾಗಿದೆ. ಇದು ಒಳಮೀಸಲಾತಿ ಅನ್ವಯಿಸುವುದಿಲ್ಲ, ಹೀಗಾಗಿ ಪರಿಶಿಷ್ಟ ಜಾತಿಗಳಿಗೆ 3 ಕ್ಕಿಂತ ಹೆಚ್ಚು ಹುದ್ದೆಗಳು ಲಭ್ಯವಿದ್ದರೆ ಮಾತ್ರ ಒಳಮೀಸಲಾತಿ ಕಲ್ಪಿಸಲು ಸೂಚಿಸಲಾಗಿದೆ. ಪರಿಶಿಷ್ಟ ಜಾತಿಯ ಎಬಿಸಿ ಗುಂಪುಗಳಿಗೆ ರೋಸ್ಟರ್ ಸಂಖ್ಯೆ 1,9,15 ಬಿಂದುಗಳು ಲಭ್ಯವಾಗದಿದ್ದರೆ 101 ಪರಿಶಿಷ್ಟ ಜಾತಿಗಳಲ್ಲಿ ಸ್ಪರ್ಧಿಸಲು ಆದೇಶದಲ್ಲಿ ಉಲ್ಲೇಖಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬಿ ಮತ್ತು ಸಿ ಈ ಬಲಿಷ್ಟ ಜಾತಿಗಳೊಂದಿಗೆ ಮಾದಿಗ ಸಮುದಾಯ ಮತ್ತು ಅಲೆಮಾರಿ ಜಾತಿಗಳು ಸ್ಪರ್ಧಿಸಿ ತನ್ನ ಪಾಲು ಪಡೆಯಲು ಸಾಧ್ಯವಿಲ್ಲ. ಹೀಗಾಗಿ ಪರಿಶಿಷ್ಟ ಜಾತಿಗಳಿಗೆ ಮೀಸಲಿರಿಸಿರುವ ಬಹುತೇಕ ಹುದ್ದೆಗಳು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಬಲಾಡ್ಯರಾಗಿರುವ ಪರಿಶಿಷ್ಟ ಜಾತಿಗಳ ಪಾಲಾಗುವಂತೆ ಹುನ್ನಾರ ನಡೆಸಲಾಗುತ್ತಿದೆ. ಪರಿಶಿಷ್ಟ ಜಾತಿಗಳಿಗೆ 3 ಕ್ಕಿಂತ ಕಡಿಮೆ ರೋಸ್ಟರ್ ಹುದ್ದೆಗಳು ಲಭ್ಯವಾದರೆ ಪರಿಶಿಷ್ಟ ಸಾಮಾನ್ಯ  ಎಂಬುದು ಅವೈಜ್ಞಾನಿಕ ಮತ್ತು ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಉಲ್ಲಂಘನೆ ಹಾಗೂ ಅಸಂವಿಧಾನಿಕ ಆದೇಶವಾಗಿದೆ ಎಂದು ಹೇಳಿದರು.

