ಹಿರಿಯರ ಮಾರ್ಗದರ್ಶನ ಯುವ ಪೀಳಿಗೆಗೆ ಅಗತ್ಯ: ನಿವೃತ್ತ ನ್ಯಾಯಮೂರ್ತಿ ಆರ್.ಗುರುರಾಜನ್

WhatsApp
Telegram
Facebook
Twitter
LinkedIn

ಬೆಂಗಳೂರು: ಹಿರಿಯರ ಅನುಭವ ಹಾಗೂ ಮಾರ್ಗದರ್ಶನವನ್ನು ಯುವ ಪೀಳಿಗೆ ಸದ್ಬಳಕೆ ಮಾಡಿಕೊಂಡು ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಮತ್ತು ಎನ್.ಎ.ಎಲ್.ಎಸ್.ಎ (ಹಿರಿಯ ನಾಗರಿಕರಿಗೆ ಕಾನೂನು ಸೇವೆಗಳು) ಯೋಜನೆ-2016 ಅಧ್ಯಕ್ಷ ಆರ್.ಗುರುರಾಜನ್ ತಿಳಿಸಿದರು.

ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಬಳಿಯಿರುವ ಸುಧಾರಣಾ ಸಂಸ್ಥೆಗಳ ಸಂಕೀರ್ಣದ ಸಂಭ್ರಮ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ–2026 ಅಂಗವಾಗಿ ಹಾಮಿಕೊಳ್ಳಲಾಗಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಹಿರಿಯರ ಮಾರ್ಗದರ್ಶನ ಯುವಪೀಳಿಗೆಗೆ ದಾರಿದೀಪವಾಗಬೇಕು ಎಂದರು.

ಉತ್ತಮ ಶಿಕ್ಷಣ ಕೊಡಿಸಿ, ಭದ್ರ ಬದುಕು ಕಟ್ಟಿಕೊಳ್ಳಲು ನೆರವಾದ ತಂದೆ ತಾಯಿಯನ್ನು ಸಲಹುವುದು ಕರ್ತವ್ಯವಾಗಿದೆ. ತನ್ನ ಕುಟುಂಬದ ಏಳಿಗೆಗೆ ಹಗಲಿರುಳು ದುಡಿದು ಬದುಕಿನ ಸಂಧ್ಯಾಕಾಲದಲ್ಲಿರುವ ಹಿರಿಯರಿಗೆ ಪ್ರೀತಿ, ಗೌರವಗಳಿಂದ ನೋಡಿಕೊಳ್ಳಬೇಕು. ಹಿರಿಯ ನಾಗರಿಕರಿಗೆ ಉತ್ತಮ ಗುಣಮಟ್ಟದ ಜೀವನ ಒದಗಿಸಿಕೊಡುವ ಉದ್ದೇಶದಿಂದ ಹಿರಿಯ ನಾಗರಿಕರಿಗೆ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದೆ. ಸರ್ಕಾರದ ವತಿಯಿಂದ ನೀಡಲಾಗುತ್ತಿರುವ ಸೌಲಭ್ಯಗಳನ್ನು ಹಿರಿಯ ನಾಗರಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಹಿರಿಯ ನಾಗರಿಕರಿಗಾಗಿ ಸರ್ಕಾರ ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಸಂತಸ ತಂದಿದೆ. ಹಿರಿಯ ನಾಗರಿಕರು ಆರೋಗ್ಯಕರ ಮತ್ತು ಸಕ್ರಿಯ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ. ಇನ್ನಷ್ಟು ಬಡವರು, ಬಲಹೀನರನ್ನು ಗುರುತಿಸಿ ಸರ್ಕಾರ ಸಹಾಯ ಮಾಡಬೇಕು ಎಂದು ನ್ಯಾ ಆರ್.ಗುರುರಾಜನ್ ಹೇಳಿದರು.

ಈ ಸಂದರ್ಭದಲ್ಲಿ 60 ರಿಂದ 69 ವರ್ಷ, 70 ವರ್ಷ ಮೇಲ್ಪಟ್ಟವರು ಎಂಬ ಮೂರು ವಿಭಾಗಗಳಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಸ್ಪರ್ಧೆಗಳು ಏರ್ಪಡಿಸಲಾಗಿತ್ತು. ಮ್ಯೂಜಿಕಲ್ ಚೇರ್, ಬಿರುಸಿನ ನಡಿಗೆ, ಬಕೆಟ್ ನಲ್ಲಿ ಬಾಲ್ ಹಾಕುವ ಸ್ಪರ್ಧೆ ಹಾಗೂ ಗಾಯನ ಮತ್ತು ಏಕಾಭಿನಯ ಪಾತ್ರದಂತಹ ಸಾಂಸ್ಕೃತಿಕ ಸ್ಪರ್ಧೆಗಳು ಹಮ್ಮಿಕೊಳ್ಳಲಾಗಿತ್ತು. ಹಿರಿಯ ನಾಗರಿಕರು ಉತ್ಸಾಹದಿಂದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರು.

ಸಮಾರಂಭದಲ್ಲಿ ಜಿಲ್ಲಾ ನ್ಯಾಯಾಧೀಶ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್ ಶಶಿಧರ್ ಶೆಟ್ಟಿ , ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕ ಡಾ. ಮಹೇಶ್ ಬಾಬು ಎನ್, ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಪಿಎಂ ಬಾಲ ಸುಬ್ರಮಣಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗಣಪತಿ ಪ್ರಶಾಂತ್ ಎಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಸುಮಂಗಳ ಮಾಲಾಪುರ, ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ಕೃಷ್ಣಮೂರ್ತಿ ಕೆ ಸೇರಿದಂತೆ ಹಲವು ಗಣ್ಯರು, ಹಿರಿಯ ನಾಗರಿಕರು ಉಪಸ್ಥಿತರಿದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon