ಬೆಂಗಳೂರು: ಪ್ರೊಸ್ಟೇಟ್ ಶಸ್ತ್ರಚಿಕಿತ್ಸೆಗೆ ತಕ್ಷಣ ಒಳಗಾಗಲು ಸಾಧ್ಯವಾಗದ ರೋಗಿಗಳಿಗೆ ಪರ್ಯಾಯವಾಗಿ ಬಳಸಬಹುದಾದ ತಾತ್ಕಾಲಿಕ ಪ್ರೊಸ್ಟಾಟಿಕ್ ಯುರೆಥ್ರಲ್ ಸ್ಟೆಂಟ್ ತಂತ್ರಜ್ಞಾನವನ್ನು ಭಾರತದಲ್ಲಿ ಮೊದಲ ಬಾರಿಗೆ ನಗರದ ಶೇಷಾದ್ರಿಪುರದ ಅಪೋಲೋ ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ. ಅಪೋಲೋ ಪ್ರೊಸ್ಟೇಟ್ ಇನ್‌ಸ್ಟಿಟ್ಯೂಟ್‌ನ ಕ್ಲಿನಿಕಲ್ ನಿರ್ದೇಶಕ ಡಾ.ಟಿ. ಮನೋಹರ್ ನೇತೃತ್ವದ ತಂಡ ಐವರು ರೋಗಿಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಪೋಲೋ ಪ್ರೊಸ್ಟೇಟ್ ಇನ್‌ಸ್ಟಿಟ್ಯೂಟ್‌ನ ಕ್ಲಿನಿಕಲ್ ನಿರ್ದೇಶಕ ಡಾ.ಟಿ. ಮನೋಹರ್, ಹೃದಯ ಸಂಬಂಧಿ ಸಮಸ್ಯೆ, ಕ್ಯಾನ್ಸರ್ ಚಿಕಿತ್ಸೆ, ರಕ್ತ ತೆಳುವಾಗಿಸುವ ಔಷಧ ಸೇವನೆ, ವಯೋಸಹಜ ಸಮಸ್ಯೆಗಳು ಸೇರಿದಂತೆ ವಿವಿಧ ಕಾರಣಗಳಿಂದ ಶಸ್ತ್ರಚಿಕಿತ್ಸೆ ಮುಂದೂಡಬೇಕಾದ ರೋಗಿಗಳಲ್ಲಿ ಈ ತಂತ್ರಜ್ಞಾನವನ್ನು ಬಳಸಲಾಗಿದ್ದು, ಪ್ರೊಸ್ಟಾಟಿಕ್ ಮೂತ್ರನಾಳವನ್ನು ತೆರೆದಿಡುವ ಮೂಲಕ ಮೂತ್ರ ವಿಸರ್ಜನೆಗೆ ನೆರವಾಗುವ ಸ್ಟೆಂಟ್ ಅನ್ನು ಅಗತ್ಯವಿದ್ದಲ್ಲಿ ಸುಮಾರು ಒಂದು ವರ್ಷದವರೆಗೆ ಇರಿಸಬಹುದಾಗಿದೆ ಎಂದರು.
ಚಿಕಿತ್ಸೆ ಪಡೆದವರಲ್ಲಿ 73 ವರ್ಷದ ಹೃದ್ರೋಗದ ತೊಂದರೆ ಹೊಂದಿರುವ ವ್ಯಕ್ತಿ, ಮರುಕಳಿಸುವ ಮೂತ್ರದ ತಡೆ ಹಾಗೂ ಸೋಂಕಿನಿಂದ ಬಳಲುತ್ತಿದ್ದ 70 ವರ್ಷದ ಯುರೋಧೀಲಿಯಲ್ ಕ್ಯಾನ್ಸರ್ ರೋಗಿ, ಪಿಟಿಸಿಎ ಬಳಿಕ ಮೂತ್ರದ ತಡೆ ಸಮಸ್ಯೆ ಎದುರಿಸುತ್ತಿದ್ದ 66 ಹಾಗೂ 83 ವರ್ಷದ ಇಬ್ಬರು ರೋಗಿಗಳು ಹಾಗೂ ಹಲವು ಸಹ-ರೋಗಿಗಳಿಂದಾಗಿ ದೀರ್ಘಕಾಲ ಕ್ಯಾಥೆಟರ್ ಅವಲಂಬಿತರಾಗಿದ್ದ 90 ವರ್ಷದ ವ್ಯಕ್ತಿ ಸೇರಿದ್ದಾರೆ ಎಂದು ತಿಳಿಸಿದರು.
ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳಲ್ಲಿ ಅವರ ಆರೋಗ್ಯಕ್ಕೆ ಹೆಚ್ಚಿನ ಅಪಾಯ ಉಂಟುಮಾಡದೆ ಮೂತ್ರದ ತಡೆಯನ್ನು ನಿವಾರಿಸುವುದು ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಮೂಲ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ನೀಡುವವರೆಗೆ ಅಥವಾ ಕಾಯಂ ಚಿಕಿತ್ಸೆಯನ್ನು ಯೋಜಿಸುವವರೆಗೆ ಈ ತಾತ್ಕಾಲಿಕ ಸ್ಟೆಂಟ್ ಸುರಕ್ಷಿತ ಪರ್ಯಾಯ ಒದಗಿಸುತ್ತದೆ ಎಂದು ಹೇಳಿದರು.
ಶೇಷಾದ್ರಿಪುರ ಅಪೋಲೋ ಆಸ್ಪತ್ರೆಯ ಉಪಾಧ್ಯಕ್ಷ ಉದಯ್ ದಾವ್ಯಾ ಮಾತನಾಡಿ, ತಕ್ಷಣ ಶಸ್ತ್ರಚಿಕಿತ್ಸೆಗೆ ಒಳಗಾಗಲು ಸಾಧ್ಯವಾಗದ ರೋಗಿಗಳಿಗೆ ಚಿಕಿತ್ಸಾ ಆಯ್ಕೆಗಳನ್ನು ವಿಸ್ತರಿಸುವುದು ಮಹತ್ವದ್ದಾಗಿದೆ. ಸೂಕ್ತ ರೋಗಿಗಳ ಆಯ್ಕೆ, ಮಾಹಿತಿ ಆಧಾರಿತ ನಿರ್ಧಾರ ಹಾಗೂ ಚಿಕಿತ್ಸೆಯ ಲಿತಾಂಶಗಳ ನಿರಂತರ ಮೌಲ್ಯಮಾಪನಕ್ಕೆ ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು.
ಮುಂದಿನ ಹಂತದಲ್ಲಿ ಭಾರತೀಯ ರೋಗಿಗಳ ಅಗತ್ಯಕ್ಕೆ ತಕ್ಕಂತೆ ಗಾತ್ರ ಹೊಂದಾಣಿಕೆ ಮಾಡಬಹುದಾದ ವಿನ್ಯಾಸ ಸೇರಿದಂತೆ ತಾತ್ಕಾಲಿಕ ಪ್ರೊಸ್ಟಾಟಿಕ್ ಸ್ಟೆಂಟ್‌ನ ವಿವಿಧ ಮಾರ್ಪಾಡುಗಳನ್ನು ಅಭಿವೃದ್ಧಿಪಡಿಸುವ ಕುರಿತು ಆಸ್ಪತ್ರೆಯ ವೈದ್ಯಕೀಯ ತಂಡ ಪರಿಶೀಲನೆ ನಡೆಸುತ್ತಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಅಪೊಲೊ ಆಸ್ಪತ್ರೆಯ ಮಾರಾಟ ಮತ್ತು ಮಾರುಕಟ್ಟೆಯ ಸಹಾಯಕ ಉಪಾಧ್ಯಕ್ಷ ರಾಜ್ ಅಹ್ಮದ್, ಕಾರ್ಯಾಚರಣೆ ವಿಭಾಗದ ಮುಖ್ಯಸ್ಥ ಡಾ. ರುಕ್ಮಿಣಿ ಡಿ. ಎನ್, ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಪ್ರದೀಪ್ ಕುಮಾರ್ ವಿ. ಎಸ್. ಸೇರಿದೆಂತೆ ಇತರರಿದ್ದರು.