ಬಹುತೇಕ ಗೆಜೆಟೆಡ್ ಕ್ಲಾಸ್ 1 ಮತ್ತು 2 ಹುದ್ದೆಗಳು, ತಾಂತ್ರಿಕ ಶಿಕ್ಷಣ ಸಂಸ್ಥೆಗಳು, ವಿಶ್ವ ವಿದ್ಯಾಲಯದ ಕುಲಪತಿ, ಕುಲಸಚಿವ, ಪ್ರಾಧ್ಯಾಪಕ, ಸಹಾಯ ಪ್ರಾಧ್ಯಪಕ, ಹೆಚ್ಚುವರಿ ಪ್ರಾಧ್ಯಾಪಕ ಇತರೆ ಹುದ್ದೆಗಳು ಹಾಗೂ ಹಲವಾರು ಇಲಾಖೆಗಳಲ್ಲಿ ಮತ್ತು ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ನೇಮಕಾತಿಗಳು, ಕಲ್ಯಾಣ ಕರ್ನಾಟಕದ ಮೀಸಲಾತಿ ಹುದ್ದೆಗಳು ಅಲ್ಲದೆ ನೂರಾರು ಅನುದಾನ ಮತ್ತು ಅನುದಾನ ರಹಿತ ಸಂಸ್ಥೆಗಳ ಶಾಲಾ, ಕಾಲೇಜುಗಳಲ್ಲಿನ ಹುದ್ದೆಗಳಲ್ಲಿ ಲಭ್ಯವಾಗುವ ಹುದ್ದೆಗಳಲ್ಲಿ ಒಳಮೀಸಲಾತಿ ದೊರೆಯದಂತೆ ವ್ಯವಸ್ಥಿತ ಷಡ್ಯಾಂತರ ರೂಪಿಸಲಾಗಿದೆ ಎಂದರು.

ಬಡ್ತಿ ಮತ್ತು ಮುಂಬಡ್ತಿಯಲ್ಲಿ ಮೀಸಲಾತಿ ನೀಡಿಲ್ಲ ಹಾಗೂ ಆದಿ ಕರ್ನಾಟಕ, ಆದಿದ್ರಾವಿಡ, ಆದಿ ಆಂಧ್ರ ಜಾತಿಗಳಿಗೆ ನಾಗಮೋಹನ್ ದಾಸ್ ಆಯೋಗ ಶೇ.1% ರಷ್ಟು ಮೀಸಲಾತಿ ನೀಡಿತ್ತು. ಆದರೆ ಈ ಗುಂಪನ್ನು ತುಂಡರಿಸಿ ಈ ಜಾತಿಗಳನ್ನು ಗೊಂದಲದಲ್ಲಿ ಕೆಡವಿದೆ. 59 ಅಲೆಮಾರಿ ಮತ್ತು ಅರೆಅಲೆಮಾರಿ ಜಾತಿಗಳು ತೀರ ಹಿಂದುಳಿದಿದ್ದು, ಈ ಜಾತಿಗಳಿಗೆ ವಿಶೇಷ ಸ್ಥಾನ ನೀಡಿದ ಆಯೋಗ ಎ ಗ್ರೂಪ್‌ನಲ್ಲಿ ಶೇ.1% ರಷ್ಟು ಮೀಸಲಾತಿ ನೀಡಿತ್ತು. ಸರ್ಕಾರ ಯಾವ ಆಯೋಗದ ವರದಿಯನ್ನು ಆಧರಿಸಿದೆ. ‘ಸಿ’ ಗ್ರೂಪ್‌ನ ಬಲಿಷ್ಟ ಜಾತಿಗಳೊಂದಿಗೆ ಸೇರಿಸಿ ತೀವ್ರ ಅನ್ಯಾಯ ಮಾಡಿದೆ. ಈ ಕರಾಳ ಆದೇಶ ಈ ಜಾತಿಗೆ ಮರಣ ಶಾಸನವಾಗಿದೆ ಎಂದರು

ಪ್ರತಿಭಟನೆಯಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಗೌರವಾಧ್ಯಕ್ಷ  ಕೇಶವಮೂರ್ತಿ, ವಿಶ್ವ ಜಾಂಭವ ಮಹಾ ಸಭಾ ರಾಜ್ಯಾಧ್ಯಕ್ಷ ಡಾ.ಬೀಮ್ ರಾಜ್, ಅಖಿಲ ಭಾರತ ಮಾದಿಗ ದಂಡೋರ ರಾಜ್ಯಾಧ್ಯಕ್ಷ ಹುಸೇನಪ್ಪ ಮಾದಾರ್, ಜೈಭೀಮ್ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಕೆ.ಬಿ.ಆರ್.ಮುನಿರಾಜ್ ಮತ್ತಿತರರು ಭಾಗವಹಿಸಿದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon