ಬೆಂಗಳೂರು: ಶಾಂತಿನಗರ ಬಸ್ ನಿಲ್ದಾಣದ ಬಳಿಯಿರುವ ಸುಧಾಮನಗರದ ಅಣ್ಣೀಪುರ ಮುಖ್ಯ ರಸ್ತೆಯಲ್ಲಿ ಶ್ರೀ ವಿನಾಯಕ ಭಕ್ತ ಮಂಡಳಿ ವತಿಯಿಂದ 46ನೇ ವಾರ್ಷಿಕ ಗಣೇಶೋತ್ಸವದ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಸೋಮವಾರ ಮಹಿಳೆಯರಿಗೆ ಉಚಿತ ಸೀರೆ, ಬಾಗಿನ ವಿತರಿಸಲಾಯಿತು.
ವಯೋವೃದ್ಧರು, ಬಡ ಹೆಣ್ಣುಮಕ್ಕಳಿಗೆ ಉಚಿತ ಬಳೆ, ಕುಂಕುಮ, ಸೀರೆ ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಶಾಸಕ ದಿವಂಗತ ಆರ್.ವಿ. ದೇವರಾಜ್ ಅವರ ಪತ್ನಿ ಡಾ. ಮಮತಾ ದೇವರಾಜ್ ಅವರು, ಗಣೇಶನ ಆಶೀರ್ವಾದದಿಂದ ಎಲ್ಲರ ಜೀವನದಲ್ಲಿ ಐಶ್ವರ್ಯ, ಸುಖ-ಶಾಂತಿ ನೆಲೆಸುವಂತಾಗಲಿ. ಗಣೇಶೋತ್ಸವವನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ಅಗತ್ಯವಿದ್ದು, ಈ ಬಾರಿ ಹಲವರು ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಬಳಸುತ್ತಿರುವುದು ಉತ್ತಮ ಬೆಳವಣಿಯಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಸಂಚಾರ ನಿಯಂತ್ರಣಕ್ಕೆ ಕ್ರಮ ಕೈಗೊಂಡಿರುವ ಬೆಂಗಳೂರು ಪೊಲೀಸರ ಕಾರ್ಯ ಶ್ಲಾಘನೀಯ ಎಂದರು.
ಶ್ರೀ ವಿನಾಯಕ ಭಕ್ತ ಮಂಡಳಿಯ ವತಿಯಿಂದ ಕಳೆದ 46 ವರ್ಷಗಳಿಂದ ಗಣೇಶೋತ್ಸವದ ಅಂಗವಾಗಿ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷ ಸಾವಿರಾರು ಹೆಣ್ಣುಮಕ್ಕಳಿಗೆ ಸೀರೆ ಸೇರಿದಂತೆ ವಿವಿಧ ರೀತಿಯ ನೆರವು ಹಾಗೂ ಪ್ರಸಾದ ವಿತರಿಸಲಾಗುತ್ತಿದೆ. ಈ ಪರಂಪರೆಗೆ ಮಾಜಿ ಶಾಸಕ ಆರ್.ವಿ. ದೇವರಾಜ್ ಅವರ ಮಾರ್ಗದರ್ಶನ ಮತ್ತು ಸೇವಾ ಮನೋಭಾವವೇ ಪ್ರೇರಣೆಯಾಗಿದ್ದು, ಅವರು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಆಶಯ ಹಾಗೂ ಮಾರ್ಗದರ್ಶನವನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ ಎಂದು ಹೇಳಿದರು.
ದೇವರಾಜ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ಒಗ್ಗೂಡಿ ಈ ಸೇವಾ ಕಾರ್ಯವನ್ನು ಮುಂದುವರಿಸುವ ಉದ್ದೇಶ ಹೊಂದಿದ್ದೇವೆ. ಮುಂದಿನ ವರ್ಷಗಳಲ್ಲಿಯೂ ಕುಟುಂಬದ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಮತ್ತಷ್ಟು ವಿಸ್ತರಿಸಲಾಗುವುದು ಎಂದು ಡಾ. ಮಮತಾ ದೇವರಾಜ್ ತಿಳಿಸಿದರು.
ವಿನಾಯಕ ಭಕ್ತ ಮಂಡಳಿ ಕಾರ್ಯದರ್ಶಿ ರಾಜಶೇಖರ್ ಎನ್ ಮಾತನಾಡಿ, ಕಳೆದ 46 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಉತ್ಸವ ನಡೆಯುತ್ತಿದ್ದು, ಆರಂಭದಲ್ಲಿ ಮೂರು ದಿನಗಳಿಗೆ ಸೀಮಿತವಾಗಿದ್ದು, ಬಳಿಕ ಐದು ದಿನಗಳ ಆಚರಣೆಯಾಗಿ ಮುಂದುವರಿದಿದೆ .ಉತ್ಸವದ ಮೊದಲ ದಿನ ಮಹಿಳೆಯರಿಗೆ ಸೀರೆ, ಬಳೆ ಸೇರಿದಂತೆ ವಿವಿಧ ಉಡುಗೊರೆಗಳನ್ನು ವಿತರಿಸಲಾಗುತ್ತಿದೆ. ಈ ಬಾರಿ ವಿಶೇಷವಾಗಿ ಪುರುಷರಿಗೂ ಉಡುಗೊರೆ ನೀಡುವ ವ್ಯವಸ್ಥೆ ಮಾಡಲಾಗಿದ್ದು, ಸುಮಾರು 500 ಮಂದಿ ಅದನ್ನು ಸ್ವೀಕರಿಸಲಿದ್ದಾರೆ ಎಂದರು.
ಮಕ್ಕಳಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಪಾನಿಪುರಿ, ಪಾಪ್ಕಾರ್ನ್, ಚಿಪ್ಸ್, ಕೋಲಾ, ಐಸ್ಕ್ರೀಂ ಹಾಗೂ ಕ್ಯಾಂಡಿ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಈ ವೇಳೆ ವಿನಾಯಕ ಭಕ್ತ ಮಂಡಳಿಯ ಅಧ್ಯಕ್ಷ ಕೇವಲ್ ಚಂದ್ ಜೈನ್ ಸೇರಿದಂತೆ ಎಲ್ಲಾ ಪದಾಧಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.














